ಹರಪನಹಳ್ಳಿ: ತಾಲೂಕಿನ ಅರಸಿಕೇರಿ -ಉಚ್ಚಂಗಿದುರ್ಗ ರಸ್ತೆ ತಗ್ಗು, ಗುಂಡಿಗಳಿಂದ ವಿಪರೀತ ಹಾಳಾಗಿದೆ. ವಾಹನ ಸವಾರರು ಜೀವ ಹಿಡಿದುಕೊಂಡು ಸಂಚರಿಸಬೇಕಿದೆ. ರಸ್ತೆ ಅಭಿವೃದ್ಧಿ ಮಾಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಈ ಭಾಗದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಳೆಗಾಲವಾಗಿರುವುದರಿಂದ ರಸ್ತೆ ಮಧ್ಯೆ ಇರುವ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರ ಸಂಚಾರಕ್ಕೆ ಇನ್ನಷ್ಟು ತೊಂದರೆಯಾಗಿದೆ. ತಾಲೂಕಿನ ಐತಿಹಾಸಿಕ ಹಿನ್ನೆಲೆಯ ಅರಸೀಕೇರಿ ಗ್ರಾಮದಲ್ಲಿ ಪಂಚಗಣಾಧೀಶ್ವರರ ಪೈಕಿ ಶ್ರೀ ಕೋಲಾಶಾಂತೇಶ್ವರ ಮಠವಿದೆ. ರಾಜ್ಯದ ನಾಡಿನ ಮೂಲೆ ಮೂಲೆಗಳಿಂದ ಹುಣ್ಣಿಮೆ, ಅಮಾವಾಸ್ಯೆ, ಹಬ್ಬ, ಜಾತ್ರೆಗಳಲ್ಲಿ ಲಕ್ಷಾಂತರ ಭಕ್ತರ ಸಮಾಗಮಾಗೊಳ್ಳುವ ಸ್ಥಳ ಉಚ್ಚಂಗಿದುರ್ಗವಾಗಿದೆ. ಇಲ್ಲಿ ಉಚ್ಚಂಗೆಮ್ಮದೇವಿ ನೆಲೆಸಿದ್ದು, ಇಲ್ಲಿಗೆ ನಿತ್ಯವೂ ಭಕ್ತರ, ಸಾರ್ವಜನಿಕರ, ಪ್ರಯಾಣಿಕರ ಓಡಾಟ ಇದ್ದೇ ಇರುತ್ತದೆ. ಆದರೆ ರಸ್ತೆಗಳು ಅಲ್ಲಲ್ಲಿ ಹದಗೆಟ್ಟು ವಾಹನಗಳ ಓಡಿಸಲು ಸಾಕಷ್ಟು ಅಡ್ಡಿಯಾಗುತ್ತಿದೆ.
ಸೇತುವೆ ಕುಸಿತ:ಅರಸಿಕೇರಿ-ಉಚ್ಚಂಗಿದುರ್ಗ ಮಧ್ಯದ ಸೇತುವೆ ಕುಸಿದಿದೆ. ಅದರಲ್ಲಿಯೇ ವಾಹನ ಸವಾರರು ಉಸಿರು ಬಿಗಿ ಹಿಡಿದು ಸಂಚರಿಸುತ್ತಾರೆ. ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಸ್ಥಿತಿ ಇಲ್ಲಿ ಇದೆ. ಇಲ್ಲಿ ಕುಸಿದಿರುವ ಸೇತುವೆ ಕೂಡಲೇ ದುರಸ್ತಿ ಕೈಗೊಳ್ಳಬೇಕಿದೆ.
ಸಿಪಿಐ ಹಾಗೂ ದಲಿತ ಸಂಘಟನೆಗಳು ಒಳಗೊಂಡು ವಿವಿಧ ಸಂಘಟನೆಗಳು ಮತ್ತು ವಿದ್ಯಾರ್ಥಿಗಳಿಂದ ರಸ್ತೆ ಅಭಿವೃದ್ಧಿ ಕೈಗೊಳ್ಳುವಂತೆ ವಿವಿಧ ರೀತಿಯಲ್ಲಿ ಅನೇಕ ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.
ಅರಸಿಕೇರಿ-ಉಚ್ಚಂಗಿದುರ್ಗದ ರಸ್ತೆ ತೀರಾ ಹದಗೆಟ್ಟಿದೆ. ತ್ವರಿತವಾಗಿ ರಸ್ತೆ ಅಭಿವೃದ್ಧಿಯಾಗಬೇಕು. ಇದೇ ರಸ್ತೆಯಲ್ಲಿ ಕುಸಿದಿರುವ ಸೇತುವೆಯನ್ನು ಅವಘಡ ಸಂಭವಿಸುವ ಮೊದಲು ಕೂಡಲೇ ಸಂಬಂಧಪಟ್ಟವರು ದುರಸ್ತಿ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ.