ಹಲಕಟ್ಟಾ ರೈತರ ದಶಕದ ಪಹಣಿ ದೋಷಗ್ರಹಣ ಮೋಕ್ಷ

KannadaprabhaNewsNetwork |  
Published : Aug 15, 2024, 01:53 AM IST
ಫೋಟೋ- ಹಲಕಟ್ಟಾ 2ಚಿತ್ತಾಪುರ ತಾಲೂಕಿನ ಹಲಕಟ್ಟಾದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆಯವರು ಅಲ್ಲಿನ 513 ರೈತರಿಗೆ ದೋಷ ಇಲ್ಲದಂತಹ ಪಹಣಿ ಪತ್ರಗಳನ್ನು ವಿತರಿಸಿ ಶುಭ ಕೋರಿದರು. | Kannada Prabha

ಸಾರಾಂಶ

ಸಚಿವ ಪ್ರಿಯಾಂಕ್‌ ಖರ್ಗೆ ವಿಶೇಷ ಆಸಕ್ತಿ, ಜಿಲ್ಲಾಡಳಿತದಿಂದ ಸ್ತುತ್ಯಾರ್ಹ ಕಾರ್ಯ. 513 ರೈತರಿಗೆ ದೋಷ ಮುಕ್ತ ಪಹಣಿ ವಿತರಣೆ. ದಶಕಗಳಿಂದ ಜಮೀನು ಪಹಣಿ ದೋಷದಿಂದಾಗಿ ಬಳಲಿದ್ದ ಹಲಕಟ್ಟಾ ರೈತರು. ಅಳತೆ ಹೇರಾಫೇರಿ, ಹೆಸರು ಅದಲ್‌ ಬದಲ್‌... ಇನ್ನೇನೆನೋ ಸಮಸ್ಯೆಗಳು. ರೈತರ ಬವಣೆ ಅರಿತ ಪ್ರಿಯಾಂಕ್‌ ಖರ್ಗೆ- ಸಮಸ್ಯೆಗೆ ಸ್ಪಂದಿಸುವ ಭರವಸೆ. ವೃತ್ತಿ ಜೀವನದಲ್ಲಿ ನೆನಪಿನಲ್ಲಿರುವಂತ ಕೆಲಸ ಎಂದ ಜಿಲ್ಲಾಧಿಕಾರಿ ಫೌಜಿಯಾ

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಹಲಕಟ್ಟಾ (ಚಿತ್ತಾಪುರ)

ಜಮೀನು ತಮ್ಮದೇ ಆಗಿದ್ರೂ ಹಲಕಟ್ಟಾ ಗ್ರಾಮದ ರೈತರು ಅದನ್ನು ಮಾರುವಂತಿರಲಿಲ್ಲ, ಪಹಣಿ ದಾಖಲೆ ಕೊಟ್ಟು ಬ್ಯಾಂಕ್‌ಗಳಲ್ಲಿ ಸಾಲ ಮಾಡುವಂತೆಯೂ ಇರಲಿಲ್ಲ, ಇನ್ನು ಪಹಣಿ ತಮ್ಮದಾಗಿದ್ರೂ ತಪ್ಪು ಹೆಸರು, ಆಕಾರ್‌ ಬಂದಿ, ನಕಾಶೆಗಳಿಂದಾಗಿ ಅವರು ಅನುಭವಿಸಿದ ಗೋಳಂತೂ ದೇವರೇ ಬಲ್ಲ!

ಇದೀಗ ಕಲಬುರಗಿ ಜಿಲ್ಲಾಡಳಿತ ಹಲಕಟ್ಟಾ ಊರಿನ ರೈತರ ಈ ಗೋಳಿಗೆ ಇತಿಶ್ರೀ ಹೇಳಿದೆ. 1992 ರಿಂದ ಈ ರೀತಿ ಚಿತ್ರ ವಿಚಿತ್ರ ಪಹಣಿ ಸಂಬಂಧಿ ಸಮಸ್ಯೆಗಳಿಂದ ನರಳುತ್ತಿದ್ದ ರೈತರು ಖುಷಿಯಾಗಿದ್ದಾರೆ.

