ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ ನಡೆದಿದ್ದು, ನಾಲ್ಕು ವೇದಿಕೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಪ್ರಧಾನ ವೇದಿಕೆ ಹಾಗೂ ಎರಡನೇ ಸಮನಾಂತರ ವೇದಿಕೆ ಕಾರ್ಯವೂ ಆರಂಭಿಸಲಾಗಿದೆ.
70 ಸಾವಿರ ಕುರ್ಚಿಗಳು:
ಹಂಪಿ ಉತ್ಸವಕ್ಕಾಗಿ ಪ್ರಧಾನ ವೇದಿಕೆಯ ಮುಭಾಂಗದಲ್ಲಿ 70 ಸಾವಿರ ಕುರ್ಚಿಗಳನ್ನು ಅಳವಡಿಸಲಾಗುತ್ತಿದೆ. ಈ 70 ಸಾವಿರ ಆಸನಗಳಲ್ಲಿ ಸಾರ್ವಜನಿಕರು, ಗಣ್ಯಾತಿಗಣ್ಯರು, ಗಣ್ಯರು ಆಗಮಿಸಿ ಮೂರು ದಿನಗಳ ಉತ್ಸವ ವೀಕ್ಷಣೆ ಮಾಡಲಿದ್ದಾರೆ. ಈ ಬಾರಿ ಹಂಪಿ ಉತ್ಸವದ ವೀಕ್ಷಣೆಗೆ ಜನರು ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಉತ್ಸವಕ್ಕೆ ಭರದ ಸಿದ್ಧತೆಯೂ ನಡೆದಿದೆ.ಉತ್ಸವದಲ್ಲಿ ಹೆಸರಾಂತ ಕಲಾವಿದರು ಆಗಮಿಸುವ ಹಿನ್ನೆಲೆಯಲ್ಲಿ ಸಂಗೀತಪ್ರಿಯರು, ಸಿನಿ ಕಲಾವಿದರ ಅಭಿಮಾನಿಗಳು ಉತ್ಸವ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದು ಎಣಿಕೆ ಹಾಕಲಾಗಿದೆ. ಈ ಉತ್ಸವ ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರಲಿದೆ. ಹಾಗಾಗಿ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಹರಿದು ಬರುವ ಸಾಧ್ಯತೆ ಇದೆ.
ಹಂಪಿ ಉತ್ಸವದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಆಗಮಿಸಲಿದ್ದಾರೆ. ಕಲಾವಿದರ ದಂಡೇ ಉತ್ಸವ ವೀಕ್ಷಣೆಗೆ ಆಗಮಿಸುವ ಹಿನ್ನೆಲೆಯಲ್ಲಿ ಈ ಉತ್ಸವ ಜನರನ್ನು ಸೆಳೆಯಲಾರಂಭಿಸಿದೆ.
ಈ ಮಧ್ಯೆ ಈ ಬಾರಿ ಯೋಗಕ್ಕೆ ಆದ್ಯತೆ ನೀಡಲು, ಹಂಪಿಯ ವಿಜಯ ವಿಠಲ ದೇವಾಲಯದ ಆವರಣದಲ್ಲಿ ಯೋಗಪಟುಗಳು ಯೋಗಾಸ ಮಾಡಲು ಅವಕಾಶ ಕೂಡ ನೀಡಲಾಗುತ್ತಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ಉತ್ಸವ ಗಮನ ಸೆಳೆಯುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ.