ಕನ್ನಡಪ್ರಭ ವಾರ್ತೆ ಹನೂರು
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ಹಡಪದ ಅಪ್ಪಣ್ಣ ಜಯಂತಿ ಇತಿಹಾಸದ ಪುಟದಲ್ಲಿ ಬರೆದಿಡುವ ಕಾರ್ಯಕ್ರಮವಾಗಿದೆ ಎಂದು ಸಾಲೂರು ಮಠದ ಪೀಠಾಧಿಪತಿ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಈ ಜಗತ್ತಿನಲ್ಲಿ ಅನೇಕ ಪವಾಡ ಪುರುಷರು ಬರುತ್ತಾರೆ. ಅಂತಹ ಪವಾಡ ಪುರುಷರಲ್ಲಿ ಹಡಪದ ಅಪ್ಪಣ್ಣ ಸಹ ಒಬ್ಬರು. ಈ ದಿಸೆಯಲ್ಲಿ ಬಸವಣ್ಣನವರ ಹಾದಿಯಲ್ಲೇ ಶರಣ ಪರಂಪರೆಯನ್ನು ನಾವು ಹಡಪದ ಅಪ್ಪಣ್ಣ ಅವರಲ್ಲಿ ಕಾಣಬಹುದು. ಶರಣ ಪರಂಪರೆಯ ತತ್ವಗಳನ್ನು ಇಂದಿಗೂ ಆಚರಣೆ ಮಾಡಿಕೊಂಡು ಕಾಯಕವೇ ಕೈಲಾಸ ಎಂದು ನಡೆದುಕೊಂಡು ಬರುತ್ತಿರುವ ಸಮಾಜ ಈ ಸವಿತಾ ಸಮಾಜ ಎಂದರೆ ತಪ್ಪಾಗಲಾರದು. ಮಹದೇಶ್ವರ ಬೆಟ್ಟದಲ್ಲಿ ಒಳ್ಳೆಯ ಕಾಯಕವನ್ನು ಸಹ ಈ ಸಮಾಜದ ಬಂಧುಗಳು ಮಾಡುತ್ತಿದ್ದಾರೆ. ಇಲ್ಲಿ ಎರಡು ಸಮುದಾಯಗಳ ಜನರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ, ಒಂದು ಬೇಡಗಂಪಣ ಜನಾಂಗ, ಮತ್ತೊಂದು ಸವಿತಾ ಸಮಾಜವಾಗಿದೆ. ಇಲ್ಲಿ ಸಮಾಜದ ಅತ್ಯಂತ ಹಿಂದಿನ ಸಂಪ್ರದಾಯಗಳನ್ನು ಇಂದಿಗೂ ಉಳಿಸಿಕೊಂಡು ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ಎಂ. ಆರ್. ಮಂಜುನಾಥ್ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದಲ್ಲಿ ಇಡೀ ರಾಜ್ಯದಲ್ಲಿ ಉದ್ದಗಲಕ್ಕೂ ಇರುವಂಥ ಸವಿತಾ ಸಮಾಜದ ಜನ ಒಂದೆಡೆ ಸೇರಿ ಶ್ರೀ ಕ್ಷೇತ್ರದಲ್ಲಿ ಹಬ್ಬದಂತೆ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟನೆ ಮಾಡುವ ಮೂಲಕ ಎಲ್ಲ ಒಂದಾಗಿ ಬಾಳಬೇಕು. ಜೊತೆಗೆ ಮಕ್ಕಳನ್ನು ಯಾರೂ ಸಹ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದರು.
ಪ್ರತಿಭಾ ಪುರಸ್ಕಾರ: ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಹಾಗೂ ಪದವಿ ಹಂತದಲ್ಲಿ ಹೆಚ್ಚು ಅಂಕ ಪಡೆದ ಸವಿತಾ ಸಮಾಜದ ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.ಮೆರವಣಿಗೆ:ಹಡಪದ ಅಪ್ಪಣ್ಣ ಅವರ ಭಾವಚಿತ್ರವನ್ನು ಬೆಳಗ್ಗೆಯಿಂದಲೇ ಮಲೆ ಮಹದೇಶ್ವರ ಬೆಟ್ಟದ ಮುಖ್ಯ ರಸ್ತೆ ಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ವೇಳೆ ಯುವಕರು ಕುಣಿದು ಕುಪ್ಪಳಿಸಿದರು.
ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ಪ್ರಕಾಶ್, ಸದಸ್ಯರಾದ ರತ್ನಮ್ಮ, ಕರಿಕಲ್ ಪುಟ್ಟಸ್ವಾಮಿ, ಸತೀಶ್, ಎಚ್. ಪಿ. ಲೋಕೇಶ್, ಗುಂಬಳ್ಳಿ ಬಸವರಾಜ್, ನಟರಾಜು, ಮಹದೇಶ್ವರ ಸವಿತ ಸಮಾಜ ಸಂಘದ ಅಧ್ಯಕ್ಷ ರಾಜು, ವಿವಿಧ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.