ಮಳೆ ಸುರಿದಾಗಲೆಲ್ಲ ಹಲಗೂರು ಸಾರಿಗೆ ಬಸ್ ನಿಲ್ದಾಣ ಮತ್ತು ಕನಕಪುರಕ್ಕೆ ಹೋಗುವ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು, ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ಹೋಗುವುದಕ್ಕೂ ಮತ್ತು ವ್ಯಾಪಾರ ವಹಿವಾಟು ನಡೆಸಲು ಹಲಗೂರಿಗೆ ಬರಬೇಕು.
ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರು
ಮಳೆ ಸುರಿದಾಗಲೆಲ್ಲ ಇಲ್ಲಿನ ಸಾರಿಗೆ ಬಸ್ ನಿಲ್ದಾಣ ಮತ್ತು ಕನಕಪುರಕ್ಕೆ ಹೋಗುವ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು, ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆಯಾಗುತ್ತಿದೆ.
ಮಳೆ ನೀರು ಸರಿಯಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ, ಇದರಿಂದ ಮಳೆ ಬಂದಾಗೆಲ್ಲ ಬಸ್ ನಿಲ್ದಾಣ, ಕನಕಪುರ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು, ಸಾರ್ವಜನಿಕರು ಸಮಸ್ಯೆಗೆ ಎದುರಿಸುವಂತಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕಿದೆ.
ಮಳೆಗಾಲ ಆರಂಭವಾಗಿದ್ದು, ಗುರುವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ಜೋರಾದ ಮಳೆಯಿಂದ ಹಲಗೂರಿನ ಜನಜೀವನ ಅಸ್ತವ್ಯಸ್ತಗೊಂಡು ಪತ್ರಿಕೆ, ಹಾಲು ಸರಬರಾಜು ಮಾಡುವವರಿಗೆ, ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಯಿತು.
ಗ್ರಾಮೀಣ ಪ್ರದೇಶದಿಂದ ಪಟ್ಟಣ ಪ್ರದೇಶಕ್ಕೆ ಹೋಗುವುದಕ್ಕೂ ಮತ್ತು ವ್ಯಾಪಾರ ವಹಿವಾಟು ನಡೆಸಲು ಹಲಗೂರಿಗೆ ಬರಬೇಕು. ಬುಧವಾರ ರಾತ್ರಿಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಮಳೆ ಬೀಳುತ್ತಿದ್ದ ಕಾರಣ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ, ಬೇರೆ ಗ್ರಾಮಗಳಿಗೆ ಹೋಗುವವರಿಗೂ ತೀವ್ರ ತೊಂದರೆ ಎದುರಾಯಿತು. ಹೋಟೆಲ್ ಮತ್ತು ಅಂಗಡಿ ಮಾಲೀಕರಿಗೆ ವ್ಯಾಪಾರ ಕಡಿಮೆಯಾಗಿತ್ತು. ಬೆಳಗ್ಗೆಯಿಂದ ನಿರೀಕ್ಷೆಯಷ್ಟು ವಹಿವಾಟು ಇಲ್ಲದೆ ಸುಮ್ಮನೆ ಕುಳಿತಿದ್ದೇವೆ ಎಂದು ಜಗದೀಶ್, ರಾಮದಾಸು ಹೇಳಿದರು.
ಕಳೆದ ಹಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದರು. ಇಂದು ಸುರಿದ ಮಳೆಯಿಂದ ಬಿಸಿಲಿನ ತಾಪವನ್ನು ಕಡಿಮೆ ಮಾಡಿ ವಾತಾವರಣ ತಂಪಾಗಿಸಿದೆ. ರೈತರು ತಮ್ಮ ಜಮೀನುಗಳನ್ನು ಹಸನು ಮಾಡಿಕೊಳ್ಳಲು ಈ ಮಳೆ ಸಹಕಾರಿಯಾಗಿದೆ. ಕೆಲ ದಿನಗಳ ಹಿಂದೆ ಮಳೆಯಾಗಿದ್ದರೆ ಎಳ್ಳಿನ ಬೆಳೆ ಚೆನ್ನಾಗಿ ಬರುತ್ತಿತ್ತು. ಈ ಸುರಿದಿರುವುದರಿಂದ ಬಾಳೆ ಮತ್ತು ಅಡಿಕೆ ವ್ಯವಸಾಯಕ್ಕೆ ಈ ಮಳೆ ಸಹಕಾರಿಯಾಗಲಿದೆ ಎಂದು ಸಾಗ್ಯ ಗ್ರಾಮದ ರೈತ ಶಿವಲಿಂಗೇಗೌಡ ತಿಳಿಸಿದರು.
ಮಳೆ ಬಂದಾಗ ನೀರು ನಿಂತು ವಿದ್ಯಾರ್ಥಿಗಳು, ಸಾರ್ವಜನಿಕರು, ಸಾರಿಗೆ ಬಸ್ಸುಗಳಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಮಳೆ ನೀರು ಐದಾರು ದಿನಗಳು ಒಂದೆಡೆ ನಿಂತುಕೊಳ್ಳುವುದರಿಂದ ಸೊಳ್ಳೆಗಳು ಜಾಸ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಾರಿಗೆ ಬಸ್ ನಿಲ್ದಾಣದಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎಂದು ಸಾರಿಗೆ ಬಸ್ ನಿಲ್ದಾಣ ಬಳಿಯ ಆಟೋ ಚಾಲಕ ಸುರೇಶ್ ಆಗ್ರಹಿಸಿದರು. ಮಳೆಗಾಲದಲ್ಲಿ ಆಗುವ ಸಮಸ್ಯೆ ಕುರಿತು ಸುರೇಶ, ಗಿರೀಶ, ಪ್ರವೀಣ, ರವಿ, ಪ್ರಭು ಸೇರಿದಂತೆ ಇತರರು ಮಾಹಿತಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.