ಶನಿವಾರ ಆಯೋಜಿಸಲಾಗಿದ್ದ ಗಾಳಿಪಟ ಪ್ರದರ್ಶನ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ನಿರಾಸಕ್ತಿಗೆ ಸಾಕ್ಷಿಯಾಯಿತು.
ಬಿ. ಲಕ್ಷ್ಮಿಕಾಂತಸಾ
ಹಂಪಿ: ಇಲ್ಲಿನ ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಗಾಳಿಪಟ ಪ್ರದರ್ಶನ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ನಿರಾಸಕ್ತಿಗೆ ಸಾಕ್ಷಿಯಾಯಿತು.
ಬೆಂಗಳೂರಿನ ಪಿ.ಕೆ. ರಾವ್ ನೇತೃತ್ವದಲ್ಲಿ ಸಂಘಟಿಸಲಾಗಿದ್ದ ಗಾಳಿಪಟ ಉತ್ಸವದಲ್ಲಿ ದೊಡ್ಡಬಳ್ಳಾಪುರದ ಗಾಳಿಪಟ ಕಲಾಸಂಘ, ಕೇರಳದ ಒನ್ ಇಂಡಿಯಾ ಕೈಟ್ ಟೀಮ್, ಒಡಿಶಾದ ಕೈಟ್ ಮೈನ್, ಗುಜರಾತಿನ ಇಂಡಿಯಾ ಕೈಟ್ ಅಸೋಸಿಯೇಶನ್ ಹಾಗೂ ಮತ್ತಿತರ ತಂಡಗಳು ಸಾವಿರಕ್ಕೂ ಹೆಚ್ಚು ಮಾದರಿಯ ಗಾಳಿಪಟಗಳೊಂದಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ, ನಿಗದಿತ ಸಮಯಕ್ಕೆ ಪ್ರದರ್ಶನಕ್ಕೆ ಚಾಲನೆ ದೊರೆಯದೆ, ಸುಮಾರು ಎರಡೂವರೆ ತಾಸು ವಿಳಂಬವಾಯಿತು.
ಕ್ರೀಡಾಂಗಣದಲ್ಲಿ ಗಾಳಿಪಟ ಹಾರಿಸಲು ಪೂರಕ ವಾತಾವರಣ ಇರಲಿಲ್ಲ. ಗಾಳಿ ಒಂದೇ ದಿಕ್ಕಿನಲ್ಲಿ ಬೀಸದೇ ಕ್ರೀಡಾಂಗಣದ ಸುತ್ತ ಗಿರಕಿ ಹೊಡೆಯುತ್ತಿತ್ತು. ಪರಿಣಾಮವಾಗಿ ವೇಗವಾಗಿ ನಭಕ್ಕೇರುತ್ತಿದ್ದ ಗಾಳಿಪಟಗಳು ಅಷ್ಟೇ ವೇಗದಲ್ಲಿ ನೆಲಕ್ಕೊರಗುತ್ತಿದ್ದವು. ರಜಾ ದಿನದ ಕಾರಣ ಉತ್ಸವ ಕಣ್ತುಂಬಿಕೊಳ್ಳಲು ಮಕ್ಕಳೊಂದಿಗೆ ಬಂದಿದ್ದ ಪೋಷಕರಿಗೆ ಪದೇ ಪದೇ ನೆಲಕ್ಕೊರಗುತ್ತಿದ್ದ ಗಾಳಿಪಟಗಳು ರಸಭಂಗ ಉಂಟು ಮಾಡಿದವು.
ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿದ್ದ ಗಾಳಿಪಟ ಪ್ರೇಮಿಗಳು ನೀರಸವಾದ ಉತ್ಸವದ ಪರಿಣಾಮವಾಗಿ ಒಬ್ಬೊಬ್ಬರಾಗಿ ಕ್ರೀಡಾಂಗಣದಿಂದ ಹೊರ ನಡೆದರು.
ಒಡಿಶಾದ ಕೈಟ್ ಮೈನ್‌ನ ಜೈಸಾಲ್ ದೀಪ ಮತ್ತು ಹಿತೇಶ್ ಸಹೋದರರು ಸುಸಜ್ಜಿತ ಗಾಳಿಪಟ ಉಡಾವಣೆಗೆ ಕ್ರೀಡಾಂಗಣದಲ್ಲಿನ ಅವ್ಯವಸ್ಥೆಗೆ ಸಿಡಿಮಿಡಿಗೊಂಡರು. ಮೊಬೈಲ್ ಕ್ಯಾಮೆರಾದಲ್ಲಿ ಉತ್ಸವದ ಕ್ಷಣಗಳನ್ನು ಸೆರೆ ಹಿಡಿಯಲೆಂದು ಸಾರ್ವಜನಿಕರು ಪದೇ ಪದೇ ಕ್ರೀಡಾಂಗಣಕ್ಕೆ ನುಗ್ಗಿ ಬರುತ್ತಿದ್ದ ಪರಿಣಾಮವಾಗಿ ಗಾಳಿಪಟ ಹಾರಿಸಲು ಬಂದಿದ್ದ ತಂಡಗಳಿಗೆ ತೊಂದರೆಯಾಯಿತು. ದೊಡ್ಡಬಳ್ಳಾಪುರದ ಗಾಳಿಪಟ ಪಟುಗಳು ತಾವು ತಂದಿದ್ದ ೪೦೦ಕ್ಕೂ ಹೆಚ್ಚು ವಿಭಿನ್ನ ಮಾದರಿಯ ಗಾಳಿಪಟಗಳನ್ನು ಹಾರಿಸುವ ಧೈರ್ಯ ಮಾಡಲಿಲ್ಲ.
ಭಾರತದ ಅತಿಹೆಚ್ಚು ಗಾಳಿಪಟಗಳ ಸಂಗ್ರಹಕಾರ ಎನ್ನುವ ಖ್ಯಾತಿಯ ಗುಜರಾತ್ ಇಂಡಿಯಾ ಕೈಟ್‌ನ ನಿತೇಶ್ ಹರಸಾಹಸ ಮಾಡಿ ಅಕ್ಟೋಪಸ್ ಮಾದರಿಯ ಗಾಳಿಪಟ ಹಾರಿಸಲು ಮತ್ತು ಒಡಿಶಾದ ಜೈಸಾಲ್ ದೀಪ ಮತ್ತು ಹಿತೇಶ್ ಹುಲಿ, ಮಿಕ್ಕಿ ಮೌಸ್, ಕುದುರೆಯ ರೂಪದ ಗಾಳಿಪಟ ಹಾರಿಸಲು ಯಶಸ್ವಿಯಾದರು.
ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರೊಂದಿಗೆ ಶಾಸಕರಾದ ಎಚ್.ಆರ್. ಗವಿಯಪ್ಪ ಹಂಪಿ ಉತ್ಸವದ ಲಾಂಛನದ ರೂಪದ ಗಾಳಿಪಟ ಹಾರಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಶಾಸಕರು ಬರುವವರೆಗೆ ಗಾಳಿಪಟ ಹಾರಿಸದಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ನಿರ್ಬಂಧಿಸಿದ್ದರಿಂದ ನಿಗದಿತ ಸಮಯಕ್ಕೆ ಪ್ರದರ್ಶನ ಶುರುವಿಗೆ ಅಡ್ಡಿಯಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.