ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಎಚ್. ವಿಶ್ವನಾಥ್ ಸ್ವಾಗತ

KannadaprabhaNewsNetwork |  
Published : Aug 31, 2025, 01:07 AM IST
7 | Kannada Prabha

ಸಾರಾಂಶ

ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವಿಗೆ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸ್ವಾಗತಿಸಿದರು.

 ಮೈಸೂರು :  ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವಿಗೆ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸ್ವಾಗತಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್ ಅವರ ಎದೆಯ ಹಣತೆ ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬಾನು ಮುಷ್ತಾಕ್ ಅವರು ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಬಾನು ಮುಷ್ತಾಕ್ ಕೃತಿಯನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದ ದೀಪಾ ಬಸ್ತಿ ಅವರಿಗೂ ಬೂಕರ್ ಪ್ರಶಸ್ತಿ ನೀಡಲಾಗಿದೆ. ಇಬ್ಬರಿಗೂ ಸಮಾನವಾಗಿ ಬೂಕರ್ ಪ್ರಶಸ್ತಿ ನೀಡಲಾಗಿದೆ ಎಂದರು.

ಬಾನು ಮುಷ್ತಾಕ್ ಬಹಳ ಸಾಧನೆ ಮಾಡಿದ್ದಾರೆ. ರೈತ ಚಳವಳಿ, ಭಾಷಾ ಚಳವಳಿ, ವಕೀಲ ವೃತ್ತಿ ಸೇರಿದಂತೆ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. ಆದರೆ, ಕೆಲವರು ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಮ್ಮದು ಬಹುತ್ವದ ದೇಶವಾಗಿದೆ ಎಂದು ಅವರು ಹೇಳಿದರು.

ಮಂತ್ರಿಗಳಾಗಿದ್ದವರೂ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಪ್ರತಾಪ್ ಸಿಂಹ ಪ್ರತಾಪಿಯಂತೆ ಮಾತನಾಡುತ್ತಿದ್ದಾರೆ. ಪಾರ್ಲಿಮೆಂಟ್ ಮೆಂಬರ್ ಆಗಿದ್ದವರು ಮಹಿಳಾ ಸಾಧಕಿಯ ವಿರುದ್ಧ ಮಾತನಾಡಿರುವುದು ಸರಿಯಲ್ಲ. ಈ ಮೂಲಕ ಮೈಸೂರನ್ನು ಏನು ಮಾಡಬೇಕು ಎಂದುಕೊಂಡಿದ್ದೀರಿ ಎಂದು ಅವರು ಪ್ರಶ್ನಿಸಿದರು.

ದಸರಾ ಎಂದರೆ ಕಡಲೆಕಾಯಿ ಮಾರುವವನಿಂದ ಹಿಡಿದು ಸಿಹಿ ಮಾರಾಟ ಮಾಡುವವನವರೆಗೆ ಎಲ್ಲಾ ವರ್ಗದ ಜನರಿಗೆ, ಪ್ರವಾಸೋದ್ಯಮಕ್ಕೆ ಆಸರೆ ನೀಡುತ್ತದೆ. ಆರ್. ಅಶೋಕ್ ಮಾತು ಶೇಮ್ ಶೇಮ್. ವಿರೋಧ ಪಕ್ಷದ ನಾಯಕ‌ನಾಗಿದ್ದುಕೊಂಡು ಜನಾಂಗೀಯ ದ್ವೇಷ ಹಂಚುವ ಮಾತನಾಡಬಾರದು ಎಂದರು.

ಸಿಎಂ ಸ್ಪಷ್ಟನೆ ನೀಡಲಿ:

ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಲು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಬೇಕು. ಸರ್ಕಾರ ಆಹ್ವಾನಿಸಿರುವ ಬಗ್ಗೆ ಮಾತನಾಡಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಮಾತನಾಡಬೇಕು ಎಂದು ಅವರು ಆಗ್ರಹಿಸಿದರು.

ಬಾನು ಮುಷ್ತಾಕ್ ಜೊತೆಗೆ ದೀಪಾ ಬಸ್ತಿ ಅವರನ್ನು ಕೂಡ ಕರೆದು ಅರಮನೆ ಮುಂಭಾಗದಲ್ಲಿ ಅಭಿನಂದಿಸಬೇಕು. ಬಾನು ಮುಷ್ತಾಕ್ ದಸರಾ ಉದ್ಘಾಟಿಸಿದ ಬಳಿಕ ಅರಮನೆ ಆವರಣದಲ್ಲಿ ಇಬ್ಬರನ್ನೂ ಸನ್ಮಾನಿಸಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಬಾನು ಮುಷ್ತಾಕ್ ಚಾಮುಂಡಿಬೆಟ್ಟ ಹತ್ತಲು ಬಿಡುವುದಿಲ್ಲ ಎಂದಿದ್ದಾರೆ. ಚಾಮುಂಡಿಬೆಟ್ಟ ಯಾವುದೇ ಒಂದು ಜಾತಿ, ಧರ್ಮದ ಆಸ್ತಿಯಲ್ಲ. ಚಾಮುಂಡಿಬೆಟ್ಟ ಸರ್ಕಾರದ ಆಸ್ತಿಯಾಗಿದೆ ಎಂದು ಅವರು ತಿರುಗೇಟು ನೀಡಿದರು.

ಚಾಮುಂಡಿಬೆಟ್ಟ ‌ಹಿಂದೂಗಳಿಗೆ ಸೇರಿದ್ದಲ್ಲ ಎನ್ನುವುದು ತಪ್ಪು, ಅದೇ ರೀತಿ ಹಿಂದೂಗಳಿಗೆ ಸೇರಿದ್ದು ಎನ್ನುವುದು ಸಹ ತಪ್ಪು. ಪೈಪೋಟಿಯ ಮೇಲೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು‌ ಎಂದು ಅವರು ಆಗ್ರಹಿಸಿದರು.

‘ಎರಡು ವರ್ಷ ಹಿಂದೆ ಬಾನು ಮುಷ್ತಾಕ್ ಅವರು ಯಾವ ಅರ್ಥದಲ್ಲಿ ಕನ್ನಡ ಕುರಿತಂತೆ ಹೇಳಿಕೆ ನೀಡಿದ್ದರು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ, ಮುಖ್ಯಮಂತ್ರಿಗಳು ಮೌನ ಮುರಿದು ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಬೇಕು. ದಸರಾ ಹಿಂದೂಗಳ ಹಬ್ಬವೂ ಅಲ್ಲ, ಮುಸ್ಲಿಮರದೂ ಅಲ್ಲ, ಅದೊಂದು ನಾಡಹಬ್ಬ ಎಂಬುದನ್ನು ಯಾರೂ ಮರೆಯಬಾರದು.’

- ಎಚ್. ವಿಶ್ವನಾಥ್, ವಿಧಾನಪರಿಷತ್ ಸದಸ್ಯ

PREV
Read more Articles on

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?