ಪರಂಮೇಶ್ವರ್‌ಗೆ ಸಿಎಂ ಸ್ಥಾನ ನೀಡುವಂತೆ ಅಗ್ರಹಿಸಿ ಅರೆಬೆತ್ತಲೆ ಮೆರವಣಿಗೆ

KannadaprabhaNewsNetwork |  
Published : Nov 29, 2025, 12:00 AM IST

ಸಾರಾಂಶ

ಅಂಬೇಡ್ಕರ್ ಪ್ರತಿಮೆಯಿಂದ ಬಿಜಿಎಸ್ ವೃತ್ತದವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವುದಾದರೆ ದಲಿತ ಸಮುದಾಯಕ್ಕೆ ಸೇರಿದ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಒತ್ತಾಯಿಸಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ನಗರದ ಟೌನ್‌ಹಾಲ್ ವೃತ್ತದಲ್ಲಿ ಅರೆ ಬೆತ್ತಲೆ ಮೆರವಣಿಗೆ ನಡೆಸಿದರು.

ದಲಿತ ಮುಖಂಡರಾದ ಟಿ.ಸಿ.ರಾಮಯ್ಯ ನೇತೃತ್ವದಲ್ಲಿ ನೂರಾರು ದಲಿತ ಯುವಜನರ ನಗರದ ಟೌನ್‌ಹಾಲ್ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಯಿಂದ ಬಿಜಿಎಸ್ ವೃತ್ತದವರೆಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ಕಾಂಗ್ರೆಸ್ ಪಕ್ಷದ ಮೇಲೆ ಒತ್ತಡ ಹಾಕುವ ಪ್ರಯತ್ನ ನಡೆಸಿದರು.

ಈ ವೇಳೆ ಮಾತನಾಡಿದ ದಲಿತ ಯುವ ಮುಖಂಡರಾದ ಟಿ.ಸಿ.ರಾಮಯ್ಯ, ಸತತವಾಗಿ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾದ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಲ್ಲದೆ, ಮೂರು ಬಾರಿ ಗೃಹ ಸಚಿವರಾಗಿ, ಉನ್ನತ ಶಿಕ್ಷಣ, ರೇಷ್ಮೆ, ವೈದ್ಯಕೀಯ ಶಿಕ್ಷಣ ಸಚಿವರಾಗಿ ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ದೊಡ್ಡ ಗುಣ ಅವರಲ್ಲಿದೆ ಎಂದರು.

ಸ್ವಾತಂತ್ರ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ ಪಕ್ಷ ಅತಿ ಸಣ್ಣ ಸಮುದಾಯಗಳಿಗೂ ಮುಖ್ಯಮಂತ್ರಿ ಪದವಿ ನೀಡಿದೆ. ಆದರೆ ಇಡೀ ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ದಲಿತರು ಹುಟ್ಟಿನಿಂದಲೂ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸಿಕೊಂಡು ಬಂದಿದ್ದಾರೆ. ಆದರೆ ಅಧಿಕಾರದಿಂದ ಮಾತ್ರ ವಂಚಿಸಲಾಗುತ್ತಿದೆ ಎಂದರು.

ದಲಿತ ಸಿ.ಎಂಗೆ ಇದು ಸೂಕ್ತ ಕಾಲ. ಕಾಂಗ್ರೆಸ್ ಪಕ್ಷ ತಮ್ಮ ಮೇಲಿರುವ ಎಲ್ಲಾ ಅಪವಾದಗಳನ್ನು ತೊಳೆದುಕೊಳ್ಳಲು ಗೃಹ ಸಚಿವರಾಗಿರುವ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ನಾಳೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ನಮ್ಮ ಮನವಿಗೆ ಕೆಪಿಸಿಸಿ, ಎಐಸಿಸಿ ಬೆಲೆ ನೀಡದಿದ್ದರೆ ಬೆಂಗಳೂರಿಗೆ ಕೆಪಿಸಿಸಿ ಕಚೇರಿಯವರೆಗೂ ಅರೆಬೆತ್ತಲೆ ಮೆರವಣಿಗೆ ನಡೆಸಲು ಸಹ ಸಿದ್ಧ ಎಂದರು.

