ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಲು ಇಮ್ಮಡಿ ಬಸವ ಮೇದರಕೇತೇಶ್ವರ ಸ್ವಾಮಿ ಸಲಹೆ

KannadaprabhaNewsNetwork |  
Published : Feb 23, 2025, 12:32 AM IST
ನರಸಿಂಹರಾಜಪುರ ಪಟ್ಟಣದ ಮೇದರ ಬೀದಿಯ ಶ್ರೀ ಕರಿಯಮ್ಮ ಹಾಗೂ ಶ್ರೀ ಅಂತರಘಟ್ಟಮ್ಮ ದೇವಿಯ ಜಾತ್ರೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಚಿತ್ರದುರ್ಗದ ಮೇದರ ಗುರುಪೀಠದ ಇಮ್ಮಡಿ ಬಸವ ಮೇದರ ಕೇತೇಶ್ವರ ಮಹಾ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಶ್ರಮಜೀವಿಗಳಾದ ಮೇದಾರ ಜನಾಂಗದ ಅಭಿವೃದ್ಧಿಗೆ ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಚಿತ್ರದುರ್ಗ ಮೇದರ ಗುರುಪೀಠದ ಇಮ್ಮಡಿ ಬಸವ ಮೇದರಕೇತೇಶ್ವರ ಸ್ವಾಮೀಜಿ ಸಲಹೆ ನೀಡಿದರು.

ಶ್ರೀ ಕರಿಯಮ್ಮ , ಅಂತರಘಟ್ಟಮ್ಮ ದೇವಿಯ ಜಾತ್ರೋತ್ಸವದಲ್ಲಿ ಧಾರ್ಮಿಕ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಶ್ರಮಜೀವಿಗಳಾದ ಮೇದಾರ ಜನಾಂಗದ ಅಭಿವೃದ್ಧಿಗೆ ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಚಿತ್ರದುರ್ಗ ಮೇದರ ಗುರುಪೀಠದ ಇಮ್ಮಡಿ ಬಸವ ಮೇದರಕೇತೇಶ್ವರ ಸ್ವಾಮೀಜಿ ಸಲಹೆ ನೀಡಿದರು.ಶುಕ್ರವಾರ ರಾತ್ರಿ ಪಟ್ಟಣದ ಮೇದರ ಬೀದಿಯಲ್ಲಿ ಕರಿಯಮ್ಮಮತ್ತು ಅಂತರಘಟ್ಟಮ್ಮ ದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಆಯೋಜಿಸಿದ್ದ ಮೇದ ಜನಾಂಗದ ಸಮಾಜವೇಶದಲ್ಲಿ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿದಿರು ಉತ್ಪನ್ನಗಳ ಮಾರಾಟಕ್ಕೆ ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಲು ಮಾಡಿದ ಮನವಿಗೆ ಸ್ಪಂದಿಸಿ ನಿಗಮ ಸ್ಥಾಪಿಸುವ ಭರವಸೆ ನೀಡಿದ್ದರು.

ಆದರೆ, ಆ ಬೇಡಿಕೆ ಈಡೇರಲಿಲ್ಲ. ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೋಷಿತ, ಹಿಂದುಳಿದ ವರ್ಗದ ಧ್ವನಿ ಯಾಗಿದ್ದು ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಮುಖ್ಯಮಂತ್ರಿಗಳ ಆಪ್ತರಾದ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ , ಶಾಸಕ ಟಿ.ಡಿ.ರಾಜೇಗೌಡ ನಿಗಮದ ಸ್ಥಾಪನೆಗೆ ಒತ್ತಡ ಹಾಕಬೇಕು ಎಂದರು.