ಪಹಣಿಯೇ ದೋಷಪೂರಿತವಾಗಿದೆ. ಏನ್ಮಾಡೋಣವೆಂದು ಹಲಕಟ್ಟಾ ರೈತರೆಲ್ಲರೂ ಸೇರಿಕೊಂಡು ತಮ್ಮ ಬಳಿಗೆ ಬಂದು ಸಮಸ್ಯೆ ವಿವರಿಸಿದಾಗ ಅದನ್ನರಿತ ಸಚಿವ ಪ್ರಿಯಾಂಕ್‌ ಖರ್ಗೆ ತಾವು ಪ್ರತಿನಿಧಿಸೊ ಮತಕ್ಷೇತ್ರದ ಜನತೆಯ ಭೂದಾಖಲೆ ಸಂಬಂಧಿ ಇಂತಹ ತಪ್ಪಿಗೆ ಪರಿಹಾರ ನೀಡಲು ಮಾಡಿದ್ದ ಸಂಕಲ್ಪ ಇದೀಗ ಈಡೇರಿದೆ.

ಇದರ ಪ್ರತಿಫಲವಾಗಿ ಚಿತ್ತಾಪುರದ ಹಲಕಟ್ಟಾ ಗ್ರಾಮದ ದೋಷಯುಕ್ತ ಪಹಣಿಗಳು ಸಂಪೂರ್ಣ ಗಣಕೀಕರಣಗೊಂಡಿವೆ. ಕಳೆದ ಹಲವಾರು ವರ್ಷಗಳ ಪಹಣಿ ದೋಷ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಸಚಿವ ಪ್ರಿಯಾಂಕ್ ಖರ್ಗೆ ಖುದ್ದು ಹಲಕಟ್ಟಾಕ್ಕೆ ಹೋಗಿ 513 ರೈತರಿಗೆ ನೂತನ ಪಹಣಿ ವಿತರಣೆ ಮಾಡಿ ಶುಭ ಕೋರಿದ್ದಾರೆ.

ಎತ್ತಿನ ಬಂಡಿಯಲ್ಲಿ ಪ್ರಿಯಾಂಕ್‌, ಡಿಸಿ, ಸಿಇಒಗೆ ಮೆರವಣಿಗೆ: ದೋಷಮುಕ್ತ ಪಹಣಿಗಳನ್ನು ನೀಡಲು ಪ್ರಿಯಾಂಕ್‌ ಖರ್ಗೆ ಊರಿಗೆ ಬರೋದನ್ನರಿತ ಹಲಕಟ್ಟಾ ಗ್ರಾಮಸ್ಥರು ಜೋಡೆತ್ತಿನ ಬಂಡಿಯಲ್ಲಿ ಸಚಿವ ಖರ್ಗೆ, ಡಿಸಿ ಫೌಜಿಯಾ, ಸಿಇಒ ಮೀನಾ ಇವರನ್ನೆಲ್ಲ ಊರಿನಲ್ಲಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡಿತ್ತು.

ಪಹಣಿ ದೋಷಕ್ಕೇನು ಕಾರಣ?: 1992 ರಲ್ಲಿ ವಾಡಿ, ಬಸವೇಶ್ವರ ನಗರ, ದೇವಾಪುರ ಹಾಗೂ ಹಲಕಟ್ಟಾ ಗ್ರಾಮಗಳು ಕಂದಾಯ ಗ್ರಾಮಗಳಾಗಿ ವಿಭಾಗವಾದ ನಂತರ ಹಲವಾರು ವರ್ಷಗಳ ಕಾಲ ಹಲಕಟ್ಟಾ ಗ್ರಾಮದ ಜಮೀನುಗಳಿಗೆ ಸಂಬಂಧಿಸಿದಂತಹ ಜಮೀನುಗಳ ಪಹಣಿಯಲ್ಲಿ ದೋಷ ಉಂಟಾಗಿ ಹೆಸರುಗಳು, ಆಕಾರ ಬಂದ್ ಹಾಗೂ ನಕಾಶೆಯಲ್ಲಿ ತಪ್ಪಾಗಿ ನಮೂದಾಗಿ ರೈತರಿಗೆ ಭಾರಿ ಸಮಸ್ಯೆಯಾಗಿತ್ತು. ಪಹಣಿ, ಆಧಾರ್‌ ಜೋಡಣೆಯಂತಹ ಡಿಜಿಟಲ್‌ ವ್ಯವಸ್ಥೆಯಲ್ಲಿ ಈ ದೋಷ ಎದ್ದು ಕಂಡಿತ್ತು. ಹಲಕಟ್ಟಾ ಗ್ರಾಮದವರು ಸಮಸ್ಯೆಯನ್ನು ಸಚಿವ ಖರ್ಗೆಗೆ ವಿವರಿಸಿದಾಗ ಅವರೂ ಪರಿಹಾರಕ್ಕೆ ಸಂಕಲ್ಪಿಸಿದ್ದರು. ಜಿಲ್ಲಾಧಿಕಾರಿ, ಚಿತ್ತಾಪುರ ತಹಸೀಲ್ದಾರ್‌ ಸೇರಿದಂತೆ ಗ್ರಾಮ ಲೆಕ್ಕಿಗರವರೆಗಿನ ನಿರಂತರ ಪರಿಶ್ರಮದಿಂದ ಪಹಣಿ ದೋಷ ಮುುಕ್ತವಾದವು. ಇದರೊಂದಿಗೆ ರೈತರಿಗೆ ಆಗುತ್ತಿದ್ದ ಸಮಸ್ಯೆಗೆ ಕಾಯಂ ಪರಿಹಾರ ದೊರಕಿದೆ.

