- ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು-ಕಾರ್ಯದರ್ಶಿಗಳ ಸಭೆಯಲ್ಲಿ ವಿದ್ಯಾಧರ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ದಾವಣಗೆರೆ ತಾಲೂಕು ಎಚ್.ಕಲ್ಪನಹಳ್ಳಿಯಲ್ಲಿ ಈ ಹಿಂದೆ 14 ಎಕರೆ ಜಮೀನು ಮಂಜೂರಾಗಿದ್ದು, ಅಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ₹280 ಕೋಟಿ ವೆಚ್ಚದ ಮೆಗಾ ಡೇರಿಯ ನೂತನ ಕಟ್ಟಡಕ್ಕೆ ಶೀಘ್ರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ (ಶಿಮುಲ್) ವಿದ್ಯಾಧರ ಹೇಳಿದರು.ಶುಕ್ರವಾರ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ತರಳಬಾಳು ಸಮುದಾಯ ಭವನದಲ್ಲಿ ಹೊನ್ನಾಳಿ, ನ್ಯಾಮತಿ ಮತ್ತು ಚನ್ನಗಿರಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ವಿಭಾಗೀಯ ಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಮುಲ್ ಒಕ್ಕೂಟದ ನಿರ್ದೇಶಕ ಎಚ್.ಕೆ. ಬಸಪ್ಪ ಮಾತನಾಡಿ, ಮೆಗಾ ಡೈರಿ ನಿರ್ಮಾಣಕ್ಕೆ ₹280 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದೆ. ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯು ಟರ್ನ್ ಕೀ ಆಧಾರದ ಮೇಲೆ ಇದನ್ನು ನಿರ್ಮಿಸಲಾಗುವುದು. ಇದರಲ್ಲಿ ₹84 ಕೋಟಿಯಷ್ಟು ಹಣ ನಮ್ಮ ಒಕ್ಕೂಟದಿಂದ ಸ್ವಂತವಾಗಿ ಬಳಸುತ್ತಿದ್ದೇವೆ. ಉಳಿದ ₹196 ಕೋಟಿ ಅನುದಾನ ನಾವು ಎನ್‌ಡಿಡಿಬಿ ವತಿಯಿಂದ ಸಾಲ ಪಡೆಯುತ್ತಿದ್ದೇವೆ ಎಂದರು.
ಶಿಮುಲ್ ನಿರ್ದೇಶಕ ಬಿ.ಜಿ. ಬಸವರಾಜಪ್ಪ ಮಾತನಾಡಿ, ಸಭೆಯಲ್ಲಿ ಚರ್ಚೆಗೊಳಪಟ್ಟ ವಿಷಯಗಳನ್ನು, ಸಲಹೆ ಸೂಚನೆಗಳನ್ನು ಸ್ವೀಕರಿಸಿ ಸರಿಪಡಿಸಿಕೊಳ್ಳಲಾಗುವುದು. ಹೈನೋದ್ಯಮವು ರೈತರಿಗೆ ನಿರಂತರ ಮಾರುಕಟ್ಟೆ ನೀಡುವ ಕ್ಷೇತ್ರವಾಗಿದೆ. ಆದ್ದರಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಹಾಲಿನ ಶೇಖರಣೆ, ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದ ಅವರು, ಹಾಲು ಉತ್ಪಾದಕರ ಕಲ್ಯಾಣ ಟ್ರಸ್ಟ್‌ನಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಶಿಮುಲ್ ವಿಸ್ತರಣಾಧಿಕಾರಿ ಚನ್ನಗಿರಿಯ ಕೆ.ಕರಿಯಮ್ಮ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಡಾ. ಸಂಜಯ್ ನಿರೂಪಿಸಿದರು. ಗುಂಡಪ್ಪ ಯರಗಟ್ಟಿ ವಂದನೆ ಸಲ್ಲಿಸಿದರು. ಸಮಾರಂಭದಲ್ಲಿ ಹೊನ್ನಾಳಿ, ನ್ಯಾಮತಿ ಹಾಗೂ ಚನ್ನಗಿರಿಯ ಹಾಲು ಒಕ್ಕೂಟದ ಸಾವಿರಾರು ಸದಸ್ಯರು ಭಾಗವಹಿಸಿದ್ದರು.
-12ಎಚ್.ಎಲ್.ಐ2.ಜೆಪಿಜಿ: