ಶಾಸಕರ ಸ್ವಂತ ಊರಲ್ಲೇ ಡಾಕ್ಟರ್‌ ಇಲ್ಲಂದ್ರೆ ಹ್ಯಾಂಗ್ರೀ: ಶಾಸಕ ನೇಮರಾಜ ಅಳಲು

KannadaprabhaNewsNetwork |  
Published : Jun 27, 2024, 01:06 AM IST
ಸ | Kannada Prabha

ಸಾರಾಂಶ

ತಾಲೂಕಿನಲ್ಲಿ ವಾಂತಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಚಿಕಿತ್ಸೆ ನೀಡಿ, ಜನರ ಆರೋಗ್ಯದತ್ತ ಚಿತ್ತ ಹರಿಸಿ.

ಹಗರಿಬೊಮ್ಮನಹಳ್ಳಿ: ತಾಲೂಕಿನ ಮರಿಯಮ್ಮನಹಳ್ಳಿ ನನ್ನ ಸ್ವಂತ ಊರು. ಇಲ್ಲಿಯೇ ಡಾಕ್ಟ್ರು ಸಿಗಲ್ಲ ಅಂದ್ರೆ ಹ್ಯಾಂಗ್ರೀ...

ಪಟ್ಟಣದ ತಾಪಂನ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಕೆ. ನೇಮರಾಜ ನಾಯ್ಕ ತಾಲೂಕು ವೈದ್ಯಾಧಿಕಾರಿಯನ್ನು ಪ್ರಶ್ನಿಸಿ, ಅಳಲು ತೋಡಿಕೊಂಡ ಪರಿ ಇದು.

ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಶಾಸಕರು, ತಾಲೂಕಿನಲ್ಲಿ ವಾಂತಿ ಪ್ರಕರಣಗಳು ಹೆಚ್ಚಾಗುತ್ತಿವೆ. ಕೂಡಲೇ ಚಿಕಿತ್ಸೆ ನೀಡಿ, ಜನರ ಆರೋಗ್ಯದತ್ತ ಚಿತ್ತ ಹರಿಸಿ ಎಂದು ಶಾಸಕರು ತಾಲೂಕು ವೈದ್ಯಾಧಿಕಾರಿ ಡಾ. ಶಿವರಾಜ್‌ ಅವರಿಗೆ ತಿಳಿಸಿದರು.

ಮರಿಯಮ್ಮನಹಳ್ಳಿ ಭಾಗದಲ್ಲಿ ಫ್ಯಾಕ್ಟರಿ ಹೆಚ್ಚು ಇರುವುದರಿಂದ ಅಸ್ತಮ ರೋಗಿಗಳ ಸಂಖ್ಯೆ ಹೆಚ್ಚಿದೆ. ನಿಮ್ಮ ದಾಖಲೆಗಳಲ್ಲಿ ಕಡಿಮೆ ಅಂಕಿ-ಸಂಖ್ಯೆ ತೋರಿಸುತ್ತೀದ್ದೀರಿ ಎಂದು ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಭಾಸ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೇವಲ ೮೪ ಟಿಬಿ ರೋಗಿಗಳು ಇದ್ದಾರೆ ಎಂದು ವೈದ್ಯರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಶಾಸಕರ ಊರಲ್ಲೇ ಡಾಕ್ಟರ್‌ ಇಲ್ಲಂದ್ರೆ ಹ್ಯಾಂಗ್ರೀ.... ಎಂದು ಪ್ರಶ್ನಿಸಿದರು.

ಇದರಿಂದ ನನಗೆ ಅವಮಾನ ಆಗ್ತಿದೆ. ಕೂಡಲೇ ಇಲ್ಲಿ ಒಬ್ಬ ವೈದ್ಯರು ಕಾಯಂ ಆಗಿ ಇರುವ ಹಾಗೆ ನೋಡಿಕೊಳ್ಳಿ ಎಂದು ಟಿಎಚ್‌ಒಗೆ ತಿಳಿಸಿದರು.

