ಬಿ.ಲಕ್ಷ್ಮೀಕಾಂತಸಾ
ಹಗರಿಬೊಮ್ಮನಹಳ್ಳಿಯಿಂದ ೧೩ ಕಿ.ಮೀ. ದೂರವಿರುವ ಚಿಮ್ಮನಹಳ್ಳಿ ಎಂಬ ಗ್ರಾಮದಲ್ಲಿ ೧೯೬೦ರವರೆಗೂ ವಾರಕ್ಕೊಮ್ಮೆ ಜಾನುವಾರು ಸಂತೆ ಹಾಗೂ ವರ್ಷಕ್ಕೊಮ್ಮೆ ಜಾನುವಾರು ಜಾತ್ರೆ ಭರ್ಜರಿಯಾಗಿಯೇ ನಡೆಯುತ್ತಿತ್ತು.
ಇಲ್ಲಿ ನಡೆಯುತ್ತಿದ್ದ ಜಾನುವಾರು ಸಂತೆಗೆ ಹಾಗೂ ಜಾತ್ರೆಗೆ ಆಂಧ್ರಪ್ರದೇಶದಿಂದ ರೈಲ್ವೆ ಮೂಲಕ ಹಗರಿಬೊಮ್ಮನಹಳ್ಳಿಗೆ, ಇಲ್ಲಿಂದ ಚಿಮ್ಮನಹಳ್ಳಿ ಗ್ರಾಮಕ್ಕೆ ಜಾನುವಾರುಗಳನ್ನು ಸಾಗಿಸಿ ಮಾರಾಟ ಮಾಡಲಾಗುತ್ತಿತ್ತು. ನಿರಂತರವಾಗಿ ನಡೆದ ಈ ಸಂತೆ ಮತ್ತು ಜಾತ್ರೆಯಲ್ಲಿ ಆಂಧ್ರದ ರೆಡ್ಡಿಗಳು ರೈತರಿಗೆ ಜಾನುವಾರುಗಳನ್ನು ಸಾಲವಾಗಿ ಒದಗಿಸಿ ಕಂತು ಪ್ರಕಾರ ರೈತರಿಂದ ಹಣ ವಸೂಲಿ ಮಾಡುತ್ತಿದ್ದರಿಂದ ಕಂತೆತ್ತಿನ ಜಾತ್ರೆ ಎಂದೇ ಪ್ರಸಿದ್ಧವಾಗಿತ್ತು.ಮುಳುಗಡೆಯಾದ ಸಂತೆ;
೬೦ರ ದಶಕದ ಕೊನೆಯಲ್ಲಿ ಹಗರಿಬೊಮ್ಮನಹಳ್ಳಿ ಜಲಾಶಯ ನಿರ್ಮಾಣವಾದಾಗ ಚಿಮ್ಮನಹಳ್ಳಿ ಗ್ರಾಮ ಜೊತೆಗೆ ವೈಭವದ ಜಾನುವಾರು ಸಂತೆ ಮತ್ತು ಜಾತ್ರೆಯೂ ಮುಳುಗಡೆಯಾಯಿತು. ಆದರೆ, ಮುಳುಗಿ ಹೋದ ಅಲ್ಲಿನ ಸಂತೆ ಮತ್ತು ಜಾತ್ರೆಗೆ ಹಗರಿಬೊಮ್ಮನಹಳ್ಳಿಯಲ್ಲಿ ಮರುಹುಟ್ಟು ಕೊಟ್ಟವರೇ ಗ್ರಾಪಂ ಅಧ್ಯಕ್ಷರಾಗಿದ್ದ ಹಾಲ್ದಾಳ ಕೊಟ್ರಪ್ಪನವರು.ಗ್ರಾಪಂ ವ್ಯಾಪ್ತಿಯ ೫ ಎಕರೆ ಪ್ರದೇಶವನ್ನು ಜಾನುವಾರ ಸಂತೆಗೆ ಮೀಸಲಿಟ್ಟ ಅಧ್ಯಕ್ಷರು ಪ್ರತಿ ಬುಧವಾರ ಮತ್ತು ಗುರುವಾರ ಸಂತೆ ಹಾಗೂ ಪ್ರತಿ ವರ್ಷ ನಿರಂತರವಾಗಿ ಜಾತ್ರೆ ನಡೆಯಲೂ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿದರು. ಇದೇ ಸ್ಥಳದಲ್ಲಿ ತರಕಾರಿ ಸಹಿತ ದಿನಸಿ ಸಂತೆಯೂ ನಡೆಯುತ್ತಿದ್ದು, ಪಟ್ಟಣದ ಸುತ್ತಲಿನ ಗ್ರಾಮದ ಜನತೆ ಮತ್ತು ರೈತರಿಗೆ ಅನುಕೂಲವಾಗಿತ್ತು.
ಪಟ್ಟಣ ಬೆಳೆದಂತೆಲ್ಲ ತಾಲೂಕು ಕೇಂದ್ರವಾದರೂ ಸೌಲಭ್ಯಗಳ ನಿರ್ವಹಣೆಯ ಕೊರತೆಯಿಂದಾಗಿ ಜಾತ್ರೆ ಸ್ಥಗಿತಗೊಂಡು ಸಂತೆ ನಿರಾತಂಕವಾಗಿ ನಡೆಯುತ್ತಿದೆ. ಮೊದಲಿನ ವೈಭವ ಉಳಿದಿಲ್ಲ ಎಂದು ಪ್ರತಿ ವಾರ ತಪ್ಪದೇ ಜಾನುವಾರು ಸಂತೆಗೆ ಆಗಮಿಸುವ ಓಬಳಾಪುರ ಗ್ರಾಮದ ಬಸವರಾಜ ಅಭಿಪ್ರಾಯ ಪಡುತ್ತಾರೆ.ಪುರಸಭೆ ನಿರಾಸಕ್ತಿ: ೫ ಎಕರೆ ಪ್ರದೇಶದ ಸಂತೆಯಲ್ಲಿ ಒಂದು ಎಕರೆಗೂ ಹೆಚ್ಚು ನಿವೇಶನವನ್ನು ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಂಡರೂ ಉಳಿದ ಪ್ರದೇಶದಲ್ಲಿ ನಡೆಯುತ್ತಿರುವ ಜಾನುವಾರು ಮಾರುಕಟ್ಟೆಗೆ, ಮೂಲ ಸೌಲಭ್ಯ ಒದಗಿಸಲು ಪುರಸಭೆ ದರ್ಜೆಗೇರಿರುವ ಹಗರಿಬೊಮ್ಮನಹಳ್ಳಿಯ ಆಡಳಿತದಿಂದ ಸಾಧ್ಯವಾಗಿಲ್ಲ. ಮಾರುಕಟ್ಟೆ ಟೆಂಡರ್ ಮೂಲಕ ವಾರ್ಷಿಕ ₹೧೦ ಲಕ್ಷ ಲಾಭ ಗಳಿಸುವ ಪುರಸಭೆ ಮಾರುಕಟ್ಟೆಯ ನಿರ್ವಹಣೆಯಲ್ಲಿ ಅಗತ್ಯ ಆಸಕ್ತಿ ತೋರಿಸುತ್ತಿಲ್ಲ ಎನ್ನುತ್ತಾರೆ ರೈತರು.
ಗ್ರಾಪಂ ಆಡಳಿತವಿದ್ದಾಗ ನಿರ್ಮಾಣವಾಗಿರುವ ಜಾನುವಾರುಗಳಿಗಾಗಿ ನಿರ್ಮಿಸಿರುವ ನೀರಿನ ತೊಟ್ಟಿ ಮತ್ತು ರೈತರ ವಿಶ್ರಾಂತಿಗೆಂದು ಇರುವ ತಗಡಿನ ಶೆಡ್ ಗಳು ನೆಲಕ್ಕುರುಳುತ್ತಿವೆ. ರೈತರಿಗೆ ಶೌಚಾಲಯ ಮತ್ತು ಕುಡಿಯುವ ನೀರಿವ ವ್ಯವಸ್ಥೆ, ಸಂತೆ ಪ್ರದೇಶದ ಆವರಣ ಗೋಡೆ ನಿರ್ಮಾಣ ಕಾಗದದ ಮೇಲೆ ಉಳಿದಿದೆ.ನಗರೋತ್ಥಾನ ಯೋಜನೆಯಡಿ ತರಕಾರಿ ಮಾರುಕಟ್ಟೆಯ ಅಭಿವೃದ್ಧಿಗೆ ₹1 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಾರುಕಟ್ಟೆ ಅಭಿವೃದ್ಧಿಪಡಿಸುವ ಕಾಮಗಾರಿಯಲ್ಲಿ ಜಾನುವಾರು ಮಾರುಕಟ್ಟೆ ಸೇರ್ಪಡೆಯಾಗಿದೆಯೇ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ.