ರಾಜ್ಯದಲ್ಲಿ 2019-20 ರಿಂದ 2023-24ನೇ ಸಾಲಿನ ಮನರೇಗಾ ಅನುಷ್ಠಾನದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಮೊದಲೇ ನಿರ್ಮಿಸಿದ್ದ ಮನೆಗಳಿಗೆ ನರೇಗಾ ಅಡಿ ಹಣ ಪಾವತಿ ಮಾಡಲಾಗಿದೆ. ಅನರ್ಹ ಫಲಾನುಭವಿಗಳು, ನಿರ್ಮಾಣ ಆಗದ ಮನೆಗಳಿಗೆ ಅಕ್ರಮವಾಗಿ ಹಣ ಪಾವತಿ ಮಾಡಿರುವುದಾಗಿ ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ 2019-20 ರಿಂದ 2023-24ನೇ ಸಾಲಿನ ಮನರೇಗಾ ಅನುಷ್ಠಾನದಲ್ಲಿ ಸಾಕಷ್ಟು ಅಕ್ರಮಗಳು ನಡೆದಿದ್ದು, ಮೊದಲೇ ನಿರ್ಮಿಸಿದ್ದ ಮನೆಗಳಿಗೆ ನರೇಗಾ ಅಡಿ ಹಣ ಪಾವತಿ ಮಾಡಲಾಗಿದೆ. ಅನರ್ಹ ಫಲಾನುಭವಿಗಳು, ನಿರ್ಮಾಣ ಆಗದ ಮನೆಗಳಿಗೆ ಅಕ್ರಮವಾಗಿ ಹಣ ಪಾವತಿ ಮಾಡಿರುವುದಾಗಿ ಸಿಎಜಿ ವರದಿಯಲ್ಲಿ ಬಹಿರಂಗಗೊಂಡಿದೆ.
ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಕುರಿತ ಮಹಾಲೇಖಪಾಲರ ವರದಿಯಲ್ಲಿ ಮನರೇಗಾ ಅನುಷ್ಠಾನದಲ್ಲಿ ಸಾಕಷ್ಟು ಲೋಪ, ನಿಯಮ ಉಲ್ಲಂಘನೆಯಾಗಿರುವ ಉಲ್ಲೇಖವಾಗಿದೆ.
ಮನರೇಗಾ ಯೋಜನೆಯಡಿ ಅರ್ಹ ಕುಟುಂಬಕ್ಕೆ ವಾರ್ಷಿಕ 100 ದಿನದ ಉದ್ಯೋಗ ಖಚಿತಪಡಿಸಲಾಗಿದೆ. ಆದರೆ, ಬಹುಪಾಲು ಕುಟುಂಬಗಳಿಗೆ ಕೇವಲ 1ರಿಂದ 30 ದಿನಗಳ ಉದ್ಯೋಗವನ್ನಷ್ಟೇ ನೀಡಿರುವುದು ಬೆಳಕಿಗೆ ಬಂದಿದೆ. ಹಾಗೆಯೇ, ಗುತ್ತಿಗೆ ನೇಮಕಾತಿಗಾಗಿ ರಾಜ್ಯದ ಮೀಸಲು ನೀತಿ ಅನುಸರಿಸದೆ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡದವರು, ವಿಕಲಚೇತನರಿಗೆ ಸಮರ್ಪಕ ಪ್ರಾತಿನಿಧ್ಯವಿಲ್ಲದೆ ಕಡೆಗಣಿಸಿರುವುದು ಬಯಲಾಗಿದೆ.
ಕಾಮಗಾರಿ ನಡೆಯದಿದ್ದರೂ ಹಣ:
ವಸತಿ ಕಾಮಗಾರಿಗಳಲ್ಲಿ ಈಗಾಗಲೇ ಪೂರ್ಣಗೊಂಡ ಮನೆಗಳಿಗೆ ಪಾವತಿ, ಅನರ್ಹ ಫಲಾನುಭವಿಗಳಿಗೆ ಪಾವತಿ, ನಿರ್ಮಾಣ ಕಾರ್ಯ ಕೈಗೊಳ್ಳದೆ ಪಾವತಿ, ನಿಗದಿತ ಮಿತಿಗಿಂತ ಹೆಚ್ಚು ಹಣ ಪಾವತಿಯಂತಹ ವಂಚನೆಯ ವಹಿವಾಟುಗಳು ನಡೆದಿರುವ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ. ಘನತ್ಯಾಜ್ಯ ನಿರ್ವಹಣಾ ಶೆಡ್, ಚೆಕ್‌ಡ್ಯಾಂ ಮತ್ತು ಸಾಮಾಜಿಕ ಅರಣ್ಯೀಕರಣದಡಿ ಸಸಿಗಳನ್ನು ಬೆಳೆಸುವುದಕ್ಕೆ ಸಂಬಂಧಿಸಿ ಪರೀಕ್ಷಾ ತನಿಖೆಯಲ್ಲಿ ಕಾಮಗಾರಿಗಳಲ್ಲಿ ನಕಲಿ ದಾಖಲೆ, ಮೋಸದ ಪಾವತಿಗಳಾಗಿರುವುದು, ನಿರುದ್ಯೋಗ ಭತ್ಯೆ ನೀಡದಿರುವುದು ಕಂಡುಬಂದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಶಿಫಾರಸು ಏನು?:
ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಪಂಗಳಲ್ಲಿ ತನಿಖೆ ನಡೆಸಿ ಅನಗತ್ಯವಾಗಿ ಮಾಡಿದ ಪಾವತಿ ಮರು ವಸೂಲಿ ಜತೆಗೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆ ನಿಗದಿಪಡಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.