ಪೊಲೀಸರೆಂದರೆ ಲಾಠಿ ಹಿಡಿದು, ಕಳ್ಳರನ್ನು ಬೆದರಿಸುವುದಷ್ಟೇ ನೋಡುತ್ತೇವೆ. ಆದರೆ, ಅಲ್ಲೊಬ್ಬರು, ಇಲ್ಲೊಬ್ಬರು, ಲಾಠಿ ಹಿಡಿಯುವ ಜತೆ ಜತೆಗೆ ಕಲಾವಿದರಾಗಿ ಮಿಂಚುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅಂತಹ ಪೊಲೀಸ್ ಅಧಿಕಾರಿಗಳಲ್ಲಿ ಜ್ಯೋತಿಲಿಂಗ ಹೊನಕಟ್ಟಿ ಒಬ್ಬರು.
ಹುಬ್ಬಳ್ಳಿ:
ಲಾಠಿ ಹಿಡಿಯುವ ಕೈಯಲ್ಲಿ ತಂಬೂರಿ ಹಿಡಿದು ಹಾಡಲು ಶುರು ಮಾಡಿದರೆ ಒನ್ಸ್ ಮೋರ್ ಎನ್ನದೇ ಬಿಡಲ್ಲ. ಅಷ್ಟೊಂದು ಸುಶ್ರಾವ್ಯವಾಗಿ ಹಾಡುತ್ತಾರೆ ಇವರು. ಇಲ್ಲಿನ ಹುಬ್ಬಳ್ಳಿ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಡಾ. ಜ್ಯೋತಿರ್ಲಿಂಗ ಚಂದ್ರಾಮ ಹೊನಕಟ್ಟಿ ಅವರ ಸಾಧನೆ ಇದು. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಹೊನಕಟ್ಟಿ.ಪೊಲೀಸರೆಂದರೆ ಲಾಠಿ ಹಿಡಿದು, ಕಳ್ಳರನ್ನು ಬೆದರಿಸುವುದಷ್ಟೇ ನೋಡುತ್ತೇವೆ. ಆದರೆ, ಅಲ್ಲೊಬ್ಬರು, ಇಲ್ಲೊಬ್ಬರು, ಲಾಠಿ ಹಿಡಿಯುವ ಜತೆ ಜತೆಗೆ ಕಲಾವಿದರಾಗಿ ಮಿಂಚುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅಂತಹ ಪೊಲೀಸ್ ಅಧಿಕಾರಿಗಳಲ್ಲಿ ಜ್ಯೋತಿಲಿಂಗ ಹೊನಕಟ್ಟಿ ಒಬ್ಬರು.
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹರಳಯ್ಯನಹಟ್ಟಿ ಎಂಬ ಪುಟ್ಟ ಗ್ರಾಮದವರು. ಓದಿದ್ದು ಬಿಎಸ್ಸಿ, ಎಂಎ, ಜಾನಪದ ವಿವಿಯಲ್ಲಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ತಂದೆ ಚಂದ್ರಾಮ ಹೊನಕಟ್ಟಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಜತೆಗೆ ಕೃಷ್ಣ ಪಾರಿಜಾತ ಮಾಡುತ್ತಿದ್ದ ಕಲಾವಿದರು. ಅವರ ಕಲೆಯ ಪ್ರಭಾವದಿಂದಾಗಿ ಇವರಲ್ಲೂ ಜಾನಪದದ ಬಗ್ಗೆ ಆಸಕ್ತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕ ವಯಸ್ಸಿನಿಂದಲೇ ಜಾನಪದ ಹಾಡು ಹಾಡಲು ಶುರು ಮಾಡಿದವರು ಜ್ಯೋತಿರ್ಲಿಂಗ ಅವರು, ಇದೀಗ ಜಾನಪದ ಗಾಯಕರಾಗಿದ್ದಾರೆ.ಆಕಾಶವಾಣಿ ಬಿ-ಹೈ ಶ್ರೇಣಿ ಕಲಾವಿದರಾಗಿರುವ ಜ್ಯೋತಿರ್ಲಿಂಗ ಅವರು ಬಸವ, ದಿಗ್ವಿಜಯ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 200ಕ್ಕೂ ಅಧಿಕ ವಿವಿಧ ಕಾರ್ಯಕ್ರಮಗಳಲ್ಲಿ ಜಾನಪದ ಕುರಿತು ಉಪನ್ಯಾಸ ನೀಡಿದ್ದು ವಚನೋತ್ಸವ, ಕನಕ ಪ್ರಶಸ್ತಿ, ಜಾನಪದ ವಿವಿಯ ಜಾನಪದ ಪ್ರಶಸ್ತಿ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಜಾನಪದ ಸೇವೆ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇವರ ಸಾಧನೆ ಮೆಚ್ಚಿ ಜಾನಪದ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಲೇಖಕರು ಹೌದು:ಜಾನಪದ ಗಾಯಕರಾಗಿ ಅಷ್ಟೇ ಅಲ್ಲ. ಜಾನಪದ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಐದಾರು ಕೃತಿ ಬರೆದಿದ್ದಾರೆ. ಜಾನಪದ ಬುತ್ತಿ, ಅಪ್ಪ ಹಾಡಿದ ಹಾಡುಗಳು, ಗೋವು ಉಳಿದರೆ ನಾವು ಉಳಿದೇವು, ಹೊನಕಟ್ಟಿಯ ಹೊನ್ನ ಸಾಲುಗಳು, ಬೆನಕನಹಳ್ಳಿಯಿಂದ ಮಸ್ಕತ್‌ವರೆಗೆ ಹೀಗೆ ಐದಾರು ಕೃತಿ ಬರೆದಿದ್ದಾರೆ. ಪೊಲೀಸ್ ಕೆಲಸ:
ಬಿಎಸ್ಸಿ, ಎಂಎ ಪದವೀಧರರಾಗಿರುವ ಇವರು, ಪೊಲೀಸ್ ಇಲಾಖೆ 23 ವರ್ಷವಾಗಿವೆ. ಬೀದರ, ಕಲಬುರಗಿ, ರಾಯಚೂರು, ಕೊಪ್ಪಳ, ಗದಗ, ವಿಜಯಪುರ, ಮಂಗಳೂರ, ಬೆಂಗಳೂರ ಸೇರಿದಂತೆ ಹಲವೆಡೆ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಹುಬ್ಬಳ್ಳಿಯ ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿರುವುದು ಬಹಳ ಖುಷಿ ತಂದಿದೆ. ಚಿಕ್ಕವಯಸ್ಸಿನಿಂದಲೇ ಜಾನಪದ ಹಾಡು ಹಾಡುತ್ತಾ ಬೆಳೆದವನು ನಾನು. ತಂದೆಯಿಂದಲೇ ಪ್ರಭಾವಕ್ಕೊಳಗಾಗಿ ಜಾನಪದ ಕಲಾವಿದನಾಗಿದ್ದಾನೆ.
ಜ್ಯೋತಿರ್ಲಿಂಗ ಹೊನಕಟ್ಟಿ, ಇನ್‌ಸ್ಪೆಕ್ಟರ್, ಮಹಿಳಾ ಪೊಲೀಸ್ ಠಾಣೆ, ಹುಬ್ಬಳ್ಳಿ