ಹಗರಿಬೊಮ್ಮನಹಳ್ಳಿ: ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆಯದಂತೆ ಶಾಸಕ ನೇಮರಾಜ ನಾಯ್ಕ ಸೂಚನೆ

KannadaprabhaNewsNetwork |  
Published : Mar 01, 2026, 02:30 AM IST
ಹಗರಿಬೊಮ್ಮನಹಳ್ಳಿಯ ಎಪಿಎಂಸಿ ಆವರಣದಲ್ಲಿ ಶನಿವಾರ ಚಾಲನೆ ನೀಡಿದ ಬೆಂಬಲ ಬೆಲೆಯಡಿ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಬೆಳೆದ ರೈತರನ್ನು ಶಾಸಕರಾದ ನೇಮಿರಾಜ್ ನಾಯ್ಕ ಸನ್ಮಾನಿಸಿದರು. | Kannada Prabha

ಸಾರಾಂಶ

ಕ್ವಿಂಟಲ್ ರಾಗಿಗೆ ೪,೮೮೬ ರು. ನಿಗದಿಪಡಿಸಲಾಗಿದೆ. ತಾಲೂಕಿನ ೧,೨೦೦ ಜನ ರೈತರು ನೋಂದಣಿ ಮಾಡಿಸಿದ್ದಾರೆ.

ಹಗರಿಬೊಮ್ಮನಹಳ್ಳಿ: ರೈತರಿಗೆ ಉತ್ತಮ ದರದಲ್ಲಿ ರಾಗಿ ಮಾರಾಟ ಮಾಡಲು ಇದು ಸದಾವಕಾಶ. ನೋಂದಣಿ ಮಾಡಿಕೊಂಡಿರುವ ರೈತರಿಂದ ರಾಗಿ ಖರೀದಿ ಮಾಡಲಾಗುತ್ತದೆ. ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ. ಖರೀದಿ ಕೇಂದ್ರದಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ನೇಮರಾಜ ನಾಯ್ಕ ಸ್ಪಷ್ಟಪಡಿಸಿದರು.

ರೈತರ ಸಂಕೇತವಾಗಿರುವ ಹಸಿರು ಶಾಲು ತಲೆಗೆ ಸುತ್ತಿಕೊಂಡು ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿ ಶನಿವಾರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕ್ವಿಂಟಲ್ ರಾಗಿಗೆ ೪,೮೮೬ ರು. ನಿಗದಿಪಡಿಸಲಾಗಿದೆ. ತಾಲೂಕಿನ ೧,೨೦೦ ಜನ ರೈತರು ನೋಂದಣಿ ಮಾಡಿಸಿದ್ದಾರೆ. ಒಬ್ಬ ರೈತನಿಂದ ೧೦ ಕ್ವಿಂಟಲ್ ರಾಗಿ ಖರೀದಿಗೆ ಆದೇಶಿಸಿದ್ದು, ಒಟ್ಟು ೪೩ ಸಾವಿರ ಕ್ವಿಂಟಲ್ ರಾಗಿ ಖರೀದಿಸುವ ಗುರಿಯನ್ನು ಹೊಂದಲಾಗಿದೆ. ರಾಗಿ ಖರೀದಿಯ ಬಳಿಕ ರೈತರಿಗೆ ತಡ ಮಾಡದೇ ಹಣ ಸಾಂದಾಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹಿಂಗಾರು ರಾಗಿಗೆ ಕೂಡ ಬೆಂಬಲ ಬೆಲೆ ನೀಡಬೇಕು ಮತ್ತು ಖರೀದಿ ಕೇಂದ್ರ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಜೊತೆಗೆ ಆಹಾರ ಸರಬರಾಜು ಸಚಿವರಾದ ಮುನಿಯಪ್ಪರವರಲ್ಲಿ ರೈತರ ಹಿತ ಕಾಪಾಡುವಂತೆ ಮಾತನಾಡುತ್ತೇನೆ ಎಂದರು.

ರಾಗಿ ಖರೀದಿ ಕೇಂದ್ರದ ಉಸ್ತುವಾರಿ ವಹಿಸಿರುವ ತಾಲೂಕಿನ ವರಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ, ಶಾಸಕರ ನೇತೃತ್ವದಲ್ಲಿ ರಾಗಿ ಬೆಳೆದ ರೈತರನ್ನು ಸನ್ಮಾನಿಸಲಾಯಿತು.

ಜೆಡಿಎಸ್ ಜಿಲ್ಲಾಧ್ಯಕ್ಷ ಮೃತ್ಯುಂಜಯ ಬದಾಮಿ, ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ತಾಲೂಕು ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಕಿನ್ನಾಳ್ ಸುಭಾಷ, ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಗೌರವಾಧ್ಯಕ್ಷ ಮೈನಳ್ಳಿ ಕೊಟ್ರೇಶ, ಪ್ರಗತಿಪರ ಕೃಷಿಕ ಇಟ್ಟಿಗಿ ಕೊಟ್ರೇಶ, ಎಪಿಎಂಸಿ ಕಾರ್ಯದರ್ಶಿ ಶೈಲಜಾ, ಆಹಾರ ಸರಬರಾಜು ಇಲಾಖೆಯ ಅಧಿಕಾರಿ ಮಮತಾ ಗುರುಬಸವರಾಜ, ಸಂಘದ ಅಧ್ಯಕ್ಷರಾದ ಜೆ.ಎಂ.ವಿನಾಯಕ, ನಿರ್ದೆಶಕರಾದ ಎಚ್.ಕೊಟ್ರೇಶ, ಪಿ.ಎಸ್.ಕೊಟ್ರೇಶ, ಜಿ.ಶಿವಣ್ಣ, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಎಂ.ಬಸವರಾಜ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಭವದ ಮೂಲಕ ವಿಜ್ಞಾನ ಕಲಿಯಿರಿ: ಕುಲಪತಿ ಖಾನ್‌
ಮಾರ್ಚ್ 5ರಂದು ರಾಮನಗರದಲ್ಲಿ ಉದ್ಯೋಗ ಮೇಳ