ಅಶೋಕ ಸೊರಟೂರಲಕ್ಷ್ಮೇಶ್ವರ: ಕಳೆದ ಒಂದು ತಿಂಗಳಿಂದ ಪಟ್ಟಣದಲ್ಲಿ ತುಂಗಭದ್ರಾ ನದಿಯ ನೀರು ಬರದೆ ಇರುವುದರಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪುರಸಭೆಯ ಅಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಿರುವುದು ನೋವಿನ ಸಂಗತಿಯಾಗಿದೆ.
ಪುರಸಭೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ದೂರದೃಷ್ಟಿಯ ಕೊರತೆಯಿಂದ ಬೇಸಿಗೆಯ ಆರಂಭದ ದಿನಗಳಲ್ಲಿಯೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಸಂಭವವಿದ್ದು, ಆಗ ಕುಡಿಯುವ ನೀರಿನ ಹಾಹಾಕಾರ ಇನ್ನೂ ಹೆಚ್ಚಾಗುತ್ತದೆ. ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮುಂದೆ ಅಪಾಯ ಕಾದಿದೆ. ಸಾರ್ವಜನಿಕರು ಟ್ಯಾಂಕರ್‌ಗಳ ಮೂಲಕ ತಮ್ಮ ಮನೆಗೆ ಟ್ಯಾಂಕರ್ ನೀರಿಗೆ ೪೦೦-೪೫೦ ರು.ಗಳನ್ನು ಕೊಟ್ಟು ಕುಡಿಯುವ ನೀರು ಹಾಕಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ.ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಒಟ್ಟು ೧೦೩ ಕೊಳವೆ ಬಾವಿಗಳು ಇದ್ದು, ಅವುಗಳಲ್ಲಿ ೨೦-೩೦ರಷ್ಟು ದುರಸ್ತಿಯಲ್ಲಿವೆ. ಇನ್ನುಳಿದ ಕೊಳವೆ ಬಾವಿಗಳ ನೀರು ಕುಡಿಯುಲು ಯೋಗ್ಯವಾಗಿಲ್ಲ. ಪ್ಲೋರೈಡ್ ಅಂಶ ಹೆಚ್ಚಾಗಿರುವ ಕಾರಣ ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಅಲ್ಲದೆ ಕೊಳವೆ ಬಾವಿಗಳ ನೀರನ್ನು ಮುಖ್ಯ ನೀರಿನ ಸಂಗ್ರಹಾಗಾರಕ್ಕೆ ಸಾಗಿಸಲು ಈ ಹಿಂದೆ ಇದ್ದ ಪೈಪ್‌ಗಳನ್ನು ಕಿತ್ತು ಹಾಕಿದ್ದು ಕೂಡಾ ಕುಡಿಯುವ ನೀರು ಸರಬರಾಜು ಮಾಡಲು ತೊಂದರೆಯಾಗಿದೆ, ಈ ನೀರನ್ನು ಸ್ನಾನ, ಬಟ್ಟೆ ತೊಳೆಯಲು ಇತ್ಯಾದಿ ಕಾರ್ಯಕ್ಕೆ ಬಳಸುತ್ತಿದ್ದಾರೆ, ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಕುಡಿಯುವ ನೀರು ತಂದು ಜೀವನ ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ಬಸ್ತಿಬಣದ ನಿವಾಸಿ ಹನಮಂತಪ್ಪ ಗದಗ.
ಲಕ್ಷ್ಮೇಶ್ವರ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳ ನೀರನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಮೈಲಾರ ಜಾತ್ರೆಯ ಅಂಗವಾಗಿ ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದು. ಅದು ನಮ್ಮ ಮೇವುಂಡಿ ಜಾಕ್‌ವೆಲ್ಲಗೆ ಇಂದು ಸಂಜೆ ತಲುಪುವ ನಿರೀಕ್ಷೆ ಇದ್ದು, ೨-೩ ದಿನಗಳಲ್ಲಿ ತುಂಗಭದ್ರಾ ಕುಡಿಯುವ ನೀರನ್ನು ಕೊಡುವ ಕಾರ್ಯ ಮಾಡುತ್ತೇವೆ. ಅತಿಯಾದ ನೀರಿನ ಅವಶ್ಯಕತೆ ಇದ್ದ ಮುಕ್ತಿನಗರಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದೇವೆ. ಅಲ್ಲದೆ ಟ್ಯಾಂಕರ್ ಮೂಲಕ ನೀರು ಪೂರೈಸಲು ೨ ಬಾರಿ ಟೆಂಡರ್ ಕರೆಯಲಾಗಿದ್ದು ಯಾರೂ ಅರ್ಜಿ ಸಲ್ಲಿಸಿಲ್ಲ, ಮರು ಟೆಂಡರ್‌ಗೆ ಅರ್ಜಿ ಕರೆದಿದ್ದೇವೆ ಎಂದು ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.