ಆಲಿಕಲ್ಲು ಮಳೆ: ಹಾನಿಯಾದ ಮನೆಗಳಿಗೆ ಹೆಂಚು

KannadaprabhaNewsNetwork |  
Published : Mar 25, 2026, 02:00 AM IST
ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಅಪಾರ ಹಾನಿಗೊಳಗಾದ ಕಲಘಟಗಿ ತಾಲೂಕಿನ ಮಾಚಾಪುರ ಗ್ರಾಮಸ್ಥರಿಗೆ ಲಾಡ್‌ ಫೌಂಡೇಶನ್‌ ವತಿಯಿಂದ ಹಂಚು ವಿತರಿಸಲಾಯಿತು. | Kannada Prabha

ಸಾರಾಂಶ

ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕ್ಷೇತ್ರಕ್ಕೆ ಭೇಟಿ ಸಮಸ್ಯೆ ಆಲಿಸದಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿತ್ತು.

ಕಲಘಟಗಿ:

ಒಂದು ವಾರದ ಹಿಂದಷ್ಟೇ ಬೃಹತ್‌ ಗಾತ್ರದ ಆಲಿಕಲ್ಲಿನ ಮಳೆಯಾಗಿ ಅಪಾರ ನಷ್ಟವನ್ನುಂಟು ಮಾಡಿದ್ದ ತಾಲೂಕಿನ ಮಾಚಾಪುರ ಗ್ರಾಮದ 180ಕ್ಕೂ ಅಧಿಕ ಮನೆಗಳಿಗೆ ಮಂಗಳವಾರ ಸಂತೋಷ ಲಾಡ್‌ ಫೌಂಡೇಶನ್‌ ವತಿಯಿಂದ ಹೆಂಚು ವಿತರಿಸಲಾಯಿತು.

ಆಲಿಕಲ್ಲು ಮಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದರೂ ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಕ್ಷೇತ್ರಕ್ಕೆ ಭೇಟಿ ಸಮಸ್ಯೆ ಆಲಿಸದಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕನ್ನಡಪ್ರಭ "ನಲುಗಿದ ಕಲಘಟಗಿಗೆ ಭೇಟಿ ನೀಡದ ಲಾಡ್‌ " ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿರುವ ಸಚಿವರು, ಮಾಚಾಪುರದಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಹೆಂಚು ವಿತರಿಸಿದ್ದಾರೆ. ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಲಾಗಿಲ್ಲ. ಆದರೆ, ಗ್ರಾಮದಲ್ಲಿ ಆಗಿರುವ ಸಮಸ್ಯೆ ಅರಿತು ನೆರವು ನೀಡಿದ್ದಾರೆ ಎಂದು ಫೌಂಡೇಷನ್‌ ಸದಸ್ಯರು ತಿಳಿಸಿದ್ದಾರೆ. ಮಾಚಾಪುರದಲ್ಲಿ 180ಕ್ಕೂ ಅಧಿಕ ಮನೆಗಳಿಗೆ ತಲಾ 200 ಹೆಂಚು ನೀಡಲಾಗಿದೆ. ಈ ವೇಳೆ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್ ಮುರಳ್ಳಿ ಮಾತನಾಡಿ, ಕಲಘಟಗಿಯ ಜನತೆ ಕಷ್ಟ ಅನುಭವಿಸುವಾಗ ಸಚಿವ ಸಂತೋಷ ಲಾಡ್‌ ಅವರು ಎಂದಿಗೂ ಸುಮ್ಮನೆ ಕುಳಿತವರಲ್ಲ. ಅಧಿವೇಶನ ಇರುವುದರಿಂದ ಕ್ಷೇತ್ರಕ್ಕೆ ಬರದೆ ಹೋದರೂ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ಜತೆಗೆ ಪ್ರತಿ ಮನೆಗೆ ₹6500 ಪರಿಹಾರ ನೀಡುವ ಭರವಸೆ ನೀಡಲಾಗಿದೆ. ಆಲಿಕಲ್ಲು ಮಳೆಯಿಂದಾಗಿ ನೂರಾರು ಎಕರೆ ಹೊಲಗಳಲ್ಲಿನ ಬೆಳೆ ನಾಶವಾಗಿದ್ದು ಈಗಾಗಲೇ ಇಲಾಖೆಗಳಿಂದ ಬೆಳೆ ನಷ್ಟದ ಸಮೀಕ್ಷೆ ನಡೆಸಲಾಗಿದೆ. ಶೀಘ್ರವೇ ರೈತರಿಗೆ ಸೂಕ್ತ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಗ್ರಾಮಸ್ಥ ವಾಸು ಹುಲಿಹೊಂಡ ಮಾತನಾಡಿ, ಈಚೆಗೆ ಸುರಿದ ಆಲಿಕಲ್ಲು ಮಳೆಯಿಂದಾಗಿ ಗ್ರಾಮದ ಹಲವು ಮನೆ, ಬೆಳೆ ನಾಶವಾಗಿದ್ದವು. ಸಚಿವರು ಹೆಂಚು ವಿತರಿಸಿರುವುದು ತುಂಬಾ ಆಸರೆಯಾಗಿದೆ ಎಂದರು.

ಈ ವೇಳೆ ಪಪಂ ಮಾಜಿ ಅಧ್ಯಕ್ಷ ಬೂದಪ್ಪ ಹುರಕಡ್ಲಿ, ಧಾರವಾಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಆರ್. ಪಾಟೀಲ್, ಬಾಬು ಅಂಚಟಗೇರಿ, ಬಾಳು ಖಾನಾಪುರ, ಸಚಿವರ ಆಪ್ತ ಸಹಾಯಕ ಹರಿಶಂಕರ್ ಮಠದ, ಸೋಮಶೇಖರ ಬೆನ್ನೂರು, ಗಿರೀಶ ಸೂರ್ಯವಂಶಿ, ಪ್ರವೀಣ್ ಸೂರ್ಯವಂಶಿ, ಪ್ರಭಂಜನ ಹುಲಿಕಟ್ಟಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಹನ ಶೀಲರು ಹಾಗೂ ಕೆಚ್ಚೆದೆಯ ಹೋರಾಟಗಾರರು- ಡಾ. ಮೀನಾಕ್ಷಿ ಜಂಗಮನಿ
ಅನ್ಯ ಜಿಲ್ಲೆಗೆ ಭದ್ರಾ ನೀರು ಕೊಟ್ಟರೆ ಸಂಕಷ್ಟ: ಆತಂಕ