ಗಜ ಶಾಲೆ ಆವರಣದಲ್ಲಿ ನಿರ್ಮಾಣ ಕಾರ್ಯ ಆರಂಭ
ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಜನಕಾರ್ಷಣೆ ಆಗಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ ಗಜ ಶಾಲೆ ಆವರಣದಲ್ಲಿ 12 ಕಿರು ವೇದಿಕೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.
ಫೆ.17ರಂದು ವೇದಿಕೆ ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಉಡುಪಾಸ್ ಸಂಸ್ಥೆ ಆರಂಭಿಸಿದೆ. ವಿಜಯನಗರ ಸಾಮ್ರಾಜ್ಯ ಕಥನ ಕಟ್ಟಿಕೊಡುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ವಿಜಯನಗರ ಜಿಲ್ಲಾಡಳಿತ ಹಸಿರು ನಿಶಾನೆ ಪಡೆದಿದೆ. ಹಾಗಾಗಿ ಈಗ ವೇದಿಕೆ ನಿರ್ಮಾಣ ಕಾರ್ಯವೂ ಆರಂಭಿಸಲಾಗಿದೆ.ಧ್ವನಿ ಮತ್ತು ಬೆಳಕು ಕಾರ್ಯಕ್ರಮದಲ್ಲಿ 110 ಕಲಾವಿದರು ಹಾಗೂ 20 ಜನ ತಂತ್ರಜ್ಞರು ಹಾಗೂ ಸಹಾಯಕ ಸಿಬ್ಬಂದಿ ಇರಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ, ಸುವರ್ಣಯುಗ, ಸಾಮ್ರಾಜ್ಯದ ಪತನವನ್ನು ಈ ಕಲಾವಿದರು ಕಟ್ಟಿಕೊಡಲಿದ್ದಾರೆ. ಹಾಗಾಗಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಣೆಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಫೆ.19ರಂದು ಕಲಾವಿದರ ಆಯ್ಕೆ ಪ್ರಕ್ರಿಯೆ:
ಹಂಪಿಯ ಆನೆಲಾಯದ ಆವರಣದಲ್ಲಿ ಫೆ.28 ರಿಂದ ಮಾ.6 ಆಯೋಜಿಸಿರುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಫೆ.19ರಂದು ಬೆ.10 ಗಂಟೆಯಿಂದ ನೌಕರರ ಭವನ, ಸಂಡೂರು ರಸ್ತೆ, ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಕಲಾವಿದರು ಮತ್ತು ಭರತ ನಾಟ್ಯ ಪರಿಣತರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ಎರಡು ಸ್ಟ್ಯಾಂಪ್ ಸೈಜ್ ಫೋಟೋ ಮತ್ತು ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ, ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ, ಈ ಹಿಂದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಾಖಲೆಗಳು ಹಾಗೂ ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ತಮ್ಮ ನೇಮಕಾತಿ ಪ್ರಾಧಿಕಾರದಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಸ್ಪಷ್ಟವಾದ ಅನುಮತಿ ಪತ್ರ ಪಡೆದು ಜಿಲ್ಲಾಧಿಕಾರಿಗಳಿಂದ ಪತ್ರಕ್ಕೆ ಅನುಮೋದನೆ ಪಡೆದು ಆಯ್ಕೆ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ನೀಡಲಾಗುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಮೇಲೆ ತಿಳಿಸಿದ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.