ಚಿತ್ರದುರ್ಗ ಬಂಜಾರ ಗುರುಪೀಠದ ಸರದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನ ಸಮಕಾಲಿನರಾದ ಶಿವಶರಣ ಮೇದರ ಕೇತಯ್ಯನವರು ನುಡಿದಂತೆ ನಡೆಯಿರಿ ಇದೇ ಜನ್ಮ ಕೊನೆ, ಕಾಯಕವೇ ಕೈಲಾಸ ಎಂದು ಸಾರಿದರು. ಕಾಯಕ ಹಾಗೂ ಬುಡಕಟ್ಟು ಸಮುದಾಯವಾದ ಮೇದಜನಾಂಗವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸುವಲ್ಲಿ ಮೇದರ ಗುರುಪೀಠದ ಕೊಡುಗೆ ಅಪಾರ. ಮೇದ ಅಭಿವೃದ್ಧಿ ನಿಗಮ ಸ್ಥಾಪಿಸಿದರೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಮುಂದೆಬರಲು ಸಹಾಯಕವಾಗಲಿದೆ ಎಂದರು.

ರಾಜ್ಯಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, ಪ್ರತಿಯೊಬ್ಬರು ಸತ್ಯ, ಧರ್ಮ, ನ್ಯಾಯದ ಮಾರ್ಗದಲ್ಲಿ ನಡೆಯಬೇಕು. ದೇವರಿಗೆ ಹೆದರುವುದನ್ನು ಬಿಟ್ಟು ಪ್ರೀತಿ, ಶ್ರದ್ಧೆಯಿಂದ ಆಚರಣೆ ಮಾಡಿದರೆ ದೇವರು ಒಲಿಯುತ್ತಾನೆ. ಮೇದ ಅಭಿವೃದ್ಧಿ ನಿಗಮ ಸ್ಥಾಪಿಸುವ ಬಗ್ಗೆ ಸಿಎಂ ಬಳಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮೇದ ಜನಾಂಗ ದೇವರ ಬಗ್ಗೆ ಭಕ್ತಿ, ಶ್ರದ್ಧೆ ಇಟ್ಟುಕೊಂಡಿರುವ ಶ್ರಮಿಕ ಸಮುದಾಯ ವಾಗಿದೆ. ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಶೋಷಿತರ, ತುಳಿತಕ್ಕೊಳಗಾದ ಸಮುದಾಯಗಳಿಗೆ ಶಕ್ತಿತುಂಬುವ ಕೆಲಸ ಮಾಡುತ್ತಿದೆ. ದೇವಿಗೆ ಬೆಳ್ಳಿ ಪ್ರಭಾವಳಿ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ರನ್ನು ಸನ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ, ಬೆಂಗಳೂರು ಸರ್ವಧರ್ಮ ಗುರು‍ಪೀಠದ ಸಂಗಮ ನಾಥ ಸ್ವಾಮೀಜಿ, ದೇಗುಲ ಸೇವಾ ಸಮಿತಿ ಅಧ್ಯಕ್ಷ ಆರ್.ಪ್ರವೀಣ್ ಕುಮಾರ್ , ಶೆಟ್ಟಿಕೊಪ್ಪ ಎಂ.ಮಹೇಶ್ ಮಾತನಾಡಿದರು.ಸಭೆಯಲ್ಲಿ ಪಪಂ ಅಧ್ಯಕ್ಷೆ ಸುರಯ್ಯಭಾನು, ಸದಸ್ಯರಾದ ಜುಬೇದ, ಕೆ.ಅಣ್ಣಪ್ಪ, ಮಾಜಿ ಸದಸ್ಯ ಲಕ್ಷ್ಮಣ್ ಶೆಟ್ಟಿ, ದುರ್ವಿಗೆರೆ ಕೊಲ್ಲಾರೇಶ್ವರಿ ದೇವಿ ಸಮಿತಿ ಅಧ್ಯಕ್ಷ ರಂಗಯ್ಯ, ತರೀಕೆರೆ ಗುಳ್ಳಮ್ಮ ದೇವಿ ಸೇವಾಸಮಿತಿ ಅಧ್ಯಕ್ಷ ಟಿ.ಆರ್.ಕುಮಾರ್, ಮುಖಂಡರಾದ ಕೆ.ಉಮೇಶ್, ನಿವೃತ್ತ ತಹಸೀಲ್ದಾರ್ ಸೋಮಶೇಖರ್, ಸುಧೀರ್ ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