ಗದಗ: ಕಲ್ಯಾಣ ಕ್ರಾಂತಿಯ ನಂತರ ಶರಣರಿಂದ ದೊರೆತ ತಾಳೆಗರಿ, ಹಸ್ತಪ್ರತಿ ಕಟ್ಟುಗಳು ತಲೆತಲಾಂತರದಿಂದ ಪೂಜೆಗೊಳ್ಳುತ್ತಿದ್ದವು. ಇಂತಹ ಅಮೂಲ್ಯ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಮುದ್ರಿಸಿ ವಚನ ಸಾಹಿತ್ಯ ಬೆಳಕನ್ನು ಮನೆಮನಗಳಿಗೆ ಪಸರಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಶರಣ ಸಂಸ್ಕೃತಿ ಚಿಂತಕಿ ಗೌರಕ್ಕ ಬಡಿಗಣ್ಣವರ ಹೇಳಿದರು.
ಅಮೂಲ್ಯವಾದ ವಚನಗಳನ್ನು ಮುದ್ರಿಸಲು ಯಾರೂ ಮುಂದೆ ಬರದೇ ಹೋದಾಗ ತಮ್ಮ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯ ಸ್ಥಾಪಿಸಿ ವಚನ ಸಂಪುಟ ಹೊರತಂದರು. ಇವರ ಮೂಲಕ 250ಕ್ಕೂ ಹೆಚ್ಚು ವಚನಕಾರರು ಬೆಳಕಿಗೆ ಬಂದರು. 150ಕ್ಕೂ ಹೆಚ್ಚು ಕೃತಿ ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿ ಅವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜದ ಅಭಿವೃದ್ಧಿಗಾಗಿ ದುಡಿದ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದರು.ಶಿವಲೀಲಾ ಅಕ್ಕಿ ಮಾತನಾಡಿ, ಜಾಗತಿಕ ಸಾಹಿತ್ಯಕ್ಕೆ ವಚನ ಸಾಹಿತ್ಯ ಕನ್ನಡದ ಕೊಡುಗೆಯಾಗಿದೆ. ಇಲ್ಲಿರುವ ವಿಚಾರ ಅರಿತು ಆಚರಿಸಿದರೆ ಜೀವನ ಪಾವನವಾಗುತ್ತದೆ. ಹಳಕಟ್ಟಿ ಶರಣರು ತಮ್ಮ ಜೀವನವನ್ನೇ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.
ಡಾ. ಫ.ಗು. ಹಳಕಟ್ಟಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗೌರವ ಕಾರ್ಯದರ್ಶಿ ಡಾ. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ನಾಯಕ ನಿರೂಪಿಸಿದರು. ರಾಹುಲ್ ಗಿಡ್ನಂದಿ ವಂದಿಸಿದರು.