ಕಾಂಗ್ರೆಸ್ ಯುವ ಮುಖಂಡ ಮೋಹನ್‌ಕುಮಾರ್ ಮಾತನಾಡಿ, ತನ್ನ ಸ್ವಾರ್ಥವನ್ನು ಬಿಟ್ಟು ಕೆಪಿಸಿಸಿ ಅಧ್ಯಕ್ಷರಾಗಿ 2013 ರಲ್ಲಿ ಡಾ.ಜಿ. ಪರಮೇಶ್ವರ್ ಕೆಲಸ ಮಾಡಿದ ಪರಿಣಾಮ ಹತ್ತು ವರ್ಷಗಳ ನಂತರ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂತ್ತು. ಆದರೆ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಅಂದು ಕೂಡ ಮುಖ್ಯಮಂತ್ರಿ ಸ್ಥಾನವನ್ನು ಡಾ.ಜಿ.ಪರಮೇಶ್ವರ ಅವರಿಗೆ ವಂಚಿಸಲಾಗಿದೆ. ತದನಂತರವು ಅವರು ಕೆಪಿಸಿಸಿ ಅಧ್ಯಕ್ಷರಾಗಿ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷ ಸಮ್ಮಿಶ್ರ ಸರಕಾರ ರಚಿಸಲು ಕಾರಣರಾಗಿದ್ದಾರೆ.ವಿವಿಧ ಮಂತ್ರಿ ಪದವಿಗಳ ಜೊತೆಗೆ, ಪಕ್ಷದ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

2023 ರ ಚುನಾವಣೆಯಲ್ಲಿ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿ ಅವರು ರಚಿಸಿದ ಪ್ರಾಣಾಳಿಕೆ ಮತ್ತು ಐದು ಗ್ಯಾರಂಟಿಗಳ ಫಲವಾಗಿ ಕಾಂಗ್ರೆಸ್ ಪಕ್ಷ 136 ಸೀಟುಗಳನ್ನು ಪಡೆದು ರಾಜ್ಯದಲ್ಲಿ ಅಧಿಕಾರ ಹಿಡಯುವಂತಾಯಿತು.ಇಷ್ಟೆಲ್ಲಾ ಸಾಧನೆಗಳಿದ್ದರೂ ಡಾ.ಜಿ.ಪರಮೇಶ್ವರ್ ಅವರನ್ನು ಅಧಿಕಾರದಿಂದ ವಂಚಿಸುವ ಕೆಲಸ ನಿರಂತರವಾಗಿ ಕಾಂಗ್ರೆಸ್ ಹೈಕಮಾಂಡ್‌ನಿಂದ ನಡೆಯುತ್ತಿದೆ. ಈಗಲೂ ಅದೇ ಪರಿಸ್ಥಿತಿ ಮುಂದುವರೆದರೆ ಎಂತಹ ಹೋರಾಟಕ್ಕೂ ದಲಿತ ಪರ ಸಂಘಟನೆಗಳು ಹೆದರುವುದಿಲ್ಲ. ಇಂದಿನ ಅರೆಬೆತ್ತಲೆ ಪ್ರದರ್ಶನ,ಬೆಂಗಳೂರಿಗೂ ಮುಂದುವರೆಯಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಿ.ಭಾನುಪ್ರಕಾಶ್, ಹೆಗ್ಗೆರೆ ಕೃಷ್ಣಮೂರ್ತಿ, ರಾಮುಮೂರ್ತಿ, ಗುರುಪ್ರಸಾದ್, ನರಸಿಂಹರಾಜು, ಚಿಕ್ಕನಾಯಕನಹಳ್ಳಿ ಸಿದ್ದರಾಮಯ್ಯ, ಜಯಮೂರ್ತಿ, ಮಂಜುನಾಥ್, ಜಯಣ್ಣ, ಕೋತಮಾರನಹಳ್ಳಿ ಕುಮಾರ್, ಶಿವಲಿಂಗಯ್ಯ, ನರಸಿಂಹರಾಜು, ಶಿವರಾಜು, ರಂಗಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂದಾರ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ
ಮೂಡುಬಿದಿರೆ ಸಿಂಥೆಟಿಕ್ ಟ್ರ್ಯಾಕ್ ಗೆ 11 ವರ್ಷ ಕ್ರೀಡಾಭಿಮಾನಿಗಳ ಹರ್ಷ