ಆಧ್ಯಾತ್ಮದ ಮೇರುಶಿಖರವಾಗಿದ್ದ ಮರಿಸ್ವಾಮಿಗಳು ನಾಡಿನೆಲ್ಲೆಡೆ ಸಂಚರಿಸಿ ಅನೇಕ ಊರುಗಳಲ್ಲಿ ತಮ್ಮ ಲೀಲೆಗಳು ಹಾಗೂ ದಿವ್ಯ ಅನುಭವಗಳ ಮೂಲಕ ಜನಮನ ಸೆಳೆದವರು.
ಬಳ್ಳಾರಿ: ಇಲ್ಲಿನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ರಾತ್ರಿ ಪ್ರದರ್ಶನಗೊಂಡ ‘ಕರ್ಪೂರದ ಬೆಳಗು’ ನಾಟಕವು ಕೇವಲ ರಂಗಪ್ರದರ್ಶನವಾಗದೇ, ಒಂದು ಆಧ್ಯಾತ್ಮಿಕ–ಸಾಂಸ್ಕೃತಿಕ ಅನುಭವವಾಗಿ ಪ್ರೇಕ್ಷಕರ ಮನದಲ್ಲಿ ಬಹುಕಾಲ ನೆಲೆಯೂರುವುದರ ಜೊತೆಗೆ. ಕಲಾ ರಸಿಕರ ಮನದಲ್ಲಿ ಮರೆಯಲಾಗದ ಅನುಭೂತಿ ನೀಡಿತು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು , ಶರಣ ಶ್ರೀ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿ.ಬಳ್ಳಾರಿ ಹಾಗೂ ವೀರಶೈವ ತರುಣ ಸಂಘ, ಬಳ್ಳಾರಿ ಇವರ ಸಹಯೋಗದಲ್ಲಿ ಸಿದ್ಧರಾಮ ಕಲ್ಮಠ ಅವರು ರಚಿಸಿ, ಮಹಾಂತೇಶ್ ರಾಮದುರ್ಗ ಅವರು ನಿರ್ದೇಶಿಸಿದ ಈ ನಾಟಕವು ಭಕ್ತಿ, ತತ್ವ ,ಕಾಯಕ ದಾಸೋಹಗಳ ಸಮನ್ವಯವನ್ನು ಸಮರ್ಥವಾಗಿ ಪ್ರತಿಪಾದಿಸಿತು.ಈ ನಾಟಕವು 18ನೇ ಶತಮಾನದಲ್ಲಿ ಆಗಿಹೋದ ಮಹಾಸಂತರಲ್ಲಿ ಪ್ರಸಿದ್ಧರಾದ ಶ್ರೀ ಮರಿಸ್ವಾಮಿಗಳು ಹಾಗೂ ಶರಣ ಸಕ್ಕರೆ ಕರಡೀಶರ ಜೀವನ ಮತ್ತು ಸಾಧನೆಯನ್ನು ಆಧಾರವಾಗಿಟ್ಟುಕೊಂಡು ರಚಿತವಾದ ರಂಗಕಲಾಕೃತಿ. ಆಧ್ಯಾತ್ಮದ ಮೇರುಶಿಖರವಾಗಿದ್ದ ಮರಿಸ್ವಾಮಿಗಳು ನಾಡಿನೆಲ್ಲೆಡೆ ಸಂಚರಿಸಿ ಅನೇಕ ಊರುಗಳಲ್ಲಿ ತಮ್ಮ ಲೀಲೆಗಳು ಹಾಗೂ ದಿವ್ಯ ಅನುಭವಗಳ ಮೂಲಕ ಜನಮನ ಸೆಳೆದವರು. ಕೊನೆಗೆ ಬಳ್ಳಾರಿಯಲ್ಲಿ ನೆಲೆನಿಂತು ಪರಮಗುರುವಾಗಿ ಸರ್ವರನ್ನು ಪೊರೆಯುವ ಮಹತ್ತರ ಪಾತ್ರ ವಹಿಸಿದರು.
ಗುರು ಮರಿಸ್ವಾಮಿಗಳ ಮಹಿಮೆಯನ್ನು ಅರಿತ ಮೈಸೂರು ಸಂಸ್ಥಾನದ ದಿವಾನ್ ಪೂರ್ಣಯ್ಯನವರು ಅವರನ್ನು ಮೈಸೂರಿಗೆ ಆಹ್ವಾನಿಸಿ ರಾಜೋಚಿತ ಸತ್ಕಾರ ನಡೆಸಿ, ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಆಶೀರ್ವಾದ ಮಾಡಿಸಿದ ಐತಿಹಾಸಿಕ ಘಟನೆಯು ನಾಟಕದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು. ಮರಿಸ್ವಾಮಿಗಳ ಪ್ರಭಾವಕ್ಕೆ ಒಳಗಾಗಿ ಕಂಬಳಿ ಸ್ವಾಮಿಗಳು ಯೋಗಸಿದ್ಧಿಯನ್ನು ಪಡೆಯುವ ಪ್ರಸಂಗವು ಗುರುಶಕ್ತಿಯ ಮಹತ್ವವನ್ನು ಸ್ಪಷ್ಟವಾಗಿ ಪ್ರತಿಪಾದಿಸಿತು.ಇದೇ ಗುರುಪರಂಪರೆಯ ಮುಂದುವರಿದ ಅಧ್ಯಾಯವಾಗಿ ಬಳ್ಳಾರಿಯ ವರಶಿಷ್ಯ ಸಕ್ಕರೆ ಕರಡೆಪ್ಪನವರ ಪಾತ್ರ ನಾಟಕದಲ್ಲಿ ಅತ್ಯಂತ ಸಾರ್ಥಕವಾಗಿ ಮೂಡಿಬಂದಿದೆ. ಗುರುಗಳ ಇಚ್ಛೆಯಂತೆ ಜೀವನ ನಡೆಸಿದ ಕರಡೆಪ್ಪನವರು ಕಾಯಕ ಮತ್ತು ದಾಸೋಹವನ್ನು ತಮ್ಮ ಬದುಕಿನ ಧ್ಯೇಯವನ್ನಾಗಿ ಮಾಡಿಕೊಂಡು ‘ಶರಣ ಕರಡೀಶ’ ಎಂಬ ಗೌರವಪೂರ್ಣ ಹೆಸರಿನಿಂದ ಪ್ರಸಿದ್ಧರಾದರು. ಅಂದಿನ ಭೀಕರ ಬರಗಾಲದ ಸಂದರ್ಭದಲ್ಲಿ ದಿನನಿತ್ಯ ಸಾವಿರಾರು ಜನರಿಗೆ ಅನ್ನಸಂತರ್ಪಣೆಯ ದಾಸೋಹ ಕಾರ್ಯವನ್ನು ಎಡೆಬಿಡದೆ ನಡೆಸಿದ ಅವರ ಸೇವಾಭಾವ ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದೆ. ಒಂದು ಅರ್ಥದಲ್ಲಿ ಬಳ್ಳಾರಿಯನ್ನು ಅವರು ‘ಮರಿ ಕಲ್ಯಾಣ’ವನ್ನಾಗಿಸಿದರೆಂಬ ಮಾತು ನಾಟಕದ ಮೂಲಕ ಮತ್ತಷ್ಟು ಅರ್ಥಪೂರ್ಣವಾಗುತ್ತದೆ.
ಗುರು ಎಂದರೆ ಶಿಷ್ಯನ ಬದುಕಿನಲ್ಲಿ ಕೇವಲ ಉಪದೇಶಕನಲ್ಲ; ಅವನು ಮಾರ್ಗದರ್ಶಕ, ಆಪತ್ಕಾಲದ ಸಂರಕ್ಷಕ, ಆತ್ಮಸಂಕಲ್ಪ ಹಾಗೂ ಆತ್ಮವಿಕಾಸಕ್ಕೆ ದಾರಿ ತೋರುವ ದೀಪ ಎಂಬ ತತ್ವವನ್ನು ‘ಕರ್ಪೂರದ ಬೆಳಗು’ ನಾಟಕ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿತು. ನಾಟಕದಲ್ಲಿ ಭಾಗವಹಿಸಿದ ಸುಮಾರು 25ಕ್ಕೂ ಹೆಚ್ಚು ಕಲಾವಿದರು ಪಾತ್ರಗಳಿಗೆ ಜೀವ ತುಂಬುವಂತೆ ಅಭಿನಯಿಸಿದರು.ಕಲಾವಿದರಾದ ಬಿ. ರುದ್ರಯ್ಯ, ಸಿದ್ಧರಾಮ ಕಲ್ಮಠ, ಜೋಳದರಾಶಿ ಬಸವರಾಜ, ವೀರೇಶ ಕರಡಕಲ್, ಕೆ.ಎಂ. ಸಿದ್ದಲಿಂಗಯ್ಯ, ಹೆಚ್.ಎಂ. ಜಗದೀಶಯ್ಯ (ಕೊಳಗಲ್), ಹೆಚ್.ಎಂ. ಅಮರೇಶ್, ಡಾ. ಗಂಗಾಧರ ದುರ್ಗಂ, ಎ.ಎಂ.ಪಿ. ವೀರೇಶಸ್ವಾಮಿ, ಎಂ. ದಕ್ಷಿಣಾಮೂರ್ತಿ, ಡಾ. ಬಿ. ಗೋವಿಂದರಾಜು, ಚಾಂದ್ ಪಾಷಾ, ಸುಬ್ಬಣ್ಣ ಶಿಳ್ಳೆಕ್ಯಾತರ, ಎಂ. ಮಲ್ಲಿಕಾರ್ಜುನ, ಹಳ್ಳಿ ಸಿದ್ದನಗೌಡ, ಶಿವಪುತ್ರ, ಕಿರಣ್ ಕುಮಾರ್, ಅಗಸ್ತ್ಯ ಕಲ್ಮಠ , ಮಲ್ಲಿಕಾರ್ಜುನ ದೇವರಮನೆ ಹಾಗೂ ವೀರೇಶ ಅವರು ತಮ್ಮ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು.
ಸ್ತ್ರೀ ಕಲಾವಿದರಾದ ಜಯಶ್ರೀ ಪಾಟೀಲ, ಭವಾನಿ (ಹಿರಿಯೂರು),ಲತಾಶ್ರೀ (ದಾವಣಗೆರೆ) ಹಾಗೂ ಕುಮಾರಿ ಆರ್.ಎಂ. ಕೃಪಾ, ಕೆ.ಮನ್ವಿತಾ ಈ ಎಲ್ಲಾ ಕಲಾವಿದರ ಸಮರ್ಪಿತ ಅಭಿನಯ ನಾಟಕಕ್ಕೆ ಭಾವನಾತ್ಮಕ ಸಮತೋಲನ ನೀಡಿತು.ನಾಟಕಕ್ಕೆ ಒದಗಿಸಿದ ಸೂಕ್ತ ಹಿನ್ನೆಲೆ ಸಂಗೀತ, ರಂಗಸಜ್ಜಿಕೆ,ವಚನ ಗಾಯನ, ಧ್ವನಿ ಹಾಗೂ ಬೆಳಕಿನ ಸಮನ್ವಯ ನಾಟಕದ ದೃಶ್ಯಪ್ರಭಾವವನ್ನು ಇನ್ನಷ್ಟು ಗಟ್ಟಿಗೊಳಿಸಿತಲ್ಲದೆ, ‘ಕರ್ಪೂರದ ಬೆಳಗು’ ನಾಟಕವು ಗುರು–ಶಿಷ್ಯ ಪರಂಪರೆ, ಶರಣ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಸಮಕಾಲೀನ ರಂಗಭೂಮಿಯಲ್ಲಿ ಅತ್ಯಂತ ಸಶಕ್ತವಾಗಿ ಪ್ರತಿಪಾದಿಸಿದ ಸ್ಮರಣೀಯ ರಂಗಾನುಭವವನ್ನು ಮೂಡಿಸಿತು.
ಹಿನ್ನೆಲೆ ಸಂಗೀತ ನೀಡಿದ ಮುದ್ದಟನೂರು ತಿಪ್ಪೇಸ್ವಾಮಿ, ಹಾಡುಗಳನ್ನು ಸಂಯೋಜಿಸಿದ ಗಾಯಕ ಕೆ.ವಸಂತಕುಮಾರ್, ಹಿನ್ನೆಲೆ ಗಾಯನದಲ್ಲಿಪುಟ್ಟರಾಜು ಮತ್ತು ಕು.ತಸ್ಮಯ ನಾಟಕದ ಮೆರಗು ಹೆಚ್ಚಿಸಿದರು. ಅಮರೇಶ ಸಿರಿಗೇರಿ ಮತ್ತು ರಮೇಶ ಧ್ವನಿ ಮತ್ತು ಬೆಳಕನ್ನು ನಿರ್ವಹಿಸಿದರು.ಸೂಕ್ತ ರೀತಿಯಲ್ಲಿ ಪ್ರಸಾದನ ಮಾಡಿದ ಕೆ.ಹರೀಶ್ ಹಾಗೂ ಗಮನ ಸೆಳೆಯುವ ರಂಗಸಜ್ಜಿಕೆ ಮಾಡಿಕೊಟ್ಟ ಗೋವಿಂದವಾಡ ಮಂಜುನಾಥ ಅವರ ಶ್ರಮವೂ ರಂಗ ಸಫಲತೆಗೆ ಕಾರಣವಾಯಿತು. ವಿಭೂತಿ ಎರಿಸ್ವಾಮಿ ನಾಟಕ ನಿರ್ಮಾಣ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದರು.ತುಂಬಿದ ಗೃಹದಲ್ಲಿ ಪ್ರದರ್ಶನ ಗೊಂಡ ಈ ನಾಟಕವನ್ನು ಸಾವಿರಾರು ಪ್ರೇಕ್ಷಕರು ಮೂರು ಗಂಟೆಯ ಕಾಲ ಮೂಕ ವಿಸ್ಮಿತರಾಗಿ ವೀಕ್ಷಿಸಿದರು.