ಹೊಳೆಬಾಗಿಲು ಲಾಂಚ್ ಸ್ಥಗಿತ; ದೇವಿ ದರ್ಶನಕ್ಕೆ ಭಕ್ತರ ಬವಣೆ

KannadaprabhaNewsNetwork | Updated : Apr 22 2024, 01:27 PM IST

ಸಾರಾಂಶ

ಕಳಸವಳ್ಳಿ- ಅಂಬಾರಗೊಡ್ಲು ಲಾಂಚ್ ಸೇವೆ ಸಮರ್ಪಕವಾಗಿ ಜನರಿಗೆ ಸಿಗದೆ ಕರೂರು ಬಾರಂಗಿ ಹೋಬಳಿ ಜನರು ದಿನನಿತ್ಯದ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬ್ಯಾಕೋಡು :  ಹೊಳೆಬಾಗಿಲು ಲಾಂಚ್ ಸೇವೆ ಏಕಾಏಕಿ ವ್ಯತ್ಯಯದಿಂದ ಭಕ್ತರು, ಸ್ಥಳೀಯರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿರುವ ಘಟನೆ ಭಾನುವಾರ ನಡೆದಿದ್ದು, ಸಿಗಂದೂರು ದೇವಿ ದರ್ಶನ ಪಡೆಯಲು ಭಕ್ತರು ಪರದಾಡಿದರು.

ಕಳಸವಳ್ಳಿ- ಅಂಬಾರಗೊಡ್ಲು ಲಾಂಚ್ ಸೇವೆ ಸಮರ್ಪಕವಾಗಿ ಜನರಿಗೆ ಸಿಗದೆ ಕರೂರು ಬಾರಂಗಿ ಹೋಬಳಿ ಜನರು ದಿನನಿತ್ಯದ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಸವಲ್ಲಿ ಅಂಬಾರಗೋಡ್ಲು ಕಾಡುವಿನಲ್ಲಿ ಲಾಂಚ್‌ಗಳು ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ, ಪದೇ ಪದೇ ಕೆಟ್ಟು ನಿಲ್ಲುವುದರಿಂದ ಸ್ಥಳೀಯರ ಕೋರ್ಟು ಕಚೇರಿ ಮತ್ತಿತರ ದಿನನಿತ್ಯ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿ ಪರದಾಡುವಂತಾಗಿತ್ತು.

ಕರೂರು ಬಾರಂಗಿ ಹೋಬಳಿ ಜನರಿಗೆ ಶರಾವತಿ ನೀರು ನೀರು ಮೂರು ಕಡೆಯಿಂದ ಸುತ್ತುವರಿದ ಪರಿಣಾಮ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ. ಅಂಬಾರ ಗುಡ್ಲು - ಕಳಸವಳ್ಳಿಯಲ್ಲಿ 3 ಲಾಂಚ್ ಕಾರ್ಯ ನಿರ್ವಹಿಸುತ್ತವೆ. ಆದರೆ ಒಂದು ವಾರದ ಹಿಂದೆ ಲಾಂಚ್ ಹಾಳಾಗಿದ್ದರೂ ಸಹ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಸಮರ್ಪಕವಾಗಿ ಲಾಂಚ್ ವ್ಯವಸ್ಥೆ ನೀಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಜನರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಬಹುಮುಖ್ಯವಾಗಿ ಶಾಲಾ ಕಾಲೇಜು ಮಕ್ಕಳಿಗೆ ಬೇಸಿಗೆಯ ರಜೆ ಆರಂಭವಾದ ಹಿನ್ನೆಲೆಯಲ್ಲಿ ಸಿಗಂದೂರು ಮತ್ತು ಕೊಲ್ಲೂರು ದೇವಸ್ಥಾನಗಳಿಗೆ ತೆರಳಲು ಪ್ರವಾಸಿಗರೂ ಇದೇ ಮಾರ್ಗ ಬಳಸುವುದರಿಂದ ದಿನನಿತ್ಯ ಸಾಕಷ್ಟು ವಾಹನಗಳು ಬರುವುದರಿಂದ ಸ್ಥಳೀಯರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಶೀಘ್ರವೇ ಲಾಂಚ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಳೆದ ವರ್ಷವೂ ಕೂಡ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾದ ಕಾರಣ ಮೇ ತಿಂಗಳಿನಲ್ಲಿ ಲಾಂಚ್ ಸೇವೆ ಸ್ಥಗಿತಗೊಂಡಿತ್ತು. ಈವರೆಗೂ ಕೂಡ ಲಿಂಗನಮಕ್ಕಿ ಜಲಾಶಯದಲ್ಲಿ ಗಣನೀಯವಾಗಿ ನೀರಿನ ಪ್ರಮಾಣ ಇಳಿಮುಖವಾಗಿದ್ದು, ಮೇ ತಿಂಗಳಲ್ಲಿ ಮತ್ತೆ ಲಾಂಚ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಜನರಲ್ಲಿ ಆತಂಕ ಎದುರಾಗಿದೆ.

ಮಲೆನಾಡು ಭಾಗದಲ್ಲಿ ಮದುವೆ ಸಮಾರಂಭಗಳು ಮತ್ತಿತರರ ಕಾರ್ಯಕ್ರಮಗಳು ಹೆಚ್ಚಾಗಿ ಜರುಗುವ ಸಂದರ್ಭದಲ್ಲಿ ಈ ರೀತಿ ಪದೇಪದೇ ಲಾಂಚ್ ಸ್ಥಗಿತ ಗೊಳ್ಳುವುದರಿಂದ ಕರೂರು ಬಾರಂಗಿ ಹೋಬಳಿಯ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ. ಏನೇ ಆಗಲಿ ಅಧಿಕಾರಿಗಳು ಮತ್ತು ಶಾಸಕರು ಗಮನವಹಿಸಿ ಇದ್ದಷ್ಟು ದಿನವಾದರೂ ಸಮರ್ಪಕ ಸೇವೆ ಜನರಿಗೆ ದಕ್ಕಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.ಸಾರ್ವಜನಿಕ ಹಿತಾಸಕ್ತಿ ಕಾಪಾಡಿ: ತುಮರಿ ಬ್ಯಾಕೋಡು ಭಾಗದ ಜನರ ಅಡಕೆ ವ್ಯಪಾರ ವಹಿವಾಟು ಜೋರಾಗಿ ನೆಡೆಸಲು ಮತ್ತು ಆರೋಗ್ಯ, ದಿನಸಿ ಸಾಮಾನುಗಳ ಖರೀದಿ ಮತ್ತಿತರರ ಅಗತ್ಯ ಸೇವೆಗಳು ಸಾಗರ ತಾಲ್ಲೂಕು ಕೇಂದ್ರವಾದ ಸಾಗರ ಪಟ್ಟಣವನ್ನು ಅವಲಂಭಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಜಿಲ್ಲಾಡಳಿತ ಚುನಾವಣೆಯ ಮೇಲೆ ಮಾತ್ರ ಗಮನವಹಿಸದೆ ಲಾಂಚ್ ಸೇವೆಗೆ ಒತ್ತು ನೀಡಿ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಸ್ಥಳೀಯ ಮುಖಂಡ ಪ್ರಸನ್ನ ಕೆರೆಕೈ ಒತ್ತಾಯಿಸಿದರು.

ಇನ್ನು, ಲಾಂಚ್‌ನ ಗೇರ್ ಬಾಕ್ಸ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು ಬಿಡಿ ಭಾಗಗಳು ಗೋವಾ ಇನ್ನಿತರ ಪ್ರದೇಶದಿಂದ ತರಬೇಕಾಗಿರುವುದರಿಂದ ತಡ ವಾಗಿದೆ. ಈಗಾಗಲೇ ಬಿಡಿ ಭಾಗಗಳು ಬಂದಿದ್ದು, ಜೋಡಣಾ ಕಾರ್ಯ ನಡೆದಿದೆ. ಆದಷ್ಟು ಬೇಗ ಸೇವೆಗೆ ಲಾಂಚ್ ಅನ್ನು ಒದಗಿಸುತ್ತೇವೆ ಎಂದು ಕಡವು ನಿರೀಕ್ಷಕ ಧನೇಂದ್ರಕುಮಾರ್ ಹೇಳಿದರು.

Share this article