ಹಲಕಟ್ಟಾ ಸಮಾರಂಭದಲ್ಲಿ ಸಾಂಕೇತಿಕವಾಗಿ 15 ರೈತರಿಗೆ ಪಹಣಿ ಪತ್ರ ವಿತರಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ರೈತರಿಗೆಲ್ಲರಿಗೂ ಶುಭ ಕೋರಿದರು.

ಹಿರೇಮಠದ ಮುನೇಂದ್ರ ಶಿವಾಚಾರ್ಯ, ಜಿಪಂ ಸಿಮೊ ಭಂವರಸಿಂಗ್ ಮೀನಾ, ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಡಿಎಸ್ ಪಿ ಶಂಕರಗೌಡ ಪಾಟೀಲ್, ತಹಸೀಲ್ದಾರ್‌ ಅಮರೇಶ್ ಬಿರಾದಾರ, ಗ್ರಾಪಂ ಅಧ್ಯಕ್ಷ ರಾಕೇಶ್ ಸಿಂಧೆ, ಭೀಮಣ್ಣ ಸಾಲಿ, ಶಿವಾನಂದ್ ಪಾಟೀಲ್, ಅಜೀಜ್ ಸೇಠ, ಮಹೆಬೂಬ್ ಸಾಬ್, ನಾಗರೆಡ್ಡಿ ಪಾಟೀಲ್ ಕರದಳ್ಳಿ, ಶ್ರೀನಿವಾಸ ಸಗರ, ಜಗದೀಶ್ ಸಿಂಧೆ, ವೀರನಗೌಡ‌ ಪರಸರೆಡ್ಡಿ, ರೈತಮುಖಂಡ ಶಿವಕುಮಾರ ಆಂದೋಲ, ಈರಣ್ಣ ಇಸಬಾ ಇದ್ದರು.ಪಹಣಿಗಳಲ್ಲಿನ ಹೆಸರುಗಳ ಸರಿಪಡಿಸುವಿಕೆಗೆ ಅತ್ಯಂತ ನಾಜೂಕಾಗಿ ಕ್ರಮ ಕೈಳ್ಳಲಾಗಿದೆ. ಕಂದಾಯ‌ ಸರ್ವೆ ಇಲಾಖೆಗಳ ಹಿರಿಯ ಅಧಿಕಾರಿಗಳ ತಂಡದ ಸಹಕಾರದಿಂದ ಹಾಗೂ ಮುಖ್ಯವಾಗಿ ಸಚಿವ ಖರ್ಗೆಯವರ ವಿಶೇಷ ಆಸಕ್ತಿ, ಸೂಕ್ತ ಮಾರ್ಗದರ್ಶನದಲ್ಲಿ ಇದೆಲ್ಲ ಸಾಧ್ಯವಾಗಿದೆ. ಇದು ನನ್ನ ವೃತ್ತಿ ಜೀವನದಲ್ಲಿ‌‌ ನೆನಪಿನಲ್ಲಿರುವಂತಹ ಕ್ರಮವಾಗಿದೆ.

- ಫೌಜಿಯಾ ತರನ್ನುಮ್‌, ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆಕಂದಾಯ ಗ್ರಾಮಗಳಾದ ನಂತರ ಹಲಕಟ್ಟಾ ರೈತರ ಜಮೀನುಗಳ ಪಹಣಿಗಳಲ್ಲಿನ ದೋಷ ಸರಿಪಡಿಸುವ ಕಾರ್ಯಕ್ಕೆ ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರಿಂದ ವಿಳಂಬವಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕಾರಿಗಳ ಅವಿರತ ಶ್ರಮದಿಂದಾಗಿ ಇಂದು ದೋಷರಹಿತ ಪಹಣಿಗಳ ವಿತರಣೆ ಮಾಡುವಂತಾಗಿದೆ.

- ಪ್ರಿಯಾಂಕ್‌ ಖರ್ಗೆ, ಕಲಬುರಗಿ ಉಸ್ತುವಾರಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!