ಕನ್ನಡದ ಅಮೂಲ್ಯ ಸಾಹಿತ್ಯ ಪರಂಪರೆಯಲ್ಲಿ ವಚನಗಳಿಗೆ ಅಗ್ರಸ್ಥಾನವಿದೆ. ತಾಳೆಗರಿ ಹಾಗೂ ಹಸ್ತಪ್ರತಿಗಳಲ್ಲಿ ಉಳಿದಿದ್ದ ವಚನಗಳನ್ನು ಸಂಗ್ರಹಿಸಿ, ಮುದ್ರಿಸಿ, ಅನುದಾದಿಸಿ ಕನ್ನಡಿಗರಿಗೆ ಮಾತ್ರವಲ್ಲದೆ ಅನ್ಯಭಾಷಿಕರಿಗೂ ಸಮರ್ಪಕವಾಗಿ ತಲುಪಿಸುವಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಸೇವೆ ಸ್ಮರಣೀಯ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದರು. ಕನ್ನಡ ಮುದ್ರಣಾಲಯಗಳ ಇತಿಹಾಸ ಸಂಶೋಧನಾ ಕೇಂದ್ರ ಹೊರತಂದಿರುವ ‘ವಚನ ಪಿತಾಮಹ ಎಂದೇ ಪ್ರಖ್ಯಾತರಾದ ಡಾ.ಫ.ಗು.ಹಳಕಟ್ಟಿ’ ಅವರ ಕುರಿತ ‘ಮುದ್ರಣ ಗುಮ್ಮಟ’ ಕೃತಿಯನ್ನು ಶುಕ್ರವಾರ ನಗರದ ತಮ್ಮ ನಿವಾಸದಲ್ಲಿ ಲೋಕಾರ್ಪಣೆ ಮಾಡಿ ಸಚಿವರು ಮಾತನಾಡಿದರು.
ಈ ವೇಳೆ ಅಖಿಲ ಭಾರತ ಮುದ್ರಣಕಾರರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಆರ್.ಜನಾರ್ಧನ್, ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಅಧ್ಯಕ್ಷ ಬಿ.ಆರ್.ಅಶೋಕ್ ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ, ಕನ್ನಡಪರ ಹೋರಾಟಗಾರ ಪಾಲನೇತ್ರ, ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ರಾಜಶೇಖರ ಮತ್ತಿತರರು ಉಪಸ್ಥಿತರಿದ್ದರು.