ಅರ್ಧಕ್ಕೆ ನಿಂತಿರುವ ನೆರಳು ಕಲ್ಪಿಸುವ ಕಾಮಗಾರಿ

KannadaprabhaNewsNetwork |  
Published : Jul 26, 2025, 01:30 AM IST
ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನ ಬಲ ಬದಿಯ ಲ್ಲಿ ಮಾತ್ರ ಮೇಲ್ವಛಾವಣಿಗೆ  ಪಿಲರ್ ಹಾಕಿ ರಸ್ತೆಗುಂಟ ಜಲ್ಲು ಕಲ್ಲು ಎಂ ಸ್ಯಾಂಡ್ ನ್ನು ನಿರ್ಮಿಕೇಂದ್ರವರು ಹರಡಿಸಿರುವುದು | Kannada Prabha

ಸಾರಾಂಶ

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕ್ಷೇತ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಮ್ಮಿಕೊಂಡಿರುವ ಯೋಜನೆಯಂತೆ ದೇವಸ್ಥಾನದ ಬಲ ಬದಿ ರಸ್ತೆಯಲ್ಲಿ ಭಕ್ತರಿಗೆ ನೆರಳು ಕಲ್ಪಿಸುವ (ಶೆಲ್ಟರ್‌) ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ.

ದೇವಸ್ಥಾನದ ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲು, ಎಂ ಸ್ಯಾಂಡ್‌ । ಭಕ್ತರ ಸಂಚಾರಕ್ಕೆ ತೊಂದರೆ

ಜೆಸ್ಕಾಂ ಮತ್ತು ನಿರ್ಮಿತಿ ಕೇಂದ್ರದವರ ಗೊಂದಲವೇ ಕಾಮಗಾರಿ ಸ್ಥಗಿತಕ್ಕೆ ಕಾರಣ

ಜಿ. ಸೋಮಶೇಖರ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕ್ಷೇತ್ರ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕರು ಹಮ್ಮಿಕೊಂಡಿರುವ ಯೋಜನೆಯಂತೆ ದೇವಸ್ಥಾನದ ಬಲ ಬದಿ ರಸ್ತೆಯಲ್ಲಿ ಭಕ್ತರಿಗೆ ನೆರಳು ಕಲ್ಪಿಸುವ (ಶೆಲ್ಟರ್‌) ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಪರಿಣಾಮವಾಗಿ ದೇವಸ್ಥಾನದ ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲು, ಎಂ ಸ್ಯಾಂಡ್‌ನಿಂದ ಭಕ್ತರ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ದೇವಸ್ಥಾನದ ಎಡಭಾಗದಂತೆ ಬಲ ಭಾಗದಲ್ಲೂ ನೆರಳು ಕಲ್ಪಿಸುವ ಕಾಮಗಾರಿ ಆರಂಭಿಸುವ ಸಂಬಂಧ ಕಳೆದ ಜನವರಿಯ ಕೊನೆ ವಾರದಲ್ಲಿ ಶಾಸಕ ಕೆ. ನೇಮರಾಜ ನಾಯ್ಕ 75 ಮೀಟರ್ ಉದ್ದ ಅಗಲ ವಿಸ್ತ್ರೀರ್ಣದ ಬೃಹತ್ ಛಾವಣೆಗೆ ಪೂಜೆ ನೆರವೇರಿಸಿದರು.

₹83 ಲಕ್ಷ ವೆಚ್ಚದ ಈ ಕಾಮಗಾರಿಯ ನಿರ್ವಹಣೆಯನ್ನು ನಿರ್ಮಿತಿ ಕೇಂದ್ರದವರಿಗೆ ವಹಿಸಲಾಗಿದೆ. ಪ್ರಾರಂಭದಲ್ಲಿ ಕಾಮಗಾರಿಯನ್ನು ವೇಗವಾಗಿ ಮಾಡುವ ಭರವಸೆ ನೀಡಿ ಕಾರ್ಯಕ್ಕೆ ಮುಂದಾದ ನಿರ್ಮಿತಿ ಕೇಂದ್ರದವರು ಒಂದು ಬದಿಯಲ್ಲಿ ಪಿಲ್ಲರ್ ಹಾಕಿ ಅಡ್ಡ ಬೀಮ್ ಹಾಕುವ ಕಾಮಗಾರಿಯನ್ನು 8 ತಿಂಗಳವರೆಗೆ ಕೈಗೊಂಡು ಇದೀಗ ಅರ್ಧಂಬರ್ಧ ಮಾಡಿ ವಿದ್ಯುತ್ ಲೈನ್ ನೆಪ ಹೇಳಿ ಕಾಮಗಾರಿಯನ್ನು ಒಮ್ಮೇಲೆ ಸ್ಥಗಿತಗೊಳಿಸಿದ್ದಾರೆ.

ವಿದ್ಯುತ್ ಕಂಬ ಮತ್ತು ತಂತಿ ತೆರವುಗೊಳಿಸಿ ಕೇಬಲ್ ಹಾಕುವ ಕಾರ್ಯ ಕೈಗೊಳ್ಳಬೇಕು. ಇಲ್ಲದಿದ್ದರೆ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ನಿರ್ಮಿತಿ ಕೇಂದ್ರದವರು ಸಮಜಾಯಿಷಿ ನೀಡುತ್ತಿದ್ದಾರೆ. ಈ ಕೆಲಸವನ್ನು ಜೆಸ್ಕಾಂ ಇಲಾಖೆಯವರು ಮಾಡಬೇಕಿದ್ದು, ಇದಕ್ಕೆ ತಗಲುವ ವೆಚ್ಚವನ್ನು ದೇವಸ್ಥಾನ ಆಡಳಿತ ಮಂಡಳಿ ವಹಿಸಬೇಕೆ ಹೊರತು ಜೆಸ್ಕಾಂನಿಂದ ಮಾಡಲು ಆಗದು ಎಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರದ ಕೆಲಸ ಮಾಡಬೇಕಾದ ಅಧಿಕಾರಿಗಳು ಈ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಜೆಸ್ಕಾಂ ಮತ್ತು ನಿರ್ಮಿತಿ ಕೇಂದ್ರದವರ ಗೊಂದಲದ ಕಾರಣದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು, ಭಕ್ತರು ಮತ್ತು ಇಲ್ಲಿನ ನಿವಾಸಿಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆಯೇ ಇಲ್ಲದಂತಾಗಿದೆ. ಇದೀಗ ಶ್ರಾವಣ ಮಾಸ ಆರಂಭಗೊಂಡಿದ್ದು, ಅಸಂಖ್ಯಾತ ಭಕ್ತರು ಶ್ರೀ ಸ್ವಾಮಿಯ ದರ್ಶನ ಮತ್ತು ಸೇವೆ ಸಲ್ಲಿಸಲು ಆಗಮಿಸುತ್ತಿದ್ದು, ಕಾಮಗಾರಿ ಸ್ಥಗಿತದಿಂದ ದೇವಸ್ಥಾನಕ್ಕೆ ತೆರಳಲು ಕಿರಿಕಿರಿ ಅನುಭವಿಸುವಂತಾಗಿದೆ.

ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಿ ವಿದ್ಯುತ್ ಕಂಬ ಮತ್ತು ತಂತಿ ತೆರವುಗೊಳಿಸುವ ಕಾರ್ಯವನ್ನು ಜೆಸ್ಕಾಂನ ಸಹಾಯ ಪಡೆದು ಮಾಡಲು ಮುಂದಾಗುವಂತೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೂ ಇದುವರೆಗೂ ಜೆಸ್ಕಾಂಗೆ ವೆಚ್ಚ ಭರಿಸುವ ಕಾರ್ಯವನ್ನು ಸಂಬಂಧಪಟ್ಟವರು ಮಾಡಿಲ್ಲ. ಹೀಗಾಗಿ ಕಾಮಗಾರಿ ಕುಂಠಿತಗೊಂಡಿದೆ ಎಂದು ಜನತೆ ದೂರುತ್ತಿದ್ದಾರೆ.

ಶ್ರಾವಣ ಮಾಸ, ರಥೋತ್ಸವ, ಕಾರ್ತಿಕ ಮಹೋತ್ಸವ ಮತ್ತಿತರ ಪ್ರಮುಖ ವಿಶೇಷಗಳು ಒಂದರ ಮೇಲೆ ಒಂದರಂತೆ ಬರತೊಡಗಿವೆ. ಇದಕ್ಕೆ ಪೂರಕವಾಗಿ ಭಕ್ತರಿಗೆ ನೆರಳು ಕಲ್ಪಿಸುವ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಭಕ್ತರಲ್ಲಿ ಬೇಸರ ತರಿಸಿದೆ. ಸಂಬಂಧಪಟ್ಟವರು ಈಗಲಾದರೂ ಕಾಳಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’