ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮದ ಸಾರ್ವಜನಿಕ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ನೆರೆಹೊರೆ ಜಮೀನುಗಳಿಗೆ ಹೋಗಲು, ಕೃಷಿ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ. ರೈತರು, ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕಾಗಿ ಅನುಕೂಲವಾಗಲು ರಸ್ತೆ ಒತ್ತುವರಿ ತೆರವಿಗಾಗಿ ಅಪ್ಪಾಜಯ್ಯನದೊಡ್ಡಿ ಗ್ರಾಮದ ರಾಜೇಶ್ ಮಳವಳ್ಳಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ಈ ಸಂಬಂಧ ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ಕಸಬಾ 2 ನೇ ವೃತ್ತದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ರವಿಕುಮಾರ್, ಶಿವಕುಮಾರ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲೂಕು ಸರ್ವೇಯರ್ ಎಂ.ಎಸ್.ಬೀರೇಶ್ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ರಸ್ತೆ ಜಾಗವನ್ನು ಗುರುತಿಸಿದರು. ಆಗ ಸ್ಥಳದಲ್ಲಿ ಸೇರಿದ್ದ ನೂರಾರು ರೈತರು ನಿರ್ದಿಷ್ಟ ಪಡಿಸಿದ ಒತ್ತುವರಿ ತೆರವು ಮಾಡಲು ಅಡ್ಡಿಪಡಿಸಿದರು.ಸಮಸ್ಯೆ ಅರಿತು ರಸ್ತೆ ತೆರವು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರಲ್ಲಿ ರಸ್ತೆಯನ್ನು ಆರಂಭದಿಂದ ಅಂತ್ಯದ ವರೆಗೂ ತೆರವು ಮಾಡಬೇಕೆಂದು ರೈತರು ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಈ ದಿನವೇ ಸಂಪೂರ್ಣ ರಸ್ತೆ ತೆರವುಗೊಳಿಸುವಂತೆ ಸರ್ವೇಯರ್ ಅವರಿಗೆ ಸೂಚನೆ ನೀಡಿದರು.
ನಂತರ ಹಲಗೂರು ಪೊಲೀಸ್ ಠಾಣೆ ಪಿಎಸ್ಐ ಲೋಕೇಶ ಮತ್ತು ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಸದರಿ ಕಾಲು ದಾರಿಯನ್ನು ಜೆ.ಸಿ.ಬಿ ಯಂತ್ರದಿಂದ ತೆರವು ಗೊಳಿಸಿ ರೈತರ ಜಮೀನುಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು.