ಕನ್ನಡಪ್ರಭ ವಾರ್ತೆ ತಿಪಟೂರು
ಹೆಚ್ಚು ವ್ಯವಹಾರ ನಡೆಯುವ ಹಾಗೂ ಜನಸಂಪರ್ಕವಿರುವ ಬಿ. ಹೆಚ್. ರಸ್ತೆ, ದೊಡ್ಡಪೇಟೆ, ರೈಲ್ವೆ ಸ್ಟೇಷನ್ ರಸ್ತೆ, ಬಸ್‌ನಿಲ್ದಾಣ, ನಗರಸಭೆ ಸರ್ಕಲ್, ಸಂತೇಪೇಟೆ ಸೇರಿದಂತೆ ಗೋವಿನಪುರ, ಮಾರನಗೆರೆ, ಕಂಚಾಘಟ್ಟ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ವಿದ್ಯುತ್ ಬೀದಿ ದೀಪಗಳೇ ಇಲ್ಲ. ಅಂಗಡಿ, ಕಾಂಪ್ಲೆಕ್ಸ್ ಹಾಗೂ ರಸ್ತೆ ಅಕ್ಕಪಕ್ಕದಲ್ಲಿರುವ ಮನೆಗಳ ದೀಪಗಳೇ ಜನರಿಗೆ ಬೆಳಕು ನೀಡುತ್ತಿವೆ. ಈ ಮಂದ ಬೆಳಕಿನಲ್ಲೇ ಜನರು, ವಾಹನಗಳು ಓಡಾಡುತ್ತಿವೆ. ಹಲವು ಬಾರಿ ರಸ್ತೆ ಅಂಚಿನಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ಅಪಘಾತಗಳಾಗುತ್ತಿದ್ದರೂ ಪೊಲೀಸರು, ನಗರಸಭೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಸರಗಳ್ಳತನ, ಅಫಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೂಡಲೇ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ. ನಗರದ ಬಿ.ಹೆಚ್. ರಸ್ತೆ ಸೇರಿದಂತೆ ಕೆಲ ಬಡಾವಣೆಗಳಲ್ಲಿ ರಾತ್ರಿ ವೇಳೆ ಬೀದಿ ದೀಪಗಳು ಬೆಳಕು ನೀಡುತ್ತಿಲ್ಲವೆಂಬ ಬಗ್ಗೆ ನಿವಾಸಿಗಳು ನಮಗೆ ದೂರು ನೀಡಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲಿಯೇ ಬೀದಿ ದೀಪದ ವ್ಯವಸ್ಥೆ ಕಲ್ಪಿಸಲಾಗುವುದು.
-ವಿಶ್ವೇಶ್ವರಬದರಗಡೆ, ಪೌರಾಯುಕ್ತರು ತಿಪಟೂರು.ರಾತ್ರಿ ವೇಳೆ ಬೀದಿ ದೀಪಗಳಿಲ್ಲದೆ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದ್ದು, ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಇದುವರೆಗೂ ಬೀದಿ ದೀಪಗಳನ್ನು ರಿಪೇರಿ ಮಾಡಿಸಿಲ್ಲ. ಸಂಬಂಧಪಟ್ಟ ನಗರಸಭೆ ಸದಸ್ಯರು ವಾರ್ಡ್‌ನಲ್ಲಿನ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ, ಬೀದಿ ದೀಪಗಳನ್ನು ಹಾಕಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು.
- ಕೆ.ಎಂ. ಪರಮೇಶ್ವರಯ್ಯ, ಗೋವಿನಪುರ ನಿವಾಸಿ