ಹಾಡಿ ಜನರ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಸಿಇಒ ಗಾಯತ್ರಿ ಸೂಚನೆ

KannadaprabhaNewsNetwork | Published : Nov 24, 2024 1:47 AM

ಸಾರಾಂಶ

ಶಾಲಾ ಆವರಣದಲ್ಲಿ ಶಾಲಾ ಮಕ್ಕಳೊಡನೆ ಸಮಾಲೋಚನೆ ನಡೆಸಿ, ತಮ್ಮಂತೆ ದೊಡ್ಡ ಅಧಿಕಾರಿಗಳಾಗುವಂತೆ ಪ್ರೇರಿಪಿಸಿದರು. ಬಿಸಿಯೂಟ ಅಡಿಗೆ ಕೋಣೆ ಪರಿಶೀಲಿಸಿ, ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಎಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕುಗಳ ಹಾಡಿಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಸಿಇಒ ಕೆ.ಎಂ. ಗಾಯತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಎಚ್.ಡಿ. ಕೋಟೆ ತಾಪಂ ಸಭಾಂಗಣದಲ್ಲಿ ಎಚ್.ಡಿ. ಕೋಟೆ ಹಾಗೂ ಸರಗೂರು ವ್ಯಾಪ್ತಿಯ ಹಾಡಿಗಳ ಅಭಿವೃದ್ಧಿ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಹಾಡಿಗಳಲ್ಲಿ ಪ್ರತಿ ಕುಟುಂಬಕ್ಕೂ ಪಿಎಂ ಜನ್ ಮನ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ, ಈಗಾಗಲೇ ಮಂಜೂರಾಗಿರುವ ಮನೆಗಳನ್ನು ಪೂರ್ಣಗೊಳಿಸಿ ಹಾಗೂ ಮತ್ತೆ ಮನೆಗಳು ಬೇಕಾದಲ್ಲಿ ಬೇಡಿಕೆ ಸಲ್ಲಿಸಿ ಅಲ್ಲದೇ ಎಸ್.ಬಿ.ಎಂ. ಯೋಜನೆಯಡಿ ಶೌಚಾಲಯ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ಇನ್ನಿತರ ಕಾಮಗಾರಿಗಳನ್ನು ಪ್ರತಿ ಕುಟುಂಬಕ್ಕೂ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹಾಡಿಗಳಲ್ಲಿ ವಲಸೆ ಹೋಗುತ್ತಿರುವುದು ಕಂಡುಬಂದಿದ್ದು, ವಲಸೆ ಹೋಗುವವರನ್ನು ತಡೆಯಬೇಕು, ಆ ಭಾಗಗಳಲ್ಲಿ ಹೆಚ್ಚಿನ ಪ್ರಚಾರ ನಡೆಸಿ ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು, ಆಧಾರ್, ರೇಷನ್ ಕಾರ್ಡ್, ಆಭಾ ಕಾರ್ಡ್, ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳಿಗೆ ತಾಲೂಕು ಅಧಿಕಾರಿಗಳ ತಂಡ ಕ್ಯಾಂಪ್ ಮಾಡುವ ಮೂಲಕ ಸ್ಥಳದಲ್ಲೇ ಎಲ್ಲರಿಗೂ ಆಧಾರ್, ರೇಷನ್ ಕಾರ್ಡ್, ಅಭಾ ಕಾರ್ಡ್, ಜಾಬ್ ಕಾರ್ಡ್ ಗಳ ಸಮಸ್ಯೆ ಪರಿಹರಿಸಬೇಕು ಎಂದು ತಿಳಿಸಿದರು.

ಈಗಾಗಲೇ ಶೌಚಾಲಯ ಬಳಸಿ ಅಭಿಯಾನ ನಡೆಯುತ್ತಿರುವ ಹಿನ್ನೆಲೆ ಹಾಡಿಗಳಲ್ಲಿ ಪ್ರತಿ ಕುಟುಂಬಕ್ಕೂ ಶೌಚಾಲಯ ನಿರ್ಮಿಸಬೇಕು, ಯಾವ ಹಾಡಿಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದೆ ಅಲ್ಲಿ ಸಮುದಾಯ ಶೌಚಾಲಯ ನಿರ್ಮಿಸಬೇಕು. ಈ ರೀತಿ ಶೌಚಾಲಯ ಇದ್ದರೆ ಹಾಡಿ ಜನರು ಶೌಚಕ್ಕಾಗಿ ಕಾಡಿನೊಳಗೆ ಹೋಗುವುದಿಲ್ಲ, ಇದರಿಂದ ಪ್ರಾಣಿಗಳು ಕೂಡ ದಾಳಿ ಮಾಡುವುದು ತಪ್ಪುತ್ತದೆ ಎಂದು ಹೇಳಿದರು.

ಕಾಡಂಚಿನ ಆರೋಗ್ಯ ಕೇಂದ್ರಗಳ ಸ್ವಚ್ಛತೆ ಮತ್ತು ಸಂರಕ್ಷಣೆಗೆ ಗ್ರಾಪಂಗಳು ಸಹಕರಿಸಬೇಕು, ಹಾಡಿ ಜನರು ಆರೋಗ್ಯ ಕೇಂದ್ರಗಳಿಗೆ ಹೋಗಲು ವಾಹನದ ವ್ಯವಸ್ಥೆಯನ್ನು ಸಹಾ ಮಾಡಬೇಕು, ಅನಾರೋಗ್ಯ ಸಮಯದಲ್ಲಿ ಹಾಡಿಗಳಿಂದ ನಡೆದುಕೊಂಡು ಬರಲು ಆಗುವುದಿಲ್ಲ. ಅದಕ್ಕಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಾಹನ ಖರೀದಿ ಮಾಡಬೇಕು ಎಂದು ಹೇಳಿದರು.

ಹಾಡಿ ಜನರಿಗೆ ನರೇಗಾ ಯೋಜನೆಯಡಿ ಆರೋಗ್ಯ ತಪಾಸಣೆ ಕಾಲ ಕಾಲಕ್ಕೆ ನಡೆಯಬೇಕು ಹಾಗೂ ಆರೋಗ್ಯ ವಿಮೆ ಮಾಡಿಸಬೇಕು. ಅಂಗನವಾಡಿ ಇಲ್ಲದ ಕಡೆ ಅಲ್ಲಿನ ಶಾಲೆಗಳಲ್ಲಿ ಕೊಠಡಿ ಇದ್ದರೆ ಅದನ್ನು ಉಪಯೋಗಿಸಿ, ಇಲ್ಲವಾದರೆ ಶಾಲಾ ಆವರಣದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಅಧಿಕಾರಿಗಳು ನಿಗಾವಹಿಸಬೇಕು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇದ್ದಲ್ಲಿ ಬೋರ್ ವೆಲ್ ತೆಗೆಸಲು ಕ್ರಮವಹಿಸಿ ಹಾಗೂ ಗೃಹಜ್ಯೋತಿ ಯೋಜನೆಯಿಂದ ವಂಚಿತವಾಗಿರುವ ಕುಟುಂಬಗಳನ್ನು ಯೋಜನೆಗೆ ಸೇರಿಸಲು ಪಿಡಿಒಗಳು ಕ್ರಮವಹಿಸಿ ಎಂದು ಹೇಳಿದರು.

ಸಭೆಗೂ ಮುನ್ನ ತಾಲೂಕಿನ ಆಲನಹಳ್ಳಿ ಗ್ರಾಪಂ ಆಲನಹಳ್ಳಿ ಗ್ರಾಮದ ಶಾಲಾ ಅಭಿವೃದ್ಧಿ, ರೈತನ ಜಮೀನಿನಲ್ಲಿ ಹಿಪ್ಪುನೇರಳೆ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಕೂಲಿಕಾರರು ಹಾಗೂ ಫಲಾನುಭವಿಯೊಡನೆ ಸಮಾಲೋಚನೆ ನಡೆಸಿದರು.

ಶಾಲಾ ಆವರಣದಲ್ಲಿ ಶಾಲಾ ಮಕ್ಕಳೊಡನೆ ಸಮಾಲೋಚನೆ ನಡೆಸಿ, ತಮ್ಮಂತೆ ದೊಡ್ಡ ಅಧಿಕಾರಿಗಳಾಗುವಂತೆ ಪ್ರೇರಿಪಿಸಿದರು. ಬಿಸಿಯೂಟ ಅಡಿಗೆ ಕೋಣೆ ಪರಿಶೀಲಿಸಿ, ಶುಚಿತ್ವ ಕಾಪಾಡಿಕೊಳ್ಳುವಂತೆ ತಿಳಿಸಿದರು.

ಬಳಿಕ ಪಡುಕೋಟೆ ಕಾವಲ್ ಗ್ರಾಪಂ ವ್ಯಾಪ್ತಿಯ ಉದಯನಗರ ಕೆರೆ ಆವರಣದಲ್ಲಿ ಗ್ರಾಪಂ ಮಟ್ಟ ಒಕ್ಕೂಟದ ಶ್ರೀ ಬನ್ನಾರಿ ಅಮ್ಮ ಸ್ತ್ರೀ ಶಕ್ತಿ ಮಹಿಳಾ ಸ್ವ-ಸಹಾಯ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ ಕೆರೆಗೆ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮವನ್ನು ಸಿಇಒ ಉದ್ಘಾಟಿಸಿ, ಕೆರೆಗೆ ಮೀನು ಮರಿಗಳನ್ನು ಬಿಟ್ಟರು. ಇದೇ ವೇಳೆ ಸಂಘದ ಮಹಿಳೆಯರಿಗೆ ಮೀನು ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸದೃಢರಾಗಿ ಜೀವನ ನಿರ್ವಹಣೆ ಮಾಡುವಂತೆ ಸಲಹೆ ನೀಡಿದರು.

ಸಭೆ ಬಳಿಕ, ಅಂತರಸಂತೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಮಲ ತ್ಯಾಜ್ಯ ನಿರ್ವಹಣಾ ಘಟಕವನ್ನು ವೀಕ್ಷಿಸಿ, ಜಿಲ್ಲೆಯಲ್ಲೇ ನಿರ್ಮಾಣವಾಗಿರುವ ಮೊದಲ ಘಟಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ. ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಎಚ್.ಡಿ. ಕೋಟೆ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ಪಿ. ಧರಣೇಶ್, ಸರಗೂರು ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ತಾಲೂಕು ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ಪಿಡಿಒಗಳು ಇದ್ದರು.

Share this article