ಹಂಪಿ ಸಮೀಪ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಗ್ಯಾಂಗ್‌ರೇಪ್‌ ಕೇಸಲ್ಲಿ ಇಬ್ಬರ ಸೆರೆ

KannadaprabhaNewsNetwork | Updated : Mar 09 2025, 04:54 AM IST

ಸಾರಾಂಶ

ಹಂಪಿ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಸಾಣಾಪುರ ಕೆರೆ ಜಂಗ್ಲಿ ರಸ್ತೆ ಬಳಿ ಗುರುವಾರ ರಾತ್ರಿ ಓರ್ವ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಗ್ಯಾಂಗ್‌ರೇಪ್‌ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.

 ಗಂಗಾವತಿ : ಹಂಪಿ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಸಾಣಾಪುರ ಕೆರೆ ಜಂಗ್ಲಿ ರಸ್ತೆ ಬಳಿ ಗುರುವಾರ ರಾತ್ರಿ ಓರ್ವ ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಗ್ಯಾಂಗ್‌ರೇಪ್‌ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕಾಲುವೆಗೆ ನೂಕಿದಾಗ ಕೊಚ್ಚಿ ಹೋಗಿದ್ದ ಒಡಿಶಾದ ಬಿಬಾಸ್‌ (33) ಸಾವು ಕಂಡಿದ್ದು, ಶವ ಪತ್ತೆಯಾಗಿದೆ.

ಗಂಗಾವತಿ ಸಾಯಿನಗರದ ಮಲ್ಲೇಶ ಅಲಿಯಾಸ್‌ ಹಂದಿ ಮಲ್ಲ ಅಯ್ಯಪ್ಪ ದಾಸರ (22), ಚೇತನಸಾಯಿ ಕಾಮೇಶ್ವರ ಶಿಳ್ಳೇಕ್ಯಾತೇರ (21) ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು ಆತನ ಬಂಧನಕ್ಕೂ ಬಲೆ ಬೀಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಲ್‌. ರಾಮ ಅರಸಿದ್ಧಿ ತಿಳಿಸಿದರು.

ಆರೋಪಿಗಳು ಒಬ್ಬ ಇಸ್ರೇಲಿ ಮಹಿಳೆ ಹಾಗೂ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಸ್ಥಳೀಯ ರೆಸಾರ್ಟ್‌ ಮಾಲಕಿ ದೂರು ನೀಡಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆಯನ್ನು ಶುಕ್ರವಾರವೇ ನಡೆಸಲಾಗಿದೆ. ವರದಿ ಬರಬೇಕಾಗಿದೆ. ಗಾಯಗೊಂಡವರೆಲ್ಲರಿಗೂ ನಗರದ ಎಂಎಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ.

ಆರೋಪಿಗಳು ಗಾರೆ ಕೆಲಸಗಾರರಾಗಿದ್ದು, ಕೃತ್ಯಕ್ಕೂ ಮುನ್ನ ಮದ್ಯಪಾನ ಮಾಡಿ ಸಾಣಾಪುರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಆಗಿದ್ದೇನು?

ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ಅಮೆರಿಕದ ಡ್ಯಾನಿಯೇಲ್, ಇಸ್ರೇಲ್‌ನ ಮಹಿಳೆ, ಮಹಾರಾಷ್ಟ್ರದ ಪಂಕಜ, ಆನೆಗೊಂದಿಯ ರೆಸಾರ್ಟ್‌ ಮಾಲಕಿ, ಒಡಿಶಾದ ಬಿಬಾಸ್‌ ಗುರುವಾರ ರಾತ್ರಿ ಸಂಗೀತ ಕೇಳುತ್ತ ಕುಳಿತಿದ್ದರು. 

ಈ ವೇಳೆ ಬೈಕ್‌ನಲ್ಲಿ ಬಂದ ಸ್ಥಳೀಯ ಮೂವರು ಪೆಟ್ರೋಲ್‌ ಕೇಳಿದ್ದಾರೆ. ಇಲ್ಲಿ ಪೆಟ್ರೋಲ್‌ ಬಂಕ್‌ ಇಲ್ಲ ಎಂದಾಗ, ಹಣ ಕೇಳಿದ್ದಾರೆ. ಹಣ ನೀಡದಿದ್ದಾಗ ಡ್ಯಾನಿಯಲ್, ಪಂಕಜ್ ಮೇಲೆ ಕಲ್ಲಿನಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಬಿಬಾಸ್ ಮೇಲೂ ದಾಳಿ ನಡೆಸಿ ಮೂವರನ್ನೂ ಕಾಲುವೆಗೆ ತಳ್ಳಿದ್ದಾರೆ. 

ಬಳಿಕ ಇಬ್ಬರು ಮಹಿಳೆಯರಿಗೂ ಥಳಿಸಿ ಅಲ್ಲಿಂದ ಸ್ವಲ್ಪ ದೂರ ಕರೆದೊಯ್ದು ಸರದಿಯಂತೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ದಾಳಿಯಲ್ಲಿ ಕಾಲುವೆಗೆ ಬಿದ್ದಿದ್ದ ಇಬ್ಬರು ಈಜಿ ಹೊರ ಬಂದಿದ್ದು, ಬಿಬಾಸ್ ನಾಪತ್ತೆಯಾಗಿದ್ದರು. ಈತನ ಶವ ಮಲ್ಲಾಪುರ ಬಳಿ ಕಾಲುವೆಯಲ್ಲಿ ಶನಿವಾರ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ. 

ಆರು ತಂಡ ರಚನೆ:

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ಗಂಗಾವತಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ತನಿಖೆಗೆ ಬಳ್ಳಾರಿ ವಲಯದ ಐಜಿಪಿ ಲೋಕೇಶ ಕುಮಾರ ಮಾರ್ಗದರ್ಶನದಲ್ಲಿ ಆರು ತಂಡ ರಚಿಸಲಾಗಿತ್ತು. ಶಂಕಿತ ವ್ಯಕ್ತಿಗಳ ಮನೆಗೆ ಹೋಗಿ ಪೊಲೀಸರು ಪರಿಶೀಲಿಸಿದ್ದಾರೆ. ಬಳಿಕ ಅವರ ಮೊಬೈಲ್‌ ನೆಟ್‌ವರ್ಕ್‌ ಆಧರಿಸಿ ಓರ್ವ ಆರೋಪಿಯನ್ನು ಗಂಗಾವತಿ, ಮತ್ತೊಬ್ಬನ್ನು ಹೊಸಪೇಟೆಯಲ್ಲಿ ಬಂಧಿಸಲಾಗಿದೆ

Share this article