ಬೆಲೆಯೇರಿಕೆ ಖಂಡಿಸಿ ಹಾಗೂ ರೈತರಿಗೆ ಪರಿಹಾರದಲ್ಲಿ ಅರ್ಧಂಬರ್ಧ ಹಣ ಬಿಡುಗಡೆ ಮಾಡಿದ ಸರ್ಕಾರ ಪಾಪರ್ (ದಿವಾಳಿ) ಎದ್ದಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ಪಕ್ಷದಿಂದ ಗುರುವಾರ ಯಾದಗಿರಿಯಲ್ಲಿ ಭಾರಿ ಪ್ರತಿಭಟನೆ ಹಾಗೂ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಬೆಲೆಯೇರಿಕೆ ಖಂಡಿಸಿ ಹಾಗೂ ರೈತರಿಗೆ ಪರಿಹಾರದಲ್ಲಿ ಅರ್ಧಂಬರ್ಧ ಹಣ ಬಿಡುಗಡೆ ಮಾಡಿದ ಸರ್ಕಾರ ಪಾಪರ್ (ದಿವಾಳಿ) ಎದ್ದಿದೆ ಎಂದು ಆರೋಪಿಸಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ ನೇತೃತ್ವದಲ್ಲಿ ಜಾತ್ಯತೀತ ಜನತಾದಳ ಪಕ್ಷದಿಂದ ಗುರುವಾರ ಯಾದಗಿರಿಯಲ್ಲಿ ಭಾರಿ ಪ್ರತಿಭಟನೆ ಹಾಗೂ ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
ಸಾವಿರಾರು ಜನರು ಪಾಲ್ಗೊಂಡಿದ್ದ ಈ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಟೀಕೆಗಳಿಂದ ಮುಖಂಡರುಗಳು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿ, ಹಳ್ಳಿ ಗುಗ್ಗು ಪದ ಬಳಸಿದ್ದ ಪ್ರಿಯಾಂಕ ವಿರುದ್ಧ ವ್ಯಂಗ್ಯವಾಡಿದರು. ಗುರವಾರ ನಗರದಲ್ಲಿ ಗಮನ ಸೆಳೆದ ಈ ರ‍್ಯಾಲಿ ನಂತರ ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಬೆಲೆ ಏರಿಕೆ ನೀತಿ ಖಂಡಿಸಿದರು.
ಬೆಳಗ್ಗೆ ಇಲ್ಲಿನ ಹೊಸ ಬಸ್ ನಿಲ್ದಾಣದ ಮುಖ್ಯ ರಸ್ತೆಯಿಂದ ಜಮಾವಣೆಗೊಂಡ ಪಕ್ಷದ ಪದಾಧಿಕಾರಿಗಳು, ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು "ನಾವು ಹಳ್ಳಿಗುಗ್ಗು ಏನ್ ಇವಾಗ್ ಎಂಬ ಬರವಣಿಗೆಯುಳ್ಳ ಟೀಶರ್ಟ್‌ಗಳನ್ನು ಧರಿಸಿಕೊಂಡು ಬೈಕ್ ಏರಿ ಮೆರವಣಿಗೆ ಆರಂಭಿಸಿದರು.
ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಹೊಸಳ್ಳಿ ಕ್ರಾಸ್, ಗಂಜ್ ಏರಿಯಾ, ಮೈಲಾಪುರ ಅಗಸಿ, ಗಾಂಧಿ ಚೌಕ್, ವೀರಶೈವ ಕಲ್ಯಾಣ ಮಂಟಪ ಮಾರ್ಗ, ಡಾ.ಅಂಬೇಡ್ಕರ್ ಸರ್ಕಲ್ ಮಾರ್ಗದ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರಿ ಚೌಕ್ ಮೂಲಕ ಸುಭಾಷ ಸರ್ಕಲ್‌ಗೆ ಆಗಮಿಸಿದರು. ದಾರಿಯುದ್ದಕ್ಕೂ ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿದರು. ನೇತಾಜಿ ಸುಭಾಶ್ಚಂದ್ರ ಭೋಸ್ ವೃತ್ತದಲ್ಲಿ ಸಮಾವೇಶಗೊಂಡ ಸಾವಿರಾರು ಪ್ರತಿಭಟನಾಕಾರರು, ಬೈಕ್ ಜತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆತಡೆ ನಡೆಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಮಾತನಾಡಿ, ರೈತರಿಗೆ ₹2500 ಪರಿಹಾರದ ಹಣದಲ್ಲಿ ಕಡಿಮೆ ಹಾಕಿದ ರಾಜ್ಯ ಸರ್ಕಾರ ಪಾಪರ್ ಆಗಿದೆ. ಗೃಹಲಕ್ಷ್ಮಿ ಖಾತೆಗೂ ಹಣ ಹಾಕುತ್ತಿಲ್ಲ. ಈ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂದರು. ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಕಟಕಟಿ, ಹಳ್ಳಿಯಿಂದ ದಿಲ್ಲಿಯವರೆಗೆ ಅಧಿಕಾರ ಅನುಭವಿಸಿದ ಅವರೂ ಸಹ ಹಳ್ಳಿಯವರೇ. ಹಳ್ಳಿಯವರಿಂದ ನೀವೆಲ್ಲ ಮತ ಪಡೆದು ಐವತ್ತು ವರ್ಷಗಳಿಂದ ಅಧಿಕಾರ ಅನುಭವಿಸಿ, ಈಗ ಹಳ್ಳಿ ಗುಗ್ಗು ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಖರ್ಗೆ ಅವರಿಗೆ ಟಾಂಗ್ ನೀಡಿದರು. ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಕುಮಾರಸ್ವಾಮಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುವುದೇ ಖರ್ಗೆಯವರ ಕೆಲಸವಾಗಿದೆ. ಗೃಹ ಖಾತೆಯ ಕೆಲಸವೇ ಅವರು ಮಾಡುತ್ತಿಲ್ಲ ಎಂದು ಜರಿದರು. ನಿಮಗೆ ತಕ್ಕಪಾಠ ಕಲಿಸಲು ಹಳ್ಳಿಗಳಲ್ಲಿ ಜನರು ಸಿದ್ಧರಾಗಿದ್ದಾರೆ ಎಂದರು.
ಸರ್ಕಾರದ ವಿರುದ್ಧ ಹೋರಾಟಕ್ಕೆ ನಮಗೆಲ್ಲ ಸ್ಫೂರ್ತಿ ತುಂಬಿದ ಶಾಸಕ ಶರಣಗೌಡ ಕಂದಕೂರ ಅವರಿಗೆ ಎಲ್ಲರ ಪರವಾಗಿ ಕಟಕಟಿ ಅಭಿನಂದಿಸಿದರು.
ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ದಿನನಿತ್ಯದ ಜನರ ಬದುಕನ್ನು ಸರ್ಕಾರ ಕಷ್ಟಕ್ಕೆ ದೂಡಿದೆ, ರೈತರಿಗೆ ಮೋಸ ಮಾಡುತ್ತಿದೆ ಎಂದರು. ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ, ರೈತ ವಿರೋಧಿಯಾಗಿರುವ ರಾಜ್ಯ ಸರ್ಕಾರ ಪ್ರತಿ ಬಾರಿ ಸುಳ್ಳು ಹೇಳುತ್ತಾ ರೈತರನ್ನು ಹೈರಾಣಾಗಿಸುತ್ತಿದ್ದಾರೆ. ಒಂದು ಸಲ ಒಂದೊಂದು ಪರಿಹಾರದ ಮೊತ್ತ ಹೇಳುತ್ತಾ ರೈತರಿಗೆ ಸುಳ್ಳು ಹೇಳುತ್ತಾ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಮುಖಂಡ ವಿಶ್ವನಾಥ ಶಿರವಾರ, ತಾಯಪ್ಪ ಬದ್ದೇಪಲ್ಲಿ, ಶ್ರೀಕಾಂತ ಸುಬೇದಾರ ಮಾತನಾಡಿ, ಭ್ರಷ್ಟ ಸರ್ಕಾರದಿಂದ ಬೆಲೆ ಏರಿಕೆಯಾಗದೆ ಮತ್ತೇನು ಆಗಲು ಸಾಧ್ಯ ಎಂದು ಪ್ರಶ್ನಿಸಿದರು. ಜನರನ್ನು ಹಳ್ಳಿಗುಗ್ಗುಗಳು ಎಂದು ಹೇಳುವ ಕಾಂಗ್ರೆಸ್ ನಾಯಕರಿಗೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿಯಲ್ಲಿ ಜೆಡಿಎಸ್ ನಡೆಸಿದ ಬೃಹತ್ ಬೈಕ್ ರ‍್ಯಾಲಿಯಲ್ಲಿ ಪ್ರತಿಯೊಬ್ಬರೂ ನಾವು ಹಳ್ಳಿ ಗುಗ್ಗುಗಳು ಏನಿವಾಗ? ಎನ್ನುವ ಟೀಶರ್ಟ್‌ಗಳನ್ನು ತೊಟ್ಟು ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಖಂಡಿಸಿದರು. ಪ್ರತಿಭಟನಾ ಮಾರ್ಗದಲ್ಲಿ ಟೀ ಶರ್ಟ್ ತೊಟ್ಟ ಯುವಕರು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.