ರಾಣಿಬೆನ್ನೂರು: ವ್ಯಕ್ತಿಗೂ ವ್ಯಕ್ತಿತ್ವಕ್ಕೂ ಒಂದೇ ಅಕ್ಷರ ವ್ಯತ್ಯಾಸ. ವ್ಯಕ್ತಿ ಹೋದರೂ ವ್ಯಕ್ತಿತ್ವ ಬದುಕಿರುತ್ತದೆ. ಆದರೆ ವ್ಯಕ್ತಿತ್ವ ಹೋದರೆ ವ್ಯಕ್ತಿ ಬದುಕಿದ್ದು ಸತ್ತಂತೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ನಗರದ ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆಶ್ರಯದಲ್ಲಿ ಗುರುವಾರ ಏರ್ಪಡಿಸಿದ್ದ ವ್ಯಕ್ತಿಯಿಂದ ವ್ಯಕ್ತಿತ್ವದಡೆಗೆ ವಿಶೇಷ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ಸ್ಪರ್ಧಾತ್ಮಕ ಯುಗದಲ್ಲಿ ಒಬ್ಬ ವ್ಯಕ್ತಿ ಜೀವನದಲ್ಲಿ ಮೇಲೆ ಬರಬೇಕಾದರೆ ವಿಶೇಷ ಪ್ರತಿಭೆ ಗಳಿಸಿಕೊಳ್ಳಬೇಕಾಗುತ್ತದೆ ಹಾಗೂ ವಿಶಿಷ್ಟವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ನಮಗೆ ನಾವೇ ರೂವಾರಿಗಳು. ದೂರ ದೃಷ್ಟಿಯುಳ್ಳ ಮಹಾನಾಯಕರು ಸಮಾಜದ ಮತ್ತು ದೇಶದ ಭವಿಷ್ಯದ ಬಗ್ಗೆ ಚಿಂತಿಸುತ್ತಿರುತ್ತಾರೆ. ಒಬ್ಬ ವ್ಯಕ್ತಿ ಸರ್ವಾಂಗ ಸುಂದರ ವ್ಯಕ್ತಿಯಾಗಿ ಬೆಳೆಯಬೇಕಾದರೆ ಅವನ ಸರ್ವಾಂಗೀಣ ಬೆಳವಣಿಗೆ ಅತ್ಯವಶ್ಯ ಎಂದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಗೀತಾ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಸಾಮಾನ್ಯ ವ್ಯಕ್ತಿಗಳಾಗಿಯೇ ಜೀವನವನ್ನು ಆರಂಭಿಸುತ್ತೇವೆ. ಆದರೆ ಮುಂದೆ ಒಂದು ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಆಶಿಸುತ್ತೇವೆ. ನಗುಮೊಗ, ಗಾಂಭೀರ್ಯ, ಅಚಲ ನಿರ್ಧಾರ, ನಿಸ್ವಾರ್ಥತೆ, ಬುದ್ಧಿವಂತಿಕೆ, ತಾಳ್ಮೆ, ಜಾಣ್ಮೆ ಇವೆಲ್ಲ ಉತ್ತಮ ವ್ಯಕ್ತಿತ್ವದ ಲಕ್ಷಣಗಳು. ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಸಕ್ರಿಯವಾಗಿ, ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವುದು ಉತ್ತಮ ವ್ಯಕ್ತಿತ್ವದ ಲಕ್ಷಣ ಎಂದರು.