ಹಂಪಿ: ಮಕ್ಕಳಲ್ಲಿ ತಿಳಿವಳಿಕೆ ಮೂಡಿಸಿ, ಹಂಪಿಯ ಇತಿಹಾಸ ಪರಂಪರೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕನ್ನಡ ವಿಶ್ವದ್ಯಾಲಯದಿಂದ ತಿಂಗಳಿಗೊಮ್ಮೆ ವಿಶೇಷ ಉಪನ್ಯಾಸ ಏರ್ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್. ಆರ್ ಗವಿಯಪ್ಪ ತಿಳಿಸಿದರು.
ಹಂಪಿ ಅಭಿವೃದ್ಧಿಗಾಗಿ ಭಾರತೀಯ ಪುರಾತತ್ವ ಇಲಾಖೆಗೆ ಹೊಸ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂಪಿಯ ಎಲ್ಲ ದೇವಾಲಯಗಳು, ಸ್ಮಾರಕಗಳನ್ನು ಪ್ರವಾಸಿಗರು ಸುಗಮವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸ್ಮಾರಕಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಿಸುಲು ಟ್ರಾವೆಲ್ ರೋಡ್ಸ್ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ನೂರಾರು ಸ್ಮಾರಕಗಳನ್ನು ಪ್ರವಾಸಿಗರು ಸರಾಗವಾಗಿ ನೋಡಬಹುದು ಎಂದು ಶಾಸಕ ಗವಿಯಪ್ಪ ಹೇಳಿದರು.
ಶಾಸಕ ಶ್ರೀನಿವಾಸ್ ಎನ್.ಟಿ. ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಕಾಲದಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ಗೊಂದಲಯಮಯವಾಗಿದೆ. ಈ ಹಿನ್ನೆಲೆಯಲ್ಲಿ ವಿಜಯನಗರದ ಇತಿಹಾಸವನ್ನು ಯುವಜನರಿಗೆ ತಿಳಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಕನ್ನಡ ವಿಶ್ವವಿದ್ಯಾಲಯದಿಂದ ಹಂಪಿಯ ಕುರಿತು ಹೆಚ್ಚು ಅಧ್ಯಯನಗಳು ನಡೆದಿವೆ. ಆದರೆ ಇತ್ತೀಚಿಗೆ ವಿಶ್ವವಿದ್ಯಾಲಯ ಅನುದಾನದ ಕೊರತೆಯಿಂದ ಸೊರಗುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಲು ಸರ್ಕಾರದೊಂದಿಗೆ ಮಾತನಾಡಲಾಗಿದೆ ಎಂದರು.ಪುರಾತತ್ತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ದೇವರಾಜ.ಎ. ಮಾತನಾಡಿ, ವಿಜಯನಗರ ಅಧ್ಯಯನ ಕುರಿತ ವಿಚಾರ ಸಂಕಿರಣ ಇತಿಹಾಸದ ಮಾರ್ಗದರ್ಶನ, ಪುನರ್ ಅವಲೋಕನಕ್ಕೆ ಅವಕಾಶ ಮಾಡಿಕೊಡುತ್ತದೆ. ರಾಜ್ಯ ಪುರಾತತ್ವ ಇಲಾಖೆಯು ಗ್ರಾಮವಾರು ಪ್ರಾಚ್ಯ ಅವಶೇಷಗಳ ಸರ್ವೇಕ್ಷಣಾ ಕಾರ್ಯದ ಮೂಲಕ 119 ತಾಲೂಕುಗಳನ್ನು ಸರ್ವೆ ನಡೆಸಲಾಗಿದೆ. ಗ್ರಾಮಗಳ ಸರ್ವೆ ಮೂಲಕ ಲಭ್ಯವಿರುವ ಪ್ರಾಚ್ಯ ಅವಶೇಷಗಳನ್ನು ದಾಖಲೀಕರಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರುಪಾಕ್ಷಿ ಪೂಜಾರಹಳ್ಳಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಹಂಪಿಯ ಕುರಿತು ಬಹು ಶಿಸ್ತು ಮತ್ತು ಅಂತರ್ ಶಿಸ್ತು ನೆಲೆಯಲ್ಲಿ ಅಧ್ಯಯನಗಳು ನಡೆಯಬೇಕು. ವಿಜಯನಗರ ಕಾಲದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ಇತಿಹಾಸ ರಚನೆಯಲ್ಲಿ ಆಕಾರಗಳಾಗಿ ಪರಿಶೀಲಿಸುವ ಮರು ಚಿಂತನೆ ನಡೆಯಬೇಕು. ವಿಜಯನಗರದ ಇತಿಹಾಸದ ಕುರಿತು ಸಂಸ್ಕೃತ, ಕನ್ನಡ, ತೆಲುಗು ಭಾಷೆಯಲ್ಲಿ ರಚನೆಯಾದ ಸಾಹಿತ್ಯ ಕೃತಿಗಳನ್ನು ದೇಶದ ವಿವಿಧ ಭಾಷೆಗಳಿಗೆ ಅನುವಾದಗೊಳ್ಳಬೇಕು. ವಿಜಯನಗರವನ್ನು ಆಳಿದ ನಾಲ್ಕು ವಂಶಗಳಲ್ಲಿ ಸಂಗಮ ಮತ್ತು ತುಳು ವಂಶ ಬಿಟ್ಟರೆ ಉಳಿದ ಎರಡು ವಂಶಗಳಾದ ಸಾಳುವ ಮತ್ತು ಅರವೀಡು ಮನೆತನಗಳ ಕುರಿತು ಸಮಗ್ರ ಅಧ್ಯಯನ ನಡೆಸುವ ಯೋಜನೆ ರೂಪಿಸಬೇಕು. ಇನ್ನು ವಾಣಿಜ್ಯದ ನೆಲೆಯಲ್ಲಿ ದೇಶಿ ವ್ಯಾಪಾರ, ವಿದೇಶಿ ವ್ಯಾಪಾರದ ಪುನರ್ ಮೌಲ್ಯೀಕರಣ, ಪುನರ್ ಚಿಂತನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಉಪವಿಭಾಗಾಧಿಕಾರಿ ವಿವೇಕ್, ಹೊಸಪೇಟೆಯ ತಹಸಿಲ್ದಾರ್ ಶೃತಿ ಮತ್ತು ಪ್ರಬಂಧ ಮಂಡಿಸುವ ಇತಿಹಾಸಕಾರರು, ಪ್ರಾಧ್ಯಪಕರು, ಸಂಶೋಧಕರು, ಮುಂತಾದವರು ಉಪಸ್ಥಿತರಿದ್ದರು.