ಹಳಿಯಾಳ ಶಾಂತಿ, ಸಹಬಾಳ್ವೆಯ ಪುಣ್ಯಭೂಮಿ: ಶಾಸಕ ಆರ್‌.ವಿ. ದೇಶಪಾಂಡೆ

KannadaprabhaNewsNetwork |  
Published : Apr 28, 2025, 12:48 AM IST
27ಎಚ್.ಎಲ್.ವೈ-1: ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರು ಪಟ್ಟಣದ ಶ್ರೀ ಶಿವಾಜಿ ವಿದ್ಯಾಲಯದ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಪಟ್ಟಣವು ಇಂದು ಶಾಂತಿ, ಸಹಬಾಳ್ವೆಯ ಸ್ಥಳವಾಗಿದೆ. ಇದರಿಂದ ಇಲ್ಲಿ ಬಂದು ನೆಲೆಸುವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.

ಹಳಿಯಾಳ: ಪಟ್ಟಣವು ಇಂದು ಶಾಂತಿ, ಸಹಬಾಳ್ವೆಯ ಸ್ಥಳವಾಗಿದೆ. ಇದರಿಂದ ಇಲ್ಲಿ ಬಂದು ನೆಲೆಸುವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಇದರಿಂದಾಗಿ ಹಳಿಯಾಳದಲ್ಲಿ ಇಂದು ಜಮೀನಿಗೆ ಬಂಗಾರಕ್ಕಿಂತ ದುಪ್ಪಟ್ಟು ಬೆಲೆ ಬಂದಿದೆ. ಈ ಪರಿವರ್ತನೆ ಹೇಗೆ? ಏಕೆ ಎಂದು ಅಭಿವೃದ್ಧಿಯಲ್ಲಿ ರುಚಿ ಹೊಂದಿರುವವರು ಚಿಂತಿಸಬೇಕು ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಶನಿವಾರ ಸಂಜೆ ಪಟ್ಟಣದ ಶಿವಾಜಿ ವಿದ್ಯಾಲಯದ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಮಾತುಗಾರನಲ್ಲ. ನಾನು ಯಾವತ್ತೂ ಕೆಲಸಗಾರ. ಕೆಲಸದಲ್ಲಿ ವಿಶ್ವಾಸವಿರಿಸಿಕೊಂಡಾತ ಎಂದರು. ರಾಜ್ಯದ ಸದನದಲ್ಲಿಯೇ ನಾನು ಹಿರಿಯ ಶಾಸಕನಾಗಿದ್ದು, ಹಳಿಯಾಳದ ಗೌರವಕ್ಕೆ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ ಎಂದರು.

40 ವರ್ಷಗಳ ಹಿಂದಿನ ಹಳಿಯಾಳಕ್ಕೆ ಹೋಲಿಸಿದರೆ ಇಂದಿನ ಹಳಿಯಾಳ ಸಂಪೂರ್ಣ ಮೂಲಭೂತ ಹಾಗೂ ಶೈಕ್ಷಣಿಕ ಸೌಲಭ್ಯಗಳುಳ್ಳ ಪರಿಸರಸ್ನೇಹಿ, ಸಾಮರಸ್ಯ, ಸಹಬಾಳ್ವೆಯ ಮಾದರಿ ಪಟ್ಟಣವಾಗಿ ರೂಪುಗೊಳ್ಳುತ್ತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದಕ್ಕೆಲ್ಲ ನಿಮ್ಮೆಲ್ಲರ ಸಹಕಾರ ಮತ್ತು ತಾವು ನನ್ನ ನಾಯಕತ್ವದ ಮೇಲೆ ಇಟ್ಟಿರುವ ಅಚಲ ವಿಶ್ವಾಸವೇ ಮೂಲ ಕಾರಣವಾಗಿದೆ ಎಂದರು.

ಹಳಿಯಾಳ ತಾಲೂಕಿನಲ್ಲಿ ಪ್ರತಿ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲೆಗಳೂ, ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆಗಳು ಮತ್ತು ಐಟಿಐ, ಡಿಪ್ಲೋಮಾ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳು ಆರಂಭಗೊಂಡಿವೆ. ಹಳಿಯಾಳ ಇಂದು ಶಿಕ್ಷಣ ಕೇಂದ್ರವಾಗಿ ಬದಲಾದ ಪರಿಣಾಮ ವಿದ್ಯಾರ್ಜನೆಗಾಗಿ ನಗರಗಳಿಂದ ವಿದ್ಯಾರ್ಥಿ ಸಮೂಹ ಇಂದು ಹಳಿಯಾಳಕ್ಕೆ ಬರುತ್ತಿದ್ದಾರೆ ಎಂದರು.

ಶತಮಾನೋತ್ಸವ, ಸಮಿತಿಯವರು ಶಿವಾಜಿ ವಿದ್ಯಾಲಯದ ಅಭಿವೃದ್ಧಿಯ ದೃಷ್ಟಿಯಿಂದ ಕೈಗೊಳ್ಳುವ ಯೋಜನೆಗಳಿಗೆ ನನ್ನ ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದರು.

ದೇಶಪಾಂಡೆ ಸಾರಥ್ಯ ವಹಿಸಲಿ:

ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮಾತನಾಡಿ, ಹಳಿಯಾಳದಲ್ಲಿ ಎಂಜಿನಿಯರಿಂಗ್, ಡಿಪ್ಲೋಮಾ ಕಾಲೇಜು ಸೇರಿದಂತೆ ರುಡ್‌ಸೆಟಿ ಹಾಗೂ ಇತರ ಶೈಕ್ಷಣಿಕ ಸಂಸ್ಥೆಗಳನ್ನು ತಂದಿರುವ ಹಿರಿಯ ನಾಯಕ ದೇಶಪಾಂಡೆ ಮನಸ್ಸು ಮಾಡಿದರೆ, ಶಿವಾಜಿ ವಿದ್ಯಾಲಯದ ಅಭಿವೃದ್ಧಿ ಅವರಿಗೆ ದೊಡ್ಡ ಮಾತಲ್ಲ. ಅದಕ್ಕಾಗಿ ದೇಶಪಾಂಡೆ ಶಿವಾಜಿ ವಿದ್ಯಾಲಯದ ಶಾಶ್ವತ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಲು ಮುಂದಾಗಬೇಕು. ನಾವು ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.

ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಶತಮಾನಗಳ ಶಿವಾಜಿ ವಿದ್ಯಾಲಯವನ್ನು ಜೀರ್ಣೊದ್ಧಾರ ಮಾಡಲು ಮಾಡಲು ಹಿರಿಯ ಶಾಸಕರು ಮುಂದಾಗಲಿ ಸಹಕಾರ ನೀಡಲಿದ್ದೇವೆ ಎಂದರು.

ನಿವೃತ್ತ ಹಿರಿಯ ಚಿತ್ರಕಲಾ ಶಿಕ್ಷಕ ಎನ್.ಜಿ. ನೆವಗೇರಿ, ಗೌರೀಶ್ ಚಂದಾವರ್ಕರ್, ತೇಲಂಗ್ ಸರ್, ಲಂಡನದಿಂದ ಆಗಮಿಸಿದ ಹಿರಿಯ ವಿದ್ಯಾರ್ಥಿ ಡಾ.ಅನಂತ ಭದ್ರಿ, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸತ್ಯಜಿತ್ ಗಿರಿ, ಜನಪ್ರತಿನಿಧಿಗಳು, ಶಿವಾಜಿ ವಿದ್ಯಾಲಯದ ಸ್ಥಾಪನೆಗೆ ಜಮೀನು ದಾನವಾಗಿ ನೀಡಿದ ದಿ.ರಾವಸಾಹೇಬ ಶಿವಾಜಿ ನಾರ್ವೆಕರ, ದಿ.ನಿಂಗಪ್ಪ ಹಳ್ಳಿಕೇರಿ ಅವರ ಕುಟುಂಬದವರು, ಡಿಡಿಪಿಐ ಬಸವರಾಜ ಪಾರಿ, ಬಿಇಒ ಪ್ರಮೋದ ಮಹಾಲೆ, ಶಿವಾಜಿ ವಿದ್ಯಾಲಯದ ಪ್ರಾಚಾರ್ಯ ಅಮಿನ ಮಮದಾಪುರ ಇದ್ದರು.

ದಿಲೀಪ್ ಪಡ್ನೀಸ್, ಶ್ರೀಪಾದ ಮಾನಗೆ ಹಾಗೂ ಕಮಲ ಸಿಕ್ವೇರಾ, ಸುರೇಂದ್ರ ಬಿರ್ಜೆ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