ಗದಗ: ವಿಶ್ವ ಹೃದಯ ದಿನವನ್ನು ಪರಿಣಾಮಕಾರಿಯಾಗಿ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಫಿಜಿಶೀಯನ್ ಡಾ. ಸುನೀಲ ಹಬೀಬ ತಿಳಿಸಿದರು.
ಆಧುನಿಕ ಜೀವನ ಶೈಲಿ, ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಕಾರಣಗಳಿಂದಾಗಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೃದ್ರೋಗದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯುವ ಜನರೆ ಹೆಚ್ಚಿನ ಸಂಖ್ಯೆಯಲ್ಲಿ ಹಠಾತ್ತಾಗಿ ಹೃದಯಾಘಾತ, ಹೃದಯ ಸ್ತಂಭನಕ್ಕೀಡಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲಾ ಎಪಿಡೆಮಿಯೋಲಾಜಿಸ್ಟ್ ಡಾ. ಪ್ರವೀಣ ನಿಡಗುಂದಿ ಮಾತನಾಡಿ, ರೇಬಿಸ್ ಒಂದು ವೈರಾಣುವಿನಿಂದ ಹರಡುವ ಮಾರಕ ಖಾಯಿಲೆ ಇದ್ದು, ಇದರ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ರೋಗವನ್ನು ಸೋಲಿಸುವಲ್ಲಿ ಪ್ರಗತಿಯನ್ನು ಸಾಧಿಸಲು ಈ ದಿನವನ್ನು ವಾರ್ಷಿಕವಾಗಿ ಆಚರಿಸಲಾಗುತ್ತದೆ ಎಂದರು.ರೇಬಿಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಸೂಕ್ಷ್ಮ ಜೀವ ಶಾಸ್ತ್ರಜ್ಞ ಲೂಯಿಸ್ ಪಾಶ್ಚರ್ ಅವರ ಮರಣದ ವಾರ್ಷಿಕೋತ್ಸವವನ್ನು ವಿಶ್ವ ರೇಬಿಸ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷದಲ್ಲಿ ಒಗ್ಗಟ್ಟಿನ ಹೆಜ್ಜೆ- ರೇಬಿಸ್ ಮುಕ್ತ ಸಮಾಜದತ್ತ ಎಂಬ ಘೋಷವಾಕ್ಯದೊಂದಿಗೆ ವಿಶ್ವ ರೇಬಿಸ್ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇದೊಂದು ಮಾರಕ ರೋಗವಾಗಿದ್ದು, ಇದನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ವರ್ಷಕ್ಕೆ ಸುಮಾರು 6000 ಸಾವುಗಳು ಭಾರತದಲ್ಲಿ ರೇಬಿಸ್‌ನಿಂದ ಆಗುತ್ತಿವೆ. ಕಾರಣ ರೇಬಿಸ್ ಲಸಿಕೆಯ ಬಗ್ಗೆ ಭಯ ಬಿಟ್ಟು ಎಲ್ಲರೂ ಹಾಕಿಸಿಕೊಳ್ಳಬಹುದು ಎಂದು ತಿಳಿಸಿದರು.
ಉಪ ವಲಯ ಅರಣ್ಯಾಧಿಕಾರಿ ಪವನ ತಕ್ಕೇದ ಮಾತನಾಡಿದರು. ಕಾರ್ಯಕ್ರಮದ ನಂತರ ಮೃಗಾಲಯದ ಎಲ್ಲ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಕ್ತದೊತ್ತಡ, ಮಧುಮೇಹ, ಈಸಿಜಿ ಪರೀಕ್ಷೆ, ನೇತ್ರ ಪರೀಕ್ಷೆ, ಕಫ ಪರೀಕ್ಷೆ, ಲೆಪ್ಟೋಸ್ಪೆರೋಸಿಸ್, ಬ್ರುಸ್ಸೆಲಾ ಪರೀಕ್ಷೆ ಹಾಗೂ ರೇಬಿಸ್ ಲಸಿಕಾಕರಣವನ್ನು ಆಯೋಜಿಸಲಾಗಿತ್ತು.