ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕರ್ನಾಟಕ ಮಾದಿಗ ಮಹಾಸಭಾ- ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಿ.ಎನ್.ಗಂಗಾಧರಪ್ಪ ಮಾತನಾಡಿ, ಪರಿಶಿಷ್ಟ ಜಾತಿಗಳ ಸಮುದಾಯದೊಳಗಿನ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಕೋರ್ಟ್ ತೀರ್ಪು ಜಾರಿಗೊಳಿಸಿಒಳ ಮೀಸಲಾತಿಯ ಬೇಡಿಕೆ ಮತ್ತು ಹೋರಾಟ 15 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಅಸಮಾನತೆಯನ್ನು ಸರಿಪಡಿಸಲು, ಸರ್ವೋಚ್ಛ ನ್ಯಾಯಾಲಯದ ತೀರ್ಪು ನೀಡಿದ್ದು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಆದೇಶವನ್ನು ನೀಡಿದೆ. ಆದರೆ, ರಾಜ್ಯ ಸರ್ಕಾರ ಈ ಆದೇಶವನ್ನು ಜಾರಿಗೊಳಿಸಲು ಅನಗತ್ಯವಾಗಿ ವಿಳಂಬ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಯೋಗಕ್ಕೆ ಸ್ಪಂದಿಸುತ್ತಿಲ್ಲ
ಪರಿಶಿಷ್ಟ ಜಾತಿಗಳ ನಡುವೆ ಮೀಸಲಾತಿ ಹಂಚಿಕೆಗೆ ಆಯೋಗ ನಡೆಸಿದ ಸಮೀಕ್ಷೆ, ಸ್ಟಿಕ್ಕರ್ ಅಂಟಿಸುವ ಪ್ರಕ್ರಿಯೆಗಳು ಗೊಂದಲ ಹುಟ್ಟುಹಾಕಿ ನಗೆಪಾಟಲಿಗೆ ಈಡಾಯಿತು. ಮೂರುವಾರದಲ್ಲಿ ಸಮೀಕ್ಷೆ ಮುಗಿಸಿ ವರದಿ ಸಿದ್ಧಪಡಿಸಲಾಗುವುದು ಎಂಬ ಸರ್ಕಾರದ ಹೇಳಿಕೆ ಕಿಮ್ಮತ್ತು ಕಳೆದುಕೊಂಡಿದೆ. ಕಾಂತರಾಜ್ ಆಯೋಗದ ಜಾತಿಗಣತಿಯ ವರದಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ನಿರ್ಲಕ್ಷ್ಯದಿಂದ ಕೊನೆಗೆ ಕಸದ ಬುಟ್ಟಿ ಸೇರಿತು ಎಂದರು.
ಆಗಸ್ಟ್ 11ರಿಂದ ಪ್ರಾರಂಭವಾಗುವ ವಿಧಾನ ಮಂಡಲಗಳ ಅಧಿವೇಶನದಲ್ಲಿ ಸರ್ಕಾರ ತಕ್ಷಣ ಒಳಮೀಸಲಾತಿ ಜಾರಿಮಾಡಬೇಕೆಂಬುದು ನಮ್ಮ ಅಗ್ರಹವಾಗಿದೆ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಸಂಪೂರ್ಣವಾಗಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಅನುಷ್ಠನಗೊಳಿಸಬೇಕು. ಒಂದು ವೇಳೆ ಸರ್ಕಾರವು ಈ ಗಡುವಿನೊಳಗೆ ನಮ್ಮ ಬೇಡಿಕೆಯನ್ನು ಈಡೇರಿಸಲು ವಿಫಲವಾದರೆ, ನಮ್ಮ ಹಕ್ಕುಗಳಿಗಾಗಿ ಕರ್ನಾಟಕದಾದ್ಯಂತ ಇರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗೂಡಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಯೋಜನಾ ಪ್ರಾಧಿಕಾರದ ಸದಸ್ಯೆ ನಾರಾಯಣಮ್ಮ, ಕರ್ನಾಟಕ ಮಾದಿಗ ಮಹಾಸಭಾ- ದಲಿತ ಸಂಘಟನೆಗಳ ಒಕ್ಕೂಟದ ಡಿ.ವಿ.ನಾರಾಯಣಸ್ವಾಮಿ, ಈಧರೆ ಪ್ರಕಾಶ್, ನಾಗರಾಜ್, ನಾಗೇಶ್, ವಿಜಯನಾರಸಿಂಹ,ಕಾಳಪ್ಪ,ಮಹದೇವ್ ಸೇರಿದಂತೆ ನೂರಾರು ಮಂದಿ ಇದ್ದರು.