ಮುರುಘಾ ಮಠದಲ್ಲಿ ಹಂಪಿ ಕನ್ನಡ ವಿವಿ ಕೇಂದ್ರ: ಪರಮಶಿವಮೂರ್ತಿ

KannadaprabhaNewsNetwork |  
Published : Sep 27, 2025, 01:00 AM IST
 ಪೋಟೋ, 26ಎಚ್‌ಎಸ್‌ಡಿ4: ಚಿತ್ರದುರ್ಗದ ಮುರುಘಾ ಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ವನ್ನು ಗಣ್ಯರು ಉದ್ಘಾಟನೆ ಮಾಡಿದರು, | Kannada Prabha

ಸಾರಾಂಶ

ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಸಂಶೋಧನಾ ಕ್ಷೇತ್ರವನ್ನು ವಿಸ್ತಾರ ಮಾಡುವುದಕ್ಕಾಗಿ ರಾಜ್ಯದ ಅನೇಕ ಕಡೆ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆಯನ್ನು ನೀಡಲಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ಸಂಶೋಧನಾ ಕ್ಷೇತ್ರವನ್ನು ವಿಸ್ತಾರ ಮಾಡುವುದಕ್ಕಾಗಿ ರಾಜ್ಯದ ಅನೇಕ ಕಡೆ ಸಂಶೋಧನಾ ಕೇಂದ್ರಗಳಿಗೆ ಮಾನ್ಯತೆಯನ್ನು ನೀಡಲಾಗುತ್ತಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.

ಮುರುಘಾ ಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಉದ್ಘಾಟನೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ನಿಟ್ಟಿನಲ್ಲಿ ಚಿತ್ರದುರ್ಗದ ಮುರುಘಾ ಮಠದಲ್ಲಿ ಸಾಕಷ್ಟು ಇತಿಹಾಸದ ಆಲೋಚನೆಗಳು ಇರುವುದರಿಂದ ಶ್ರೀಮಠಕ್ಕೆ ಸಂಶೋಧನಾ ಕೇಂದ್ರದ ಮಾನ್ಯತೆಯನ್ನು ನೀಡಿದ್ದೇವೆ. ಇಲ್ಲಿ ಹೆಚ್ಚು ಹೆಚ್ಚು ಸಂಶೋಧನೆಗಳು ನಡೆಯಬೇಕೆಂಬ ಆಶಯ ನಮ್ಮದು ಹಾಗೂ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಾಯವಾಗವೆಂಬುದು ನಮ್ಮ ಬಯಕೆ ಎಂದರು.

ಮುರುಗಿ ಶಾಂತವೀರ ಶ್ರೀಗಳು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರನ್ನು ಮಾಡಿದವರು. ತಮ್ಮ ಇಡೀ ಸಾಹಿತ್ಯದಲ್ಲಿ ವೀರಶೈವ ಕವಿಗಳ ಪರಂಪರೆಯನ್ನು ಸಾಗಿಸಿಕೊಂಡು ಬಂದವರು. ಅವರ ಕೃತಿಯಲ್ಲಿ ಪೂರ್ವದ ಸಹಸ್ರಾರು ಕವಿಗಳು ಉಪೇಕ್ಷೆ ಮಾಡಿದ ಸತ್ಯವನ್ನು ಮೇಲೆತ್ತಿ ಬರೆದಿದ್ದಾರೆ. ಇದೊಂದು ಕ್ರಾಂತಿಕಾರಿ ಸಂದೇಶ. ಕಟ್ಟಿಗೆಗೆ ಒಂದು ಮಹತ್ವದ ಸಂದೇಶವನ್ನು ಕೊಟ್ಟವರು. ತೃಣಕ್ಕೆ ಸಮಾನವಾದ ಕಟ್ಟಿಗೆಗೆ ಮಹತ್ವವನ್ನು ನೀಡಿದರು. ಮಧ್ಯಕಾಲೀನ ಸಂದರ್ಭದಲ್ಲಿ ಶರಣರ ಕಾಣಿಕೆಯನ್ನು ಪರಿಭಾವಿಸಿಕೊಂಡು ನೋಡಿದ್ದಾರೆ ಎಂದರು.

