ಮುಂಡರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ಪ್ರಾಮಾಣಿಕವಾಗಿ ತಲುಪಿಸುತ್ತಾ ಬಂದಿದ್ದು, ಫೆ. 18ರಂದು ಗದುಗಿನಲ್ಲಿ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಸಮಾವೇಶ ಜರುಗಲಿದೆ ಎಂದು ಜಿಲ್ಲಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.
ಪ್ರತಿವರ್ಷ ₹58 ಸಾವಿರ ಕೋಟಿ ಹಣ ಮೀಸಲಿಟ್ಟಿರುವ ಈ ಪಂಚ ಗ್ಯಾರಂಟಿ ಯೋಜನೆಗಳು ಜನತೆಗೆ ವೇಳೆಗೆ ಸರಿಯಾಗಿ ತಲುಪುತ್ತಿದ್ದು, ಜಿಲ್ಲಾ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಸೇರುವ ಮೂಲಕ ಮಾದರಿ ಸಮಾವೇಶವನ್ನಾಗಿ ಮಾಡೋಣ. ಇದಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದರು.
ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಗ್ಯಾರಂಟಿ ಅನುಷ್ಠಾನ ಸಮೀತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ, ಡಿ.ಆರ್. ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ. ಫೆ. 17ರಂದು ಜಿಲ್ಲಾದ್ಯಂತ ಎಲ್ಲ ಗ್ರಾಮ ಹಾಗೂ ಪಟ್ಟಣಗಳ ಮನೆಯ ಮುಂದೆ ಪಂಚ ಗ್ಯಾರಂಟಿ ಯೋಜನೆಗಳ ಕುರಿತಾದ ರಂಗೋಲಿ ಬಿಡಿಸುವ ವ್ಯವಸ್ಥೆಯನ್ನು ಆಯಾ ತಾಲೂಕಿನ ಪಂಚ ಗ್ಯಾರಂಟಿ ಸದಸ್ಯರು ನೋಡಿಕೊಳ್ಳಬೇಕು ಎಂದರು.ತಾಲೂಕಾ ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಎಲ್ಲ 5 ಗ್ಯಾರಂಟಿ ಯೋಜನೆಗಳು ಜನತೆಗೆ ಸರಿಯಾಗಿ ತಲುಪಿಸುತ್ತಿದ್ದು, ಯಾವುದೇ ತೊಂದರೆ ಇಲ್ಲದೇ ಫಲಾನುಭವಿಗಳು ಈ ಗ್ಯಾರಂಟಿಗಳನ್ನು ಪಡೆದುಕೊಂಡು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ಹಣಕಾಸಿನ ಮಟ್ಟವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಫೆ. 18ರಂದು ಜರುಗುವ ಜಿಲ್ಲಾ ಸಮಾವೇಶಕ್ಕೆ ಮುಂಡರಗಿ ತಾಲೂಕಿನಿಂದ 5 ಸಾವಿರಕ್ಕೂ ಹೆಚ್ಚು ಜನ ತೆರಳಲಿದ್ದಾರೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಹಾದೇವ ಇಸರನಾಳ ಮಾತನಾಡಿ, 2025ರ ಸೆಪ್ಟಂಬರ್ ವರೆಗೆ 35858 ಮನೆ ಯಜಮಾನಿ ಹೆಸರಿನ ಪಡಿತರ ಚೀಟಿ ಹೊಂದಿದ್ದು, ಅದರಲ್ಲಿ 35680 ಅರ್ಜಿಗಳು ನೋಂದಣಿಯಾಗಿ ಸ್ವೀಕೃತಗೊಂಡಿವೆ. ಅದರಲ್ಲಿ 34399 ಫಲಾನುಭವಿಗಳು ಗೃಹಲಕ್ಷ್ಮಿ ಹಣವನ್ನು ಪಡೆಯುತ್ತಿದ್ದಾರೆ. 1281 ಅರ್ಜಿಗಳು ವಿವಿಧ ಕಾರಣಗಳಿಂದಾಗಿ ಬಾಕಿ ಉಳಿದಿವೆ. ತಾಲೂಕಿನಾದ್ಯಂತ ಶೇ. 96.41ರಷ್ಟು ಪ್ರಗತಿಯಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಹೇಮಂತಗೌಡ ಪಾಟೀಲ, ಸದಸ್ಯ ಪುಲಕೇಶಗೌಡ ಪಾಟೀಲ, ತಾಲೂಕು ಸದಸ್ಯರಾದ ರಾಮಣ್ಣ ಮೇಗಳಮನಿ, ವಿಶ್ವನಾಥ ಪಾಟೀಲ, ಮಹೇಶ ದ್ರಾಕ್ಷಿ, ನಾಗರಾಜ ಸಜ್ಜನರ, ಭುವನೇಶ್ವರಿ ಕಲ್ಲಕುಟಗರ್, ಉಮೇಶ ಕಲಾಲ್, ಜೈಲಾನಸಾಬ್ ವಡ್ಡಟ್ಟಿ, ನಿಂಗಪ್ಪ ಮಜ್ಜಗಿ, ಶರಣಪ್ಪ ಮಲ್ಲಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಂತರ ಬಸ್ ನಿಲ್ದಾಣಕ್ಕೆ ತೆರಳಿ ಶೌಚಾಲಯ, ಸ್ವಚ್ಛತೆಯ ಕುರಿತು ಪರಿಶೀಲಿಸಿದರು.