ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೊಳಲು ಗ್ರಾಮದ ಗ್ರಾಪಂ ಉಪಾಧ್ಯಕ್ಷರಾಗಿ ಎಚ್.ಎಂ.ನಾರಾಯಣ ಆಯ್ಕೆಯಾದರು.13 ಜನ ಸದಸ್ಯ ಬಲದ ಗ್ರಾಪಂನಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಎಚ್.ಕೆ. ಜಯಪ್ರಕಾಶ್(ಗೋಪಿ) ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಎಚ್.ಎಂ.ನಾರಾಯಣ ಹಾಗೂ ಸೌಭಾಗ್ಯ ನಾಮಪತ್ರ ಸಲ್ಲಿಸಿದ್ದರು.
ನಾರಾಯಣ ಅವರಿಗೆ 7 ಮತ, ಸೌಭಾಗ್ಯರಿಗೆ 6 ಮತ ಲಭಿಸಿತು. ಅಂತಿಮವಾಗಿ 1 ಮತದಿಂದ ಎಚ್.ಎಂ.ನಾರಾಯಣ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀನಿವಾಸ್ ಘೋಷಿಸಿದರು.ನೂತನ ಉಪಾಧ್ಯಕ್ಷ ಎಚ್.ಎಂ.ನಾರಾಯಣ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಮಾರ್ಗದರ್ಶನ, ಗ್ರಾಪಂ ಸದಸ್ಯರ ಹಾಗೂ ಗ್ರಾಮದ ಮುಖಂಡರ ಸಹಕಾರದಿಂದ ಗೆಲುವು ಸಾಧ್ಯವಾಯಿತು. ಗ್ರಾಮದ ಅಭಿವೃದ್ಧಿ ಹಾಗೂ ಕುಡಿಯುವ ನೀರು, ಚರಂಡಿ, ಬೀದಿದೀಪ, ಶೌಚಾಲಯ, ಗ್ರಾಮದ ಸ್ವಚ್ಛತೆಗೆ ಹಾಗೂ ಇನ್ನಿತರೆ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಅರ್ಪಿತಾ ಎಂ.ಕೆ., ಪಿಡಿಒ ಸಂತೋಷ್ ಬಿ.ಎಸ್. ಗ್ರಾಮದ ಮುಖಂಡರಾದ ಜಟ್ಟಿ ಕುಮಾರ್, ಪಟೇಲ್ ರಾಮು, ನಿಂಗೇಗೌಡ, ಚೇತನ್, ಸಂತೋಷ್, ಶ್ಯಾಮ, ಚಂದನ್, ಸೂರಿ, ಮಂಜು, ಯಜಮಾನ್ ಕುಮಾರ್, ಶಿವಕುಮಾರ್, ಕೃಷ್ಣ ,ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗದವರು ನೂತನ ಉಪಾಧ್ಯಕ್ಷರನ್ನು ಸನ್ಮಾನಿಸಿ, ಅಭಿನಂದಿಸಿದರು.ನಾಳೆ ಉಚಿತ ಆರೋಗ್ಯ ತಪಾಸಣಾ ಶಿಬಿರಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದ ಶ್ರೀವಿಶ್ವೇಶ್ವರಯ್ಯ ಗ್ರಾಮಾಂತರ ಪ್ರೌಢಶಾಲೆ ಆವರಣದಲ್ಲಿ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ, ಜಿ.ಬೊಮ್ಮನಹಳ್ಳಿಯ ಮಹಾನಾಯಕ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಭಾಗಿತ್ವದಲ್ಲಿ ಆ.14ರ ಬುಧವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶಿಬಿರವನ್ನು ಉದ್ಘಾಟಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿವೃತ್ತ ನಿರ್ದೇಶಕಿ ಡಾ.ಬಿ.ಎಸ್.ಪುಷ್ಪಲತಾ ಅಧ್ಯಕ್ಷತೆ ವಹಿಸುವರು. ಜಿ.ಬೊಮ್ಮನಹಳ್ಳಿಯ ಮಹಾನಾಯಕ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ.ಅಪ್ಪಾಜಿ, ಮಾಜಿ ವಿಧಾನಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ, ಉದ್ಯಮಿ ಸ್ಟಾರ್ ಚಂದ್ರು, ಆದಿಚುಂಚನಗಿರಿಯ ಹೇಮಗಿರಿ ಮತ್ತು ಧಾರವಾಡ ಶಾಖಾ ಮಠದ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ, ಸಮಾಜ ಸೇವಕ ಮಾವಿನಕೆರೆ ಸುರೇಶ್, ಫೈಟರ್‌ರವಿ, ಭೀಮನಹಳ್ಳಿ ಗ್ರಾಪಂ ಉಪಾಧ್ಯಕ್ಷ ಬಿ.ಸಿ.ಗಿರೀಶ್ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಆಸ್ಪತ್ರೆಯ ಪ್ರಾಂಶುಪಾಲರು, ವಿವಿಧ ವಿಭಾಗಗಳ ಅಧಿಕಾರಿಗಳು ಪಾಲ್ಗೊಳ್ಳುವರು.ಶಿಬಿರದಲ್ಲಿ ಹೃದ್ರೋಗ, ನರರೋಗ, ಮಧುಮೇಹ, ಗರ್ಭಿಣಿ ಮತ್ತು ಸ್ತ್ರೀ ರೋಗ, ಕೀಲು ಮತ್ತು ಮೂಳೆ ತಜ್ಞರು ಸೇರಿದಂತೆ ವಿವಿಧ 15ಕ್ಕೂ ಹೆಚ್ಚು ವಿಭಾಗಗಳ ತಜ್ಞ ವೈದ್ಯರು ಪಾಲ್ಗೊಂಡು ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ಮತ್ತು ಸಲಹೆ ನೀಡುವರು. ಹಾಗಾಗಿ ಜಿ.ಬೊಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸಿ.ಗಿರೀಶ್ ಕೋರಿದ್ದಾರೆ.