ಸಬ್ಸಿಡಿ ಲಭ್ಯ:

ಎಸ್‌ಸಿ, ಎಸ್‌ಟಿಗೆ ಶೇ. ೯೦, ಸಾಮಾನ್ಯ ವರ್ಗದವರಿಗೆ ಶೇ. ೫೫ ಸಬ್ಸಿಡಿ ಸಿಗುತ್ತದೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ರಾಜೇಶ್ ತಿಳಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಹೊಸಪೇಟೆ ತಾಲೂಕಿನಲ್ಲಿ ಕೃಷಿಭೂಮಿ ಕಡಿಮೆ ಇರುವುದರಿಂದ ಕ್ಷೇತ್ರದ ಮರಿಯಮ್ಮನಹಳ್ಳಿ ಭಾಗಕ್ಕೆ ಹೆಚ್ಚು ಒತ್ತು ನೀಡಬೇಕು. ಸರ್ಕಾರದಿಂದ ಬಂದ ಅನುದಾನವನ್ನು ಹೆಚ್ಚು ಇಲ್ಲಿಯೇ ಬಳಕೆ ಮಾಡಿ ಎಂದು ಹೊಸಪೇಟೆ ಕೃಷಿ ಅಧಿಕಾರಿಗೆ ತಾಕೀತು ಮಾಡಿದರು.

ಕೃಷಿ ಸಹಾಯಕ ನಿರ್ದೇಶಕ ಸುನೀಲ್‌ನಾಯ್ಕ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ೧೭೦೦ ಹೆಕ್ಟೇರ್ ಮೆಕ್ಕೆಜೋಳ, ಸಜ್ಜೆ, ಶೇಂಗಾ ಸೇರಿ ಒಟ್ಟು ಶೇ. ೬೫ರಷ್ಟು ಭೂಮಿಯನ್ನು ಬಿತ್ತನೆ ಮಾಡಲಾಗಿದೆ. ತಾಲೂಕಿನಲ್ಲಿ ಮಳೆ ೧೨೯ ಮಿ.ಮೀ. ಆಗಿದ್ದು, ವಾಡಿಕೆಗಿಂತ ಹೆಚ್ಚಾಗಿದೆ. ಕಳೆದ ೧೦ ದಿನಗಳಿಂದ ಮಳೆ ಪ್ರಮಾಣ ಕುಸಿದಿದ್ದು, ಬೆಳೆಗಳಿಗೆ ಮಳೆಯ ಅಗತ್ಯತೆ ಇದೆ. ಮೆಕ್ಕೆಜೋಳಕ್ಕೆ ಬರುವ ಸೈನಿಕ ಹುಳುಗಳ ಕಾಟದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗಿದೆ ಎಂದರು.

ಫಲಿತಾಂಶ ತೃಪ್ತಿ ಪಟ್ಟಿಲ್ಲ:

ತಾಲೂಕಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. ೮೪ ಬಂದಿದೆ. ಇದು ಕಲ್ಯಾಣ ಕರ್ನಾಟಕಕ್ಕೆ ಪ್ರಥಮ ಎಂದು ಬಿಇಒ ಮೈಲೇಶ್ ಬೇವೂರ್ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಫಲಿತಾಂಶ ತೃಪ್ತಿ ತಂದಿಲ್ಲ. ಮಕ್ಕಳಿಗೆ ೨೦ ಅಂಕ ಶಿಕ್ಷಕರೇ ನೀಡುವುದರಿಂದ ಗುಣಮಟ್ಟದ ಫಲಿತಾಂಶ ಇದಲ್ಲ. ಸರ್ಕಾರ ಈ ಪದ್ಧತಿ ಕೈಬಿಡಬೇಕು ಎಂದು ಶಾಸಕರು ತಿಳಿಸಿದರು.

ಪ್ರತಿ ಶಾಲೆಯ ಶಿಕ್ಷಕರು ಪಾಠ ಯೋಜನೆ ಅನುಸರಿಸುವಂತೆ ಕ್ರಮ ವಹಿಸಬೇಕು ಎಂದು ಶಾಸಕರು ಬಿಇಒಗೆ ತಿಳಿಸಿದರು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