ಚನ್ನಪಟ್ಟಣ: ಸಿದ್ದರಾಮಯ್ಯ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದಂತೆ ಸ್ವಯಂ ಪ್ರೇರಿತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನುಡಿದಂತೆ ನಡೆದು ಹಾಲುಮತಸ್ಥರು ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದು ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಯಲಿಯೂರು ನಾಗಣ್ಣ ಆಗ್ರಹಿಸಿದರು.
ತಾಲೂಕು ಕುರುಬ ಸಂಘದ ಗೌರವಾಧ್ಯಕ್ಷ ಕೆ.ಬಿ.ಬೀರಯ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡಿದ್ದರೂ ಇಂದು ರಾಜೀನಾಮೆ ನೀಡಿದ್ದಾರೆ ಎಂದರೆ ಅದಕ್ಕೆ ಹೈಕಮಾಂಡ್ ಮೇಲಿನ ಗೌರವ ಕಾರಣ. ಈ ನಿಟ್ಟಿನಲ್ಲಿ ವಿಪಕ್ಷಗಳಿಗೆ ರಾಜಕೀಯ ಆಹಾರವಾಗದಂತೆ ನುಡಿದಂತೆ ನಡೆದು ರಾಜೀನಾಮೆ ನೀಡಿರುವ ಸಿದ್ದರಾಯಮ್ಮ ಅವರನ್ನು ಉನ್ನತ ಸ್ಥಾನ ನೀಡಿ ಉಳಿಸಿಕೊಳ್ಳುವ ಜೊತೆಗೆ ಅವರ ಮಗ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಸ್ಥಾನ ನೀಡಬೇಕು. ಜೊತೆಗೆ ಸಮುದಾಯದ ಮತ್ತೋರ್ವ ಹಿರಿಯ ನಾಯಕರಾದ ಎಚ್.ಎಂ. ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು. ನಾವೆಲ್ಲಾ ಹಿಂದೆ ಸಾತನೂರು ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಬೆಳೆಸಿದ್ದೇವೆ. ಇಂದು ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಿರುವುದು ಸಂತಸವಾಗಿದೆ. ಅವರು ಸಹ ಜನಪರ ಆಡಳಿತ ನೀಡಲಿ ಎಂದು ಶುಭಕೋರಿದರು.
ತಾಲೂಕು ಕುರುಬ ಸಂಘದ ಅಧ್ಯಕ್ಷರಾದ ಎಚ್.ಬಿ. ರಾಮಣ್ಣ ಮಾತನಾಡಿ, ೨೦೦೬ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಸಿದ್ದರಾಮಯ್ಯನವರು ರಾಜ್ಯ ಸುತ್ತಿ ಪಕ್ಷ ಸಂಘಟನೆ ಮಾಡಿ ೨೦೧೩ ರಲ್ಲಿ ಹಾಗೂ ೨೦೨೩ ರಲ್ಲಿ ಕಾಂಗ್ರೆಸ್ ಪಕ್ಷ ಸ್ವತಂತ್ರವಾಗಿ ಸರ್ಕಾರ ತರಲು ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯಅವರನ್ನು ಮುಂದೆ ಗೌರವಯುತವಾಗಿ ನಡೆಸಿಕೊಂಡು ಉತ್ತಮ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.ಸಂಘದ ನಿರ್ದೇಶಕ ಟಾಯ್ಸ್ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ನವಲೇಶ್, ತಾಲೂಕು ಕುರುಬ ಸಂಘದ ನಿರ್ದೇಶಕರಾದ ಮಾದೇಶ್, ಶಿವಬೀರಯ್ಯ, ಹುಚ್ಚಯ್ಯನದೊಡ್ಡಿ ಶಿವಣ್ಣ, ಉಮೇಶ್, ಶ್ರೀನಿವಾಸ್, ರೇವಣ್ಣ, ಅಮ್ಮಳ್ಳಿದೊಡ್ಡಿ ಶಿವಲಿಂಗಯ್ಯ, ಜಯಲಕ್ಷ್ಮಿ ಇತರರಿದ್ದರು.
ಚನ್ನಪಟ್ಟಣದಲ್ಲಿ ಕುರುಬರ ಸಂಘದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.