ಕೃಷ್ಣ ಲಮಾಣಿ
ಹೊಸಪೇಟೆ : ಕನ್ನಡದ ದೇಸಿ ಜ್ಞಾನ ವಿಸ್ತಾರಕ್ಕಾಗಿಯೇ ಜನ್ಮ ತಳೆದಿರುವ ಕನ್ನಡ ವಿಶ್ವವಿದ್ಯಾಲಯ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ವಿಶ್ವವಿದ್ಯಾನಿಲಯ ಸಂಶೋಧನಾ ಕಾರ್ಯ ಕೈಗೊಳ್ಳುತ್ತಿದೆ. ಜತೆಗೆ ಪ್ರಸಾರಾಂಗದಿಂದ 1,650 ಪುಸ್ತಕಗಳನ್ನು ಹೊರತರಲಾಗಿದೆ.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗಾಗಿ 1991-92ನೇ ಸಾಲಿನಲ್ಲಿ ಆರಂಭವಾದ ಈ ವಿವಿಯ ಮೊದಲ ಕುಲಪತಿ ಡಾ। ಚಂದ್ರಶೇಖರ ಕಂಬಾರ ಅವರ ಕಾಲಕ್ಕೆ ಸರ್ಕಾರ 73 ಬೋಧಕ ಹುದ್ದೆಗಳ ಮಂಜೂರಾತಿ ನೀಡಿತ್ತು. ಈಗ ವಿವಿಯಲ್ಲಿ 38 ಹುದ್ದೆಗಳು ಭರ್ತಿ ಇದ್ದು, 35 ಹುದ್ದೆಗಳು ಖಾಲಿ ಇವೆ. ಇನ್ನು ಬೋಧಕೇತರ 234 ಹುದ್ದೆಗಳ ಪೈಕಿ 140 ಹುದ್ದೆಗಳು ಭರ್ತಿ ಇದ್ದು, 94 ಹುದ್ದೆಗಳು ಖಾಲಿ ಉಳಿದಿವೆ.
ಕನ್ನಡ ವಿವಿಯಲ್ಲಿ ಬೋಧಕ ಹಾಗೂ ಬೋಧಕೇತರ, ಭದ್ರತೆ, ಸ್ವಚ್ಛತೆಗಾಗಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ 100ಕ್ಕೂ ಅಧಿಕ ಸಿಬ್ಬಂದಿ ನೇಮಿಸಿಕೊಳ್ಳಲಾಗಿದೆ. ಇವರಿಗೆ ವೇತನ ಪಾವತಿಗೂ ವಿವಿ ಪರದಾಡುವಂತಾಗಿದೆ. ಇವರಿಗೆ 10 ತಿಂಗಳ ವೇತನ ಪಾವತಿ ಇನ್ನೂ ಬಾಕಿ ಉಳಿದಿದೆ. ವಿವಿ ಬಳಿ ಹಣ ಇಲ್ಲದ ಕಾರಣ ಕಳೆದ ವರ್ಷ ₹1 ಕೋಟಿ ಕರೆಂಟ್ ಬಿಲ್ ಬಾಕಿಯಾಗಿತ್ತು. ಕಮಲಾಪುರ ಪುರಸಭೆಗೆ ತೆರಿಗೆ ಪಾವತಿಗೂ ಪರದಾಡುವ ಸ್ಥಿತಿ ವಿವಿಗಿದೆ. ಕನ್ನಡ ವಿವಿ ಸಂಶೋಧನಾ ವಿವಿ ಆಗಿರುವ ಹಿನ್ನೆಲೆಯಲ್ಲಿ ಆಂತರಿಕ ಸಂಪನ್ಮೂಲ ಕ್ರೋಡೀಕರಣ ವಿವಿಗೆ ತೊಡಕಾಗಿ ಪರಿಣಮಿಸಿದೆ.
ಭಾಷೆಗಾಗಿ ಇರುವ ಏಕೈಕ ವಿವಿ:
ವಿಶ್ವದಲ್ಲೇ ಭಾಷೆಗಾಗಿ ಇರುವ ಏಕೈಕ ವಿವಿ ಎನ್ನುವ ಹೆಗ್ಗಳಿಕೆ ಕನ್ನಡ ವಿಶ್ವವಿದ್ಯಾಲಯಕ್ಕಿದೆ. ಸರ್ಕಾರ ನೀಡುವ ಅನುದಾನದಲ್ಲೇ ಈ ವಿವಿ ನಡೆಯುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಅನುದಾನ ₹1.91 ಕೋಟಿ ನೀಡಿದೆ. ಈ ಹಣದಲ್ಲೇ ವಿವಿ ತನ್ನ ಸಂಶೋಧನಾ ಕಾರ್ಯ ಹಾಗೂ ಇತರೆ ಖರ್ಚು ತೂಗಿಸಬೇಕಿದೆ. ಸರ್ಕಾರ ವಿಶೇಷ ಅನುದಾನ ನೀಡಿ ವಿವಿಯನ್ನು ಆರ್ಥಿಕ ಸಂಕಷ್ಟದಿಂದ ಶಾಶ್ವತವಾಗಿ ಪಾರು ಮಾಡಬೇಕೆಂಬುದು ಎಲ್ಲರ ಅಭಿಲಾಷೆ.
₹3.73 ಕೋಟಿ ಬಾಕಿ:
ಕನ್ನಡ ವಿವಿ ಅತಿಥಿ ಉಪನ್ಯಾಸಕರಿಗೆ ₹61 ಲಕ್ಷ, ತಾತ್ಕಾಲಿಕ ಸಿಬ್ಬಂದಿಗೆ ₹1.31 ಕೋಟಿ ಮತ್ತು ಭದ್ರತೆ ಹಾಗೂ ಸ್ವಚ್ಛತಾ ಸಿಬ್ಬಂದಿಗೆ ₹1.81 ಕೋಟಿ ಪಾವತಿಸಬೇಕಿದೆ. ಈ ಹಣ ಸರ್ಕಾರದಿಂದ ಮಂಜೂರು ಆಗಬೇಕಿದೆ.
₹22.69 ಕೋಟಿ ನಿರೀಕ್ಷೆ:
ಈ ಬಾರಿಯ ಬಜೆಟ್‌ನಲ್ಲಿ ಸಂಶೋಧನೆ, ಗ್ರಂಥಾಲಯ, ಶೈಕ್ಷಣಿಕ, ಪ್ರಸಾರಾಂಗ ಚಟುವಟಿಕೆ, ಆಡಳಿತಾತ್ಮಕ ಯೋಜನೆಗಳು, ತಾತ್ಕಾಲಿಕ ಸಿಬ್ಬಂದಿ ವೇತನ ಸೇರಿ ಕನ್ನಡ ವಿವಿ ₹22.69 ಕೋಟಿ ಅನುದಾನ ಸಿಗುವ ನಿರೀಕ್ಷೆ ಹೊಂದಲಾಗಿತ್ತು. ಈ ಕುರಿತು ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ವಿವಿಗೆ ಈ ಬಜೆಟ್‌ನಲ್ಲಿ ಅಭಿವೃದ್ಧಿ ಅನುದಾನ ದೊರೆತಿರುವುದು ₹1.91 ಕೋಟಿ ಮಾತ್ರ. ಹಾಗಾಗಿ ವಿವಿಯಲ್ಲಿ ಶೈಕ್ಷಣಿಕ ಚಟುವಟಿಕೆ ಕೈಗೊಳ್ಳಲು ಈಗ ಹಿಂದೆ ಮುಂದೆ ನೋಡುವಂತಾಗಿದೆ.
ಕನ್ನಡ ಜ್ಞಾನ ಸೃಷ್ಟಿ: ಈ ವಿವಿಗೀಗ 33ರ ಹರೆಯ. ವಿವಿಯು 700 ಎಕರೆ ವಿಶಾಲ ಪ್ರದೇಶ ಹೊಂದಿದ್ದು, ಹಸಿರಿನಿಂದ ಕೂಡಿದ ಸುಂದರ ಪರಿಸರದಲ್ಲಿದೆ. ಕ್ರಿಯಾಶಕ್ತಿ, ಅಕ್ಷರ, ಭುವನ ವಿಜಯ, ತ್ರಿಪದಿ, ಕೂಡಲಸಂಗಮ, ತುಂಗಭದ್ರಾ, ದೇಸಿ, ಘಟಿಕಾಲಯ, ಶ್ರೀಶೈಲ ಸೇರಿ ಇತರ ಕಟ್ಟಡಗಳನ್ನು ಹೊಂದಿದೆ.
ಕನ್ನಡ ವಿವಿ ವಿದ್ಯೆಯನ್ನು ಸೃಷ್ಟಿಸುವ, ದೇಸಿ ಜ್ಞಾನ ಶೋಧಿಸುವ, ಕನ್ನಡದ ಬಹುತ್ವದ ನೆಲೆ ಹುಡುಕುವ ಕಾರ್ಯ ಮಾಡುತ್ತಿದೆ. ಕನ್ನಡ ವಿವಿ ಸಂಶೋಧನೆಗೆ ಮಹತ್ವ ನೀಡುತ್ತಿದೆ. ಕನ್ನಡದ ಜ್ಞಾನವನ್ನು ವಿಶ್ವಪ್ರಜ್ಞೆಯಾಗಿಸುವ ಕಾರ್ಯದಲ್ಲಿ ನಿರತವಾಗಿದೆ.
4 ನಿಕಾಯ, 21 ವಿಭಾಗ:
ಕನ್ನಡ ವಿಶ್ವವಿದ್ಯಾಲಯ 4 ನಿಕಾಯಗಳು ಮತ್ತು 21 ವಿಭಾಗಗಳನ್ನು ಹೊಂದಿದೆ. ಜತೆಗೆ 6 ವಿಸ್ತರಣಾ ಕೇಂದ್ರಗಳು, 26 ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳು, 13 ಅಧ್ಯಯನ ಪೀಠಗಳನ್ನು ವಿವಿ ಹೊಂದಿವೆ.
ವಿವಿಯ ಮೊದಲ ಕುಲಪತಿ ಡಾ। ಚಂದ್ರಶೇಖರ ಕಂಬಾರ, ‘ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಸುವ ವಿಶ್ವವಿದ್ಯಾಲಯವಲ್ಲ, ವಿದ್ಯೆಯನ್ನು ಸೃಷ್ಟಿಸುವ ವಿಶ್ವವಿದ್ಯಾಲಯ. ವಿದ್ಯೆಯನ್ನು ಕಲಿಸುವ ಬದಲು, ವಿದ್ಯೆಯನ್ನು ಸೃಷ್ಟಿಸುವ ವಿಭಿನ್ನ ನೆಲೆಯ ಬೋಧನೆ, ಶೋಧನೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ತೊಡಗಿಸಿಕೊಂಡಿದೆ’ ಎಂದು ಕಂಬಾರರು ಹೇಳಿದ್ದಾರೆ.
ನಾಡೋಜ ಡಾ। ಚಂದ್ರಶೇಖರ ಕಂಬಾರ, ಸಂಶೋಧಕ ಡಾ। ಎಂ.ಎಂ.ಕಲಬುರ್ಗಿ, ಡಾ। ಎಚ್.ಜೆ.ಲಕ್ಕಪ್ಪಗೌಡ, ಡಾ। ಬಿ.ಎ.ವಿವೇಕ್ ರೈ, ಡಾ। ಎ.ಮುರಿಗೆಪ್ಪ, ಡಾ। ಹಿ.ಚಿ.ಬೋರಲಿಂಗಯ್ಯ, ಡಾ। ಮಲ್ಲಿಕಾ ಘಂಟಿ ಮತ್ತು ಡಾ। ಸ.ಚಿ.ರಮೇಶ ಅವರು ಕುಲಪತಿಗಳಾಗಿ ಕನ್ನಡ ವಿವಿ ಬೆಳವಣಿಗೆಗೆ ಶ್ರಮಿಸಿದ್ದಾರೆ. ಈಗ ಡಾ। ಡಿ.ವಿ.ಪರಮಶಿವಮೂರ್ತಿ ಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಿನ ಡಿಜಿಟಲ್ ಯುಗದಲ್ಲೂ ಕನ್ನಡ ವಿವಿ ದೇಸಿತನವನ್ನು ಕಾಪಾಡಿಕೊಂಡು ಸಾಗುತ್ತಿರುವುದು ವಿಶೇಷ.
ಕನ್ನಡ ವಿವಿ ಆರ್ಥಿಕ ಸಂಕಷ್ಟದಲ್ಲಿದೆ. ಆದರೂ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆ ಹಾಗೂ ಸಂಶೋಧನಾ ಕಾರ್ಯ ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಅನುದಾನ ನೀಡಿ ವಿವಿಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲಿದ್ದಾರೆ ಎಂಬ ಆಶಯ ಹೊಂದಲಾಗಿದೆ.
ಡಾ। ಡಿ.ವಿ. ಪರಮಶಿವಮೂರ್ತಿ ಕುಲಪತಿ, ಕನ್ನಡ ವಿಶ್ವವಿದ್ಯಾಲಯ ಹಂಪಿ.
ಕನ್ನಡ ವಿಶ್ವವಿದ್ಯಾಲಯ ವರ್ಷದಲ್ಲಿ 300 ಕಾರ್ಯಕ್ರಮಗಳನ್ನು ಹಾಕಿಕೊಂಡು ಕೆಲಸ ಮಾಡಿದೆ. ಎಲ್ಲ ನಿಕಾಯಗಳು, ವಿಭಾಗಗಳು, ವಿಸ್ತರಣಾ ಕೇಂದ್ರಗಳು ಕ್ರಿಯಾಶೀಲವಾಗಿವೆ. ಕನ್ನಡದ ಕಾರ್ಯಕ್ಕೆ ಅನುದಾನ ಲಭಿಸಲಿದರೆ, ಇನ್ನಷ್ಟು ಅನುಕೂಲವಾಗಲಿದೆ.
- ಡಾ। ವಿಜಯ ಪೂಣಚ್ಚ ತಂಬಂಡ, ಕುಲಸಚಿವ, ಕನ್ನಡ ವಿಶ್ವವಿದ್ಯಾಲಯ, ಹಂಪಿ.