ಹಂಪಿ ಉತ್ಸವ: ವಿಜಯನಗರ ವಾಸ್ತುಶಿಲ್ಪದಲ್ಲಿ ಮುಖ್ಯ ವೇದಿಕೆ ನಿರ್ಮಾಣ

KannadaprabhaNewsNetwork | Published : Feb 21, 2025 12:46 AM

ಸಾರಾಂಶ

ರಾಣಿ ಸ್ನಾನಗೃಹದ ಮೇಲ್ಗಡೆ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಾಯಗೋಪುರ ಸೃಜನೆ ಮಾಡಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ ಹೊಸಪೇಟೆ

ವಿಶ್ವ ವಿಖ್ಯಾತ ಹಂಪಿ ಉತ್ಸವದ ಪ್ರಧಾನ ವೇದಿಕೆ ಸೃಜನೆಯ ನೀಲನಕ್ಷೆ ಈಗ ಹೊರ ಬಿದ್ದಿದ್ದು, ವೇದಿಕೆ ಹೊಣೆ ಹೊತ್ತಿರುವ ಬೆಂಗಳೂರಿನ ಉಡುಪಾಸ್‌ ಸಂಸ್ಥೆ ಹಾಗೂ ವಿಜಯನಗರ ಜಿಲ್ಲಾಡಳಿತ ಅಂತಿಮವಾಗಿ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಹಂಪಿ ಸ್ಮಾರಕಗಳ ಗುಚ್ಛ ಬಳಸಿಕೊಂಡು ಅತ್ಯಾಕರ್ಷಕ ವೇದಿಕೆ ನಿರ್ಮಾಣ ಮಾಡುತ್ತಿವೆ.

ವಿಜಯನಗರ ವಾಸ್ತುಶಿಲ್ಪ ಸಂರಚನೆಯಲ್ಲಿ ವಿಜಯ ವಿಠಲ ದೇವಾಲಯದ ಸಪ್ತಸ್ವರ ಕಂಬಗಳು, ಕುದುರೆಗೊಂಬೆ ಮಂಟಪದ ಕಂಬ ಬಳಸಿಕೊಂಡು ಆಕರ್ಷಕ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಮಂಟಪದ ಮೇಲ್ಗಡೆ ಕಮಲ ಮಹಲ್‌ ಸೃಜನೆ ಮಾಡಲಾಗುತ್ತಿದೆ. ಜತೆಗೆ ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನ ವರಾಹ ಕೂಡ ಕೆತ್ತನೆ ಮಾಡಲಾಗುತ್ತಿದೆ.

ಮಧ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸ್ಮಾರಕದ ಅಕ್ಕಪಕ್ಕದಲ್ಲಿ ರಾಣಿ ಸ್ನಾನಗೃಹಗಳನ್ನು ಸೃಜಿಸಲಾಗುತ್ತಿದೆ. ರಾಣಿ ಸ್ನಾನಗೃಹದ ಮೇಲ್ಗಡೆ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಾಯಗೋಪುರ ಸೃಜನೆ ಮಾಡಲಾಗುತ್ತಿದೆ.

ವೇದಿಕೆ ಅಡಿಪಾಯದಲ್ಲಿ ಹಜಾರ ರಾಮ ದೇವಾಲಯ, ಮಹಾನವಮಿ ದಿಬ್ಬದ ಮಾದರಿಯಲ್ಲಿ ಆನೆ, ಕುದುರೆ ಕೆತ್ತನೆ ಮಾಡುವ ಮೂಲಕ ಆಕರ್ಷಕ ಮಂಟಪ ಸೃಜಿಸಲಾಗುತ್ತಿದೆ. ಈ ವೇದಿಕೆಯ ಎರಡು ಬದಿಯಲ್ಲಿ ಸಾಲು ಮಂಟಪದ ಕಂಬ ಬಳಸಿ ಆಕರ್ಷಕ ಮಂಟಪ ಸೃಜಿಸಲಾಗುತ್ತಿದೆ. ಅವುಗಳ ಮೇಲೆ ಅಂಜನಾದ್ರಿಯ ಆಂಜನೇಯ ಮತ್ತು ಸಾಸಿವೆ ಕಾಳು ಗಣಪತಿ ಸೃಜಿಸಲಾಗುತ್ತಿದೆ.

ಇನ್ನೂ ವೇದಿಕೆಯ ಎರಡು ಬದಿಯಲ್ಲಿ ವಿಜಯ ವಿಠಲ ದೇವಾಲಯದ ಆವರಣದ ಕಲ್ಲಿನತೇರು ಮಂಟಪ ಸೃಜಿಸಿ ಇದರಲ್ಲಿ ಎಲ್‌ಇಡಿಗೆ ವ್ಯವಸ್ಥೆ ಮಾಡುವ ಕಾರ್ಯವೂ ನಡೆಯುತ್ತಿದೆ.

ಹಂಪಿ ಉತ್ಸವ ಫೆ. 28, ಮಾರ್ಚ್‌ 1 ಮತ್ತು 2ರಂದು ನಡೆಯಲಿದ್ದು, ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಉತ್ಸವದ ಪ್ರಧಾನ ವೇದಿಕೆ ಸೃಜನೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ತಿಳಿಸಿದ್ದಾರೆ.

ಹಂಪಿ ಉತ್ಸವಕ್ಕಾಗಿ ಹಂಪಿ ಸ್ಮಾರಕಗಳ ಗುಚ್ಛ ಬಳಕೆ ಮಾಡಿಕೊಂಡು ಪ್ರಧಾನ ವೇದಿಕೆ ಸೃಜನೆ ಮಾಡುತ್ತಿದ್ದೇವೆ. ಈ ವೇದಿಕೆಯನ್ನು ಐತಿಹಾಸಿಕ ಸ್ಮಾರಕಗಳನ್ನು ಬಳಕೆ ಮಾಡಿಕೊಂಡು ಅತ್ಯಾಕರ್ಷಕವಾಗಿ ಸೃಜನೆ ಮಾಡಲಾಗುತ್ತಿದೆ ಎಂದು ಬೆಂಗಳೂರಿನ ಉಡುಪಾಸ್‌ ಸಂಸ್ಥೆಯ ವಾಸ್ತುಶಿಲ್ಪಿ ಪ್ರಸಾದ್‌ ಹೇಳಿದ್ದಾರೆ.

Share this article