16-17 ನೇ ಶತಮಾನದಲ್ಲಿ ಇದ್ದಂತಹ ಶ್ರೀಮಠದ ಸ್ವಾಮಿಗಳು ಪಂಡಿತರಿಗೂ ಜನಸಾಮಾನ್ಯರಿಗೂ ಸೇತುವೆಯಾಗಿದ್ದಾರೆ. ಧರ್ಮ ಮತ್ತು ಸಾಹಿತ್ಯವನ್ನು ಜೊತೆಯಾಗಿ ತೆಗೆದುಕೊಂಡು ಹೋದವರು. ಇಂದು ಅನೇಕ ವಿತಂಡ ವಾದಗಳ ಮೂಲಕ ಧರ್ಮ, ಸಾಹಿತ್ಯ ಬೇರೆ ಬೇರೆ ಎಂಬ ಭಾವನೆ ಇದೆ. ಇದೊಂದು ಅಪಾಯಕಾರಿ ನಡಿಗೆ. ಶರಣರು ಸಾಹಿತ್ಯದ ಮೂಲಕ ಆತ್ಮೋದ್ಧಾರದ ಕೆಲಸ ಮಾಡಿದವರು. ಮಠಾಧೀಶರಲ್ಲಿ ಶಾಂತವೀರ ಮುರುಗಿ ಸ್ವಾಮಿಗಳ ಕೃತಿಗಳು ಉನ್ನತ ಮಟ್ಟದಲ್ಲಿ ಇದ್ದವು. ಅವರ ಅನೇಕ ಕೃತಿಗಳು ಇಂದು ಲಭ್ಯವಿಲ್ಲ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ನಿರ್ದೇಶಕ ಡಾ.ಅಮರೇಶ್ ಯತಗಲ್ ಮಾತನಾಡಿ, ಇದೊಂದು ತ್ರಿವೇಣಿ ಸಂಗಮ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿಭಿನ್ನ ಸಂಶೋಧನೆಗಳು ನಡೆಯುತ್ತವೆ. ಜನ ಸಮುದಾಯ, ಬುಡಕಟ್ಟು ಸಂಸ್ಕೃತಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿದೆ. ಪ್ರತಿ ವರ್ಷ 200ರಿಂದ 250 ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಉತ್ತಮ ಪಿಎಚ್‌ಡಿ ಸಂಶೋಧನೆಗಳು ನಡೆಯಲಿ. ಚರಿತ್ರೆ, ಭಾಷೆ, ಪುರಾತತ್ವ, ಜಾನಪದ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ವಿಷಯಗಳಿಗೆ ಮಾನ್ಯತೆ ಕೊಡಲಾಗಿದೆ. ಇಲ್ಲಿ ಅಧ್ಯಯನವನ್ನು ಮಾಡುವವರಿಗೆ ಸುಸಜ್ಜಿತವಾದ ಕಟ್ಟಡ, ಉತ್ತಮವಾದ ಗ್ರಂಥಾಲಯವನ್ನು ಒದಗಿಸಲಾಗಿದೆ ಎಂದರು.

ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಬೃಹನ್ಮಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಹೆಗ್ಗುಂದ ವನಕಲ್ಲು ಮಲ್ಲೇಶ್ವರ ಸಂಸ್ಥಾನಮಠದ ಡಾ.ಬಸವ ರಮಾನಂದ ಸ್ವಾಮೀಜಿ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ , ಧಾರವಾಡದ ಇತಿಹಾಸ

ತಜ್ಞರಾದ ಡಾ ಲಕ್ಷಮಣ್‌ ತೆಲಗಾವಿ, ಚಿತ್ರದುರ್ಗದ ಶಾಸನ ತಜ್ಞ ಡಾ.ಬಿ.ರಾಜಶೇಖರಪ್ಪ, ತುಮಕೂರಿನ ಹಸ್ತಪ್ರತಿ ತಜ್ಞ ಡಾ.ಬಿ.ನಂಜುಂಡಸ್ವಾಮಿ, ವಿಶ್ರಾಂತ ಕುಲಪತಿ ಡಾ.ಎ.ಮುರಿಗೆಪ್ಪ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಮಾನ್ಯತಾ ಕೇಂದ್ರವನ್ನು ಉದ್ಘಾಟಿಸಲಾಯಿತು.

ಇದೇ ಸಂದರ್ಭದಲ್ಲಿ ಗಣ್ಯರು ಸತ್ಯಶುದ್ದಕಾಯಕ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