ರಾಘು ಕಾಕರಮಠ
ಅಂತರ್ಜಾತಿ ವಿವಾಹವಾದವರಿಗೆ ಸರ್ಕಾರದಿಂದ ಸಿಗುವ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿ ಎರಡ್ಮೂರು ವರ್ಷ ಕಳೆದರೂ ಹಣ ಕೈ ಸೇರದಿರುವುದು ದಂಪತಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ನೀಡಿ, ಇಲಾಖೆಯ ಅನುದಾನಕ್ಕಾಗಿ ಕಾಯುತ್ತಿರುವ ದಂಪತಿಗಳು ಇದೀಗ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯತ್ತ ಪದೇ ಪದೇ ಅಲೆಯುವಂತಾಗಿದೆ.
ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿವಾಹಿತ ವಧು- ವರರಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಈ ಯೋಜನೆಯಡಿ ಅರ್ಹ ದಂಪತಿಗಳು ಸಮಾಜ ಕಲ್ಯಾಣ ಇಲಾಖೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಆದರೆ, ಅರ್ಜಿ ಸಲ್ಲಿಸಿದ ಬಳಿಕವೂ ಸಕಾಲದಲ್ಲಿ ಹಣ ಬಿಡುಗಡೆಯಾಗದಿರುವುದರಿಂದ ಸರ್ಕಾರದ ಪ್ರೋತ್ಸಾಹ ಯಾವಾಗ ಕೈ ಸೇರುತ್ತದೆ? ಎಂಬ ನಿರೀಕ್ಷೆಯಲ್ಲೇ ದಿನದೂಡಬೇಕಾಗಿದೆ.ಇಲಾಖೆಯ ಸುತ್ತಾಟ: ಹಿಂದೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಅದೇ ವರ್ಷದಲ್ಲಿ ಹಣ ಬಿಡುಗಡೆಯಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ಅರ್ಜಿ ಸಲ್ಲಿಸಿ ಎರಡು- ಮೂರು ವರ್ಷ ಕಳೆದರೂ ಅನುದಾನ ದೊರೆಯದಿರುವ ಪ್ರಕರಣಗಳು ಕಂಡುಬರುತ್ತಿವೆ. ಮದುವೆಯಾಗಿ ಹೊಸ ಬದುಕು ಆರಂಭಿಸಿರುವ ದಂಪತಿಗಳು ಸರ್ಕಾರದ ಪ್ರೋತ್ಸಾಹಧನಕ್ಕಾಗಿ ಕಾಯಬೇಕಾಗಿದೆ. ಹಣ ಬಿಡುಗಡೆಯಾಗದ ಹಿನ್ನೆಲೆ ಅರ್ಜಿಯ ಸ್ಥಿತಿಗತಿ ತಿಳಿದುಕೊಳ್ಳಲು ಇಲಾಖೆಯ ಕಚೇರಿಗೆ ತೆರಳಿ ವಿಚಾರಿಸುವುದು ಅನಿವಾರ್ಯವಾಗಿದೆ.ಅನುದಾನ ಕೊರತೆಯೇ?: ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ನಿಗದಿತ ಅವಧಿಯಲ್ಲೇ ಪ್ರೋತ್ಸಾಹಧನ ದೊರೆಯುತ್ತಿತ್ತು. ಆದರೆ, ಇದೀಗ ಎರಡ್ಮೂರು ವರ್ಷಗಳಾದರೂ ಹಣ ಬಿಡುಗಡೆಯಾಗದಿರುವುದರಿಂದ ಅರ್ಜಿ ಸಲ್ಲಿಸಿರುವ ದಂಪತಿಗಳಲ್ಲಿ ಅಸಮಾಧಾನ ಹೆಚ್ಚಾಗಿದೆ. ಸರ್ಕಾರ ಅಂತರ್ಜಾತಿ ವಿವಾಹವನ್ನು ಉತ್ತೇಜಿಸುವುದಾಗಿ ಹೇಳುತ್ತಿರುವಾಗ, ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸಕಾಲದಲ್ಲಿ ಹಣ ಬಿಡುಗಡೆ ಮಾಡಬೇಕು ಎಂಬುದು ಫಲಾನುಭವಿಗಳ ಒತ್ತಾಯವಾಗಿದೆ.ಎಷ್ಟು ಪ್ರೋತ್ಸಾಹಧನ?: ಪರಿಶಿಷ್ಟ ಜಾತಿಯ ಅಥವಾ ಪರಿಶಿಷ್ಟ ಪಂಗಡದ ವ್ಯಕ್ತಿಯನ್ನು ಇತರ ಜಾತಿಯ ವ್ಯಕ್ತಿ ವಿವಾಹವಾದ ಸಂದರ್ಭದಲ್ಲಿ ಅರ್ಹ ದಂಪತಿಗಳಿಗೆ ಸರ್ಕಾರ ಪ್ರೋತ್ಸಾಹಧನ ನೀಡುತ್ತದೆ. ಪರಿಶಿಷ್ಟ ಜಾತಿಯ ವರನಾದಲ್ಲಿ ₹2.50 ಲಕ್ಷ ಹಾಗೂ ಪರಿಶಿಷ್ಟ ಜಾತಿಯ ವಧುವಾದಲ್ಲಿ ₹3.50 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತದೆ.