ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ಕೆಪಿಸಿಸಿ ಶನಿವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ನಾಯಕರ ಜತೆ ಕೈಗೆ ಕಪ್ಪುಪಟ್ಟಿ ಧರಿಸಿ ಅವರು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗದ ಅಕ್ರಮಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ನವೆಂಬರ್, ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತೇವೆ. ಈ ವೇಳೆ ಬ್ಯಾಲೆಟ್ ಪೇಪರ್ ಬಳಸುತ್ತೇವೆ. ಜತೆಗೆ ಬಲಿಷ್ಠ ಚುನಾವಣಾ ವ್ಯವಸ್ಥೆಗೆ ಹೋರಾಟ ಮಾಡಲಿದ್ದು, ಪ್ರತಿ ಹಳ್ಳಿಗೂ ಎಸ್‌ಐಆರ್ ವಿರೋಧಿ ಹೋರಾ ಕೊಂಡೊಯ್ಯುತ್ತೇವೆ ಎಂದರು.ಕೇಂದ್ರ ಸರ್ಕಾರ ಶೀಘ್ರ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ನಡೆಸಬೇಕು. ಈಗ ನಡೆದಿರುವ ಎಸ್‌ಐಆರ್ ರದ್ದುಗೊಳ್ಳಬೇಕು. ಹೊಸದಾಗಿ ಮರುಪರಿಶೀಲನೆ ನಡೆಯಬೇಕು. ಚುನಾವಣಾ ಆಯೋಗ ಹಾಗೂ ಬಿಜೆಪಿ ಮತಗಳ್ಳತನದ ಪಾಲುದಾರರಾಗಿದ್ದಾರೆ. ಬಡವರು ಮತ್ತು ಆಡಳಿತ ವ್ಯವಸ್ಥೆಯನ್ನು ಟೀಕಿಸುವ ಮತದಾರರನ್ನು ಗುರಿಯಾಗಿಸಿ ಅವರ ಮತ ಹಕ್ಕು ಕಸಿಯುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.
ಸಂವಿಧಾನ ದೇಶದ ಚುನಾವಣಾ ಆಯೋಗಕ್ಕೆ ನೀಡಿದ್ದ ಸ್ವಾಯತ್ತ ಅಧಿಕಾರದ ದುರ್ಬಳಕೆ ಆಗಿದೆ. ಇದಕ್ಕೆ ಸೂಕ್ತ ಸಾಕ್ಷಿಗಳೂ ಕಾಣುತ್ತಿವೆ. ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರಲ್ಲ, ಮುಖ್ಯ ಆಯ್ಕೆ ಆಯುಕ್ತರು. ಚೀಫ್ ಎಲೆಕ್ಷನ್ ಕಮಿಷನರ್ ಅಲ್ಲ, ಚೀಫ್ ಸೆಲೆಕ್ಷನ್ ಕಮಿಷನರ್ ಆಗಿದ್ದೀರಿ. ಜನ ನಿಮ್ಮ ಅನ್ಯಾಯಗಳ ವಿರುದ್ಧ ದಂಗೆ ಏಳುತ್ತಾರೆ ಎಂದು ಶಿವಕುಮಾರ್ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮತಗಳ್ಳತನ ಹಾಗೂ ಮತದಾರರ ಖರೀದಿ ಮೂಲಕ ಅಧಿಕಾರ ಪಡೆದಿರುವ ಮೋದಿಯವರಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ಹಿಂಬಾಗಿಲಿನಿಂದ ಅಧಿಕಾರ ಹಿಡಿದಿರುವ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗ ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಆದರೆ, ಕೇಂದ್ರ ಸರ್ಕಾರದ ತಾಳಕ್ಕೆ ಕುಣಿಯುತ್ತಿದೆ. ಹೀಗಾಗಿ ಆಯೋಗದ ಸದಸ್ಯರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅವರ ವಿರುದ್ಧ ಕ್ರಮ ಜರುಗಿಸಲು ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದರು.
ಜ್ಞಾನೇಶ್ ಪ್ರತಿಕೃತಿ ದಹಿಸಿ ಆಕ್ರೋಶ:
ಈ ವೇಳೆ ಮಾತನಾಡಿದ ಹರಿಪ್ರಸಾದ್, ಬಿಜೆಪಿಯು ಆಯ್ದ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡುತ್ತಿದೆ. ತನ್ಮೂಲಕ ಜೆನ್-ಝೀ ಮತದಾರರ ಹಕ್ಕು ಕಸಿಯುತ್ತಿದೆ. ಇದಕ್ಕೆ ಮೋದಿ ಹಾಗೂ ಅಮಿತ್ ಶಾ ಅವರು ಗೌಪ್ಯವಾಗಿ ಚುನಾವಣಾ ಆಯೋಗಕ್ಕೆ ಸೂಚನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವರಾದ ರಾಮಲಿಂಗಾರೆಡ್ಡಿ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಹಲವರು ಹಾಜರಿದ್ದರು.