ವಚನ ಸಾಹಿತ್ಯ ರಕ್ಷಣೆಗೆ ಜೀವ ಸವೆಸಿದ ಹಳಕಟ್ಟಿ

KannadaprabhaNewsNetwork |  
Published : Jul 07, 2025, 12:34 AM IST
ಪೋಟೋ(2) : ಆಲಮಟ್ಟಿ ರಾವಬಹದ್ದೂರ ಫ. ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಜನ್ಮ ದಿನದ ಅಂಗವಾಗಿ ನಡೆದ ವಚನ ಸಾಹಿತ್ಯ ಸಂಸ್ಕರಣಾ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಉಳವಿಗಾಗಿ ಡಾ.ಫ.ಗು.ಹಳಕಟ್ಟಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಷಮಶೀತಕ್ಕೆ ಅವರು ಒಳಗಾದರೂ ಸಹ ವಚನ ನಿಧಿ ಸಂರಕ್ಷಣೆಗೆ ಹಗಲು ರಾತ್ರಿಯನ್ನದೆ ತಡಕಾಡಿ ಜೀವ ಸವೆದಿದ್ದಾರೆ. ಜೀವದ ಹಂಗ ತೊರೆದು ನಮಗೆಲ್ಲ ವಚನಾಮೃತದ ಸವಿರಸ ಉಣಬಡಿಸಿದ್ದಾರೆ ಎಂದು ಮುಖ್ಯಶಿಕ್ಷಕ ಜಿ.ಎಂ.ಕೋಟ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಉಳವಿಗಾಗಿ ಡಾ.ಫ.ಗು.ಹಳಕಟ್ಟಿಯವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಷಮಶೀತಕ್ಕೆ ಅವರು ಒಳಗಾದರೂ ಸಹ ವಚನ ನಿಧಿ ಸಂರಕ್ಷಣೆಗೆ ಹಗಲು ರಾತ್ರಿಯನ್ನದೆ ತಡಕಾಡಿ ಜೀವ ಸವೆದಿದ್ದಾರೆ. ಜೀವದ ಹಂಗ ತೊರೆದು ನಮಗೆಲ್ಲ ವಚನಾಮೃತದ ಸವಿರಸ ಉಣಬಡಿಸಿದ್ದಾರೆ ಎಂದು ಮುಖ್ಯಶಿಕ್ಷಕ ಜಿ.ಎಂ.ಕೋಟ್ಯಾಳ ಹೇಳಿದರು.

ಸ್ಥಳೀಯ ಎಸ್‌ವಿವಿ ಸಂಸ್ಥೆಯ ಡಾ.ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ 145ನೇ ಜನ್ಮದಿನೋತ್ಸವ ಪ್ರಯುಕ್ತ ನಡೆದ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಳಕಟ್ಟಿಯವರು ವಚನ ಸಾಹಿತ್ಯ ಲೋಕಕ್ಕೆ ಅರ್ಪಿತರಾಗಿ ಗೈದ ಅಮೋಘ ಪುಣ್ಯ ಕಾಯಕದ ಸೇವೆ ಸ್ಮರಣೀಯವಾಗಿವೆ. ಶರಣ ಸಂಸ್ಕೃತಿಯಲ್ಲಿ ಬೆರೆತು ಹೋದ ವಚನ ಸಂಪತ್ತಿನ ಅಮೂಲ್ಯ ರತ್ನ ಹಳಕಟ್ಟಿಯವರ ಅಗಣಿತ ಸೇವೆ ಎಂದು ಮರೆಯಲಾಗದು. ವಚನ ತತ್ವದ ಶಾಸ್ತ್ರ, ಸಿದ್ದಾಂತಗಳಿಗೆ ಮರುಜನ್ಮ ನೀಡಿವೆ ಎಂದರು.

ನಿಡಗುಂದಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಮಂಜುಳಾ ಅಕ್ಕ ಮಾತನಾಡಿ, ಚೇತನದ ಆತ್ಮರಾಗಿರುವ ನಾವೆಲ್ಲರೂ ಭಗವಂತನ ಮಕ್ಕಳು. ಜೀವನ ಮೌಲ್ಯಕ್ಕಾಗಿ ಪರಮಾತ್ಮನ ಅನುಗ್ರಹಕ್ಕೆ ಒಳಗಾಗಿ ಒಳಿತು ಕಾಣಬೇಕು. ಎಲ್ಲಿ ದೃಢತೆ ಭಾವ ಇರುವುದೋ ಅಲ್ಲಿ ಸಫಲತೆ ಕಣ ಗೋಚರಿಸುತ್ತದೆ. ಧ್ಯಾನ ತೃಣ ನಮಗೆ ಏಕಾಗ್ರತೆ ತೃಷೆ ತಣಿಸುತ್ತದೆ ಎಂದರು.

ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಮಾತನಾಡಿ, ಕಾಲಗರ್ಭದಲ್ಲಿ ಹುದುಗಿದ ವಚನ ಗುಪ್ತಚರದ ಪ್ರಖರತೆಯ ಕಿರಣಗಳನ್ನು ಹೊರಸೂಸುವಿಕೆ ಕೈಂಕರ್ಯದಲ್ಲಿ ಹಳಕಟ್ಟಿಯವರು ತನು, ಮನದಿಂದ ಶ್ರಮಿಸಿದ್ದಾರೆ. ಸಮಾಜದಲ್ಲಿ ವಚನ ಪುನಶ್ಚೇತನದ ದಿವ್ಯತೆಗೆ ಮುನ್ನುಡಿ ಬರೆದಿದ್ದಾರೆ. ವಚನ ಸಾಹಿತ್ಯದ ದೀಪ್ತಿಯನ್ನು ಹೊರತೆಗೆದು ಬೆಳಗಿಸಿದ್ದಾರೆ ಎಂದು ತಿಳಿಸಿದರು.

ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎಚ್.ನಾಗಣಿ, ಶಿಕ್ಷಕ ಎಂ.ಬಿ.ದಶವಂತ, ಹಳಕಟ್ಟಿ ಜೀವನ ಚರಿತ್ರೆ ಕುರಿತು ಭಾಷಣ ಸ್ಪರ್ಧೆ ಜರುಗಿತು. ವಿಜಯಲಕ್ಷ್ಮೀ ಸೌದಿ ಪ್ರಥಮ, ಸಿದ್ದಮ್ಮ ಮಂಕಣಿ ದ್ವಿತೀಯ, ಮಲ್ಲಪ್ಪ ಮಾದರ ತೃತೀಯ ಸ್ಥಾನದ ಬಹುಮಾನ ಪಡೆದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುಷ್ಮಿತಾ ರಾಠೋಡ ಪ್ರಥಮ, ಸೌಮ್ಯ ನಲವಡೆ ದ್ವೀತಿಯ, ಸಂಗೀತಾ ಸಾರವಾಡ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಿಡಗುಂದಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಿಂದ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಇಬ್ರಾಹಿಂ ಹುನಗುಂದ, ಸಚೀನ ಹೆಬ್ಬಾಳ, ಶಾಂತೂ ತಡಸಿ, ಗೋಪಾಲ ಬಂಡಿವಡ್ಡರ, ಸಿದ್ದು ಪಟ್ಟಣಶೆಟ್ಟಿ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಇತರರಿದ್ದರು. ಭಾಗ್ಯವಂತಿ ಸಂಗಡಿಗರು ಪ್ರಾರ್ಥಿಸಿದರು. ಅತಿಥಿ ಶಿಕ್ಷಕ ಎಲ್.ಆರ್.ಸಿಂಧೆ ಸ್ವಾಗತಿಸಿದರು. ಗುಲಾಬಚಂದ ಜಾಧವ ನಿರೂಪಿಸಿದರು. ಅತಿಥಿ ಶಿಕ್ಷಕ ಶ್ರೀಧರ ಚಿಮ್ಮಲಗಿ ವಂದಿಸಿದರು.

PREV