ಹೊಸಪೇಟೆ: ಹಂಪಿ ಉತ್ಸವದ ನಿಮಿತ್ತ ಮಾರ್ಚ್ 1 ರ ಬೆಳಗ್ಗೆ 7 ಗಂಟೆಗೆ ವಿಜಯ ವಿಠಲ ದೇವಸ್ಥಾನದ ಆವರಣದ ಕಲ್ಲಿನ ತೇರಿನ ಬಳಿ ಯೋಗಾಸನ ನಡೆಯಲಿದೆ.
ಹಂಪಿ ಉತ್ಸವದಲ್ಲಿ ನಡೆಯಲಿರುವ ಯೋಗಾಸನದಲ್ಲಿ 500 ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿ ಯೋಗಾಸನ ನಡೆಸುವ ಮೂಲಕ ಯುವ ಸಮೂಹಕ್ಕೆ ಯೋಗದ ಮಹತ್ವ ಸಾರುವ ಯೋಜನೆ ಜಿಲ್ಲಾಡಳಿತ ರೂಪಿಸಿದೆ.
ಯೋಗದ ಮಹತ್ವ ಸಾರುವ ಕಾರ್ಯ:ಫೆ. 28, ಮಾ.1ಮತ್ತು 2ರಂದು ಹಂಪಿ ಉತ್ಸವ ನಡೆಯಲಿದ್ದು, ಈಗಾಗಲೇ ಐದು ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇನ್ನೊಂದೆಡೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ 12 ಕಿರು ವೇದಿಕೆಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ಉತ್ಸವದ ನಿಮಿತ್ತ ಶ್ವಾನ, ಟಗರು, ಎತ್ತುಗಳ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಹಂಪಿ ಬೈ ಸ್ಕೈ ಸೇರಿದಂತೆ ವಿವಿಧ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.ಹಂಪಿ ಉತ್ಸವದಲ್ಲಿ ಯೋಗಾಸನ ನಡೆಸುವ ಮೂಲಕ ಯುನೆಸ್ಕೊ ಪ್ರದೇಶದಲ್ಲಿ ವಿಶ್ವ ಮಾನ್ಯತೆ ಪಡೆದಿರುವ ಯೋಗ ಮಾಡುವ ಮೂಲಕ ಇಡೀ ಜಗತ್ತಿಗೆ ಯೋಗದ ಮಹತ್ವ ಸಾರುವ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ವಚನಾನಂದಶ್ರೀಗಳು ಹಂಪಿಯಲ್ಲಿ ಯೋಗಾಸನ ಮಾಡುವ ಮೂಲಕ ವಿಶ್ವದ ಮಹತ್ವ ಸಾರಿದ್ದರು. ಈಗ ಮತ್ತೊಮ್ಮೆ ಈ ಪ್ರಯತ್ನ ಮಾಡಲಾಗುತ್ತಿದೆ.
ಈಗಾಗಲೇ ಪತಂಜಲಿ ಸಮಿತಿ, ಹಂಪಿಯ ರಂಜು ಆರ್ಟ್ಸ್ ಯೋಗಪಟುಗಳ ಜತೆಗೂ ಚರ್ಚಿಸಲಾಗಿದೆ. ಹಂಪಿ ಉತ್ಸವದಲ್ಲಿ ಯೋಗಪಟುಗಳಿಗೂ ಅವಕಾಶ ನೀಡಿ ಗುರುತಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಈಗಾಗಲೇ ಯೋಗಪಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಪಿ ಉತ್ಸವದಲ್ಲಿ ಯೋಗ ನಡೆಸುವುದರ ಬಗ್ಗೆ ವೈರಲ್ ಮಾಡುತ್ತಿದ್ದಾರೆ.
ಹಂಪಿ ಉತ್ಸವದ ನಿಮಿತ್ತ ಈ ಬಾರಿ ವಿಜಯವಿಠಲ ದೇವಾಲಯದ ಆವರಣದ ಕಲ್ಲಿನ ತೇರಿನ ಬಳಿ ಯೋಗಾಸನ ನಡೆಸಲಾಗುವುದು. ಮಾರ್ಚ್ 1ರ ಬೆಳಗ್ಗೆ 7 ಗಂಟೆಗೆ ಯೋಗಾಸನ ನಡೆಯಲಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಬಸ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.