ಹಗರಿಬೊಮ್ಮನಹಳ್ಳಿ: ಹಲವರು ಹೂವಿನಹಡಗಲಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದಾರೆ. ಆದರೆ, ಹಗರಿಬೊಮ್ಮನಹಳ್ಳಿ ಕ್ಷೇತ್ರ ನನ್ನ ಕಾರ್ಯಕ್ಷೇತ್ರವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮನಾಯ್ಕ ತಿಳಿಸಿದರು.
ತಾಲೂಕಿನ ಮೊರಿಗೇರಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಬಿಎಂಸಿ ಘಟಕ ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.ಮಾಲವಿ ಜಲಾಶಯ, ಚಿಲವಾರು ಬಂಡೆ ಏತ ನೀರಾವರಿ, ಹಲವು ಏತ ನೀರಾವರಿಗಳ ಅಭಿವೃದ್ಧಿ ಮೂಲಕ ಕ್ಷೇತ್ರದಲ್ಲಿ ಈ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಸಾಧಿಸಿದ ಹಿರಿಮೆ ಇದೆ. ಹಾಗಾಗಿ ಕಾರ್ಯ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದೇನೆ ಎಂದರು.
ಸಂಕಷ್ಟಕ್ಕೆ ಪರಿಹಾರ: ಹಾಲು ಉತ್ಪಾದಕ ರೈತರು ಸಂಕಷ್ಟಕ್ಕೆ ಸಿಎಂ ಸಿದ್ದರಾಮಯ್ಯ ಹೊಸ ವರ್ಷದಲ್ಲಿ ಹೊಸ ಘೋಷಣೆ ಮೂಲಕ ಸಿಹಿ ಸುದ್ದಿ ನೀಡುವರು. ಕನಿಷ್ಠ ₹5 ಹಾಲಿನ ದರ ಏರಿಸುವ ಮೂಲಕ ನೇರವಾಗಿ ರೈತರಿಗೆ ತಲುಪಿಸಲಾಗುವುದು. ಟೀಕೆಗಳಿಗೆ ಹೆದರಿ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಸಂಕಷ್ಟದಲ್ಲಿರುವುದನ್ನು ಸಿಎಂ ಸಿದ್ದರಾಮಯ್ಯ ಗಮನಿಸಿದ್ದಾರೆ ಎಂದರು.ಹೊರರಾಜ್ಯದಲ್ಲೂ ನಂದಿನಿ: ಕಳೆದ ೨ ವರ್ಷಗಳಿಂದ ರಾಬಕೋವಿ ಒಕ್ಕೂಟ ₹೭.೫ ಕೋಟಿ ನಷ್ಟವಾಗಿದ್ದರೂ ರೈತರ ಹಿತಾಸಕ್ತಿ ಉಳಿಸಿಕೊಳ್ಳಲಾಗಿದೆ. ದೆಹಲಿಯಲ್ಲಿ ಕಾರ್ಯಾಚರಣೆ ಪರಿಣಾಮ ೧೫ ಸಾವಿರ ಲೀ. ನಂದಿನಿ ಹಾಲು ಮಾರಾಟವಾಗುತ್ತಿದೆ. ಕೆಂಎಂಎಫ್‌ನಿಂದ ಕೋಟಿ ಲೀ.ಹಾಲು ಉತ್ಪಾದನೆ ಗುರಿ ಸಾಧಿಸಿದೆ. ಜೈಪುರ, ಗುಜರಾತ್‌ನಲ್ಲಿ ಸಂಕ್ರಾಂತಿಯಿಂದ ನಂದಿನಿ ಉತ್ಪನ್ನ ಮಾರಾಟವಾಗಲಿದೆ ಎಂದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹಳ್ಳಿ ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಬಕೋವಿ ಒಕ್ಕೂಟದ ನಿರ್ದೇಶಕರಾದ ಎಚ್.ಮರುಳಸಿದ್ದಪ್ಪ, ಶ್ರೀಕಾಂತಪ್ಪ, ವ್ಯವಸ್ಥಾಪಕ ನಿರ್ದೇಶಕ ಹೀರಾನಾಯ್ಕ, ಸಂಘದ ಉಪಾಧ್ಯಕ್ಷ ಅಕ್ಕಿ ಅಂಜಿನಪ್ಪ, ಪುರಸಭೆ ಅಧ್ಯಕ್ಷ ಎಂ.ಮರಿರಾಮಣ್ಣ, ಸದಸ್ಯರಾದ ಅಜೀಜುಲ್ಲಾ, ಪವಾಡಿ ಹನುಮಂತಪ್ಪ, ಬಾಳಪ್ಪ, ತ್ಯಾವಣಗಿ ಕೊಟ್ರೇಶ, ಮಾಜಿ ಸದಸ್ಯ ಡಿಶ್ ಮಂಜುನಾಥ ಇದ್ದರು. ಸಹಕಾರಿ ಸಂಘದ ಕೊಟ್ರಗೌಡ, ರಾಬಕೋ ಒಕ್ಕೂಟದ ಈ.ಪ್ರಕಾಶ್ ನಿರ್ವಹಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಮೊರಿಗೇರಿ ಗ್ರಾಮದಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಬಿಎಂಸಿ ಘಟಕವನ್ನು ಕೆಎಂಎಫ್ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎಸ್.ಭೀಮನಾಯ್ಕ ಉದ್ಘಾಟಿಸಿದರು.