ಹಂಪಿ ಉತ್ಸವ, ಇಂದು ವೇದಿಕೆ ನಿರ್ಮಾಣಕ್ಕೆ ಚಾಲನೆ

KannadaprabhaNewsNetwork | Published : Feb 12, 2025 12:30 AM

ಸಾರಾಂಶ

ಹಂಪಿ ಉತ್ಸವಕ್ಕೆ ವಿಜಯನಗರ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದೆ. ಉತ್ಸವಕ್ಕಾಗಿ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ವೇದಿಕೆ ನಿರ್ಮಾಣದ ಪೂಜಾ ಕಾರ್ಯಕ್ರಮ ಫೆ. 12ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಿ ವ್ಯವಸ್ಥೆ ಮಾಡಲಾಗಿದೆ.

ಹೊಸಪೇಟೆ: ಹಂಪಿ ಉತ್ಸವಕ್ಕೆ ವಿಜಯನಗರ ಜಿಲ್ಲಾಡಳಿತ ಭರದ ಸಿದ್ಧತೆ ಕೈಗೊಂಡಿದೆ. ಉತ್ಸವಕ್ಕಾಗಿ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ವೇದಿಕೆ ನಿರ್ಮಾಣದ ಪೂಜಾ ಕಾರ್ಯಕ್ರಮ ಫೆ. 12ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಿ ವ್ಯವಸ್ಥೆ ಮಾಡಲಾಗಿದೆ.

ಫೆ. 28 ಮತ್ತು ಮಾರ್ಚ್‌ 1 ಮತ್ತು 2ರಂದು ಮೂರು ದಿನಗಳ ವರೆಗೆ ನಡೆಯಲಿರುವ ಹಂಪಿ ಉತ್ಸವಕ್ಕೆ ಬೆಂಗಳೂರಿನ ಉಡುಪಾಸ್‌ ಎಂಟರ್‌ಪ್ರೈಸಸ್‌ ಸಂಸ್ಥೆ ವೇದಿಕೆ ನಿರ್ಮಾಣದ ಹೊಣೆ ವಹಿಸಿಕೊಂಡಿದೆ. ಗಾಯತ್ರಿಪೀಠದ ಬಯಲು ಜಾಗದಲ್ಲಿ ಪ್ರಮುಖ ವೇದಿಕೆ ನಿರ್ಮಾಣ ಮಾಡಲಾಗುತ್ತದೆ. ಹಂಪಿಯ ಎದುರು ಬಸವಣ್ಣ ಮಂಟಪ, ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಆವರಣ, ಸಾಸಿವೆಕಾಳು ಗಣಪತಿ ಮಂಟಪದ ಬಳಿ ವೇದಿಕೆಗಳ ನಿರ್ಮಾಣ ಕಾರ್ಯ ನಡೆಯಲಿದೆ. ಇನ್ನೂ ಗಜ ಶಾಲೆ ಬಳಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ 12 ಕಿರು ವೇದಿಕೆಗಳ ನಿರ್ಮಾಣ ಕಾರ್ಯ ನಡೆಯಲಿದೆ.

250 ಕಾರ್ಮಿಕರಿಂದ ಸ್ವಚ್ಛತೆಗೆ ಪ್ಲಾನ್‌: ಹಂಪಿಯಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ 250 ಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಮಂಗಳವಾರ ನಗರಸಭೆಯ 84 ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಇನ್ನೂ ಕೇಂದ್ರ ಪುರಾತತ್ವ ಇಲಾಖೆಗಳ ಕಾರ್ಮಿಕರು ಕೂಡ ಹಂಪಿಯಲ್ಲಿ ಸ್ವಚ್ಛತೆ ಕೈಗೊಂಡಿದ್ದಾರೆ. ಕಮಲಾಪುರ ಪುರಸಭೆ ಪೌರ ಕಾರ್ಮಿಕರು ಕೂಡ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಕೈಗೊಂಡ ಸ್ವಚ್ಛತೆ ಮಾದರಿಯಲ್ಲೇ ಹಂಪಿ ಉತ್ಸವಕ್ಕಾಗಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ನೀಡಿದ ಸೂಚನೆ ಮೇರೆಗೆ ಜಿಲ್ಲಾ ನಗರ ಯೋಜನಾಧಿಕಾರಿ ಮನೋಹರ್‌ ಅವರು 250 ಪೌರ ಕಾರ್ಮಿಕರನ್ನು ನಿಯೋಜನೆ ಮಾಡಲು ಯೋಜನೆ ರೂಪಿಸಿದ್ದಾರೆ. ಇನ್ನೂ ಅಗತ್ಯ ಬಿದ್ದರೆ ಇನ್ನೂ 100 ಕಾರ್ಮಿಕರನ್ನು ನಿಯೋಜಿಸಲು ಕೂಡ ಅವರು ಸನ್ನದ್ಧರಾಗಿದ್ದಾರೆ.

ವಿದ್ಯುತ್‌ ತಂತಿ, ಕಂಬಗಳ ಬದಲಿಸುವ ಕಾರ್ಯ ಕೂಡ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹಾಗೂ ಶಾಸಕ ಎಚ್.ಆರ್‌. ಗವಿಯಪ್ಪನವರು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕೂಡ ನಡೆಸಿದ್ದಾರೆ. ಇನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಕೂಡ ಭಾಗಿಯಾಗಿದ್ದರು.

ಏತನ್ಮಧ್ಯೆ, ಜಿಲ್ಲಾಧಿಕಾರಿ ಅವರು ಕೂಡ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಕಮಲಾಪುರ ಸ್ಥಳೀಯ ಸಂಸ್ಥೆ, ಹಂಪಿ, ಕಡ್ಡಿರಾಂಪುರ, ಮಲಪನಗುಡಿ ಗ್ರಾಪಂಗಳ ಸದಸ್ಯರ ಸಭೆ ನಡೆಸಿದ್ದಾರೆ. ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಸೇರಿ ಈ ಉತ್ಸವವನ್ನು ಜನೋತ್ಸವವನ್ನಾಗಿಸಲು ಈಗಾಗಲೇ ಪಣ ತೊಟ್ಟಿದ್ದಾರೆ.

ಸ್ವಚ್ಛತೆಗೆ ಯೋಜನೆ: ಹಂಪಿ ಉತ್ಸವದಲ್ಲಿ ಸ್ವಚ್ಛತೆಗೆ 250ರಿಂದ 300 ಪೌರ ಕಾರ್ಮಿಕರನ್ನು ಬಳಕೆ ಮಾಡಲು ಪ್ಲಾನ್‌ ರೂಪಿಸಲಾಗಿದೆ. ಈಗಾಗಲೇ 84 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಸೂಚಿಸಿದ್ದಾರೆ. ಅವರ ನಿರ್ದೇಶನದ ಮೇರೆಗೆ ಹಂಪಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ನಗರ ಯೋಜನಾ ನಿರ್ದೇಶಕ ಮನೋಹರ್‌ ಹೇಳಿದರು.