ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ
ಶರಣ ಸಾಹಿತ್ಯ ಪರಿಷತ್ ಕಂಪ್ಲಿ ತಾಲೂಕು ಅಧ್ಯಕ್ಷಕನ್ನಡಪ್ರಭ ವಾರ್ತೆ ಕಂಪ್ಲಿ
ಡಾ. ಫ.ಗು. ಹಳಕಟ್ಟಿ ಅವರು ತಾಳೆಗರಿಗಳಲ್ಲಿ ದಾಖಲಾಗಿದ್ದ ವಚನ ಸಂಗ್ರಹಿಸಿ, ಮುದ್ರಿಸಿ ಅಮೂಲ್ಯ ವಚನ ಭಂಡಾರವನ್ನು ಕನ್ನಡ ನಾಡಿಗೆ ನೀಡಿದ್ದಾರೆ ಎಂದು ಷಾಮಿಯಾ ಚಂದ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಾ. ಬಿ. ಸುನೀಲ್ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಹಳಕಟ್ಟಿ ಅವರು ವಚನ ಸಾಹಿತ್ಯದ ಸಂಗ್ರಹಣೆಗೆ ಶ್ರಮಿಸದೇ ಹೋಗಿದ್ದರೆ ಕನ್ನಡ ನಾಡು ಹಾಗೂ ಜಗತ್ತಿನ ಅಮೂಲ್ಯವಾದ ವಚನ ಸಾಹಿತ್ಯವು ಈಗಿನ ಮುದ್ರಿತ ರೂಪದಲ್ಲಿ ಸಿಗುತ್ತಿರಲಿಲ್ಲ. ಇಂಥ ವಚನ ಸಾಹಿತ್ಯದಲ್ಲಿ ಜಗತ್ತಿನ ಎಲ್ಲ ಮಾನವರ, ಜೀವಿಗಳ ಕಲ್ಯಾಣದ ಆಶಯ ಇದೆ. ಅವರ ಪ್ರಯತ್ನದಿಂದಾಗಿ ವಚನ ಸಾಹಿತ್ಯವು ಭಾರತದ 30 ಭಾಷೆಗಳಿಗೆ ಅನುವಾದಗೊಂಡಿದೆ ಎಂದರು.ಶರಣ ಸಾಹಿತ್ಯ ಪರಿಷತ್ ಕಂಪ್ಲಿ ತಾಲೂಕು ಅಧ್ಯಕ್ಷ ಜಿ.ಪ್ರಕಾಶ್ ಮಾತನಾಡಿ, 12ನೇ ಶತಮಾನದಲ್ಲಿ ನಡೆದ ಮಹಾಕ್ರಾಂತಿಗೆ ಕಾರಣವಾದ ವಚನ ಸಾಹಿತ್ಯವನ್ನು 20ನೇ ಶತಮಾನದಲ್ಲಿ ಮನೆಮನೆಗೆ ತೆರಳಿ ಸಂಗ್ರಹಿಸಿ ಮಹಾನ್ ಕಾರ್ಯ ಮಾಡಿದ ಡಾ. ಹಳಕಟ್ಟಿ ಅವರು ಜಾಗತಿಕ ಮನ್ನಣೆಗೆ ಪಾತ್ರರಾಗಿದ್ದಾರೆ. ಬಸವಣ್ಣನವರ ಪ್ರತಿರೂಪದಂತಿದ್ದ ಹಳಕಟ್ಟಿಯವರು ತಮ್ಮ ಮನೆ, ಆಸ್ತಿ ಮಾರಾಟ ಮಾಡಿ, ಸೈಕಲ್ ತುಳಿದು ತಮ್ಮ ಜೀವ ಸವೆಸಿ ವಚನಗಳನ್ನು ಸಂಗ್ರಹಿಸಿದ ಕೆಲಸ ಸದಾ ಸ್ಮರಣೀಯ ಎಂದರು.
ಈ ಸಂದರ್ಭ ತಹಶೀಲ್ದಾರ್ ಜೂಗಲ ಮಂಜುನಾಥ್, ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಪ್ರಮುಖರಾದ ಕೆ.ಎಂ. ಹೇಮಯ್ಯ ಸ್ವಾಮಿ, ಜಿ.ಪ್ರಕಾಶ್, ಎಸ್.ಡಿ. ಬಸವರಾಜ್, ಪಾಮಯ್ಯ ಶರಣರು, ಬಿ.ಎಂ. ರುದ್ರಯ್ಯ, ಎಲಿಗಾರ್ ವೆಂಕಟರೆಡ್ಡಿ, ಶಿರಸ್ತೆದಾರ್ ರಮೇಶ್ ಸೇರಿ ತಾಲೂಕು ಆಡಳಿತ ಸಿಬ್ಬಂದಿ ಇದ್ದರು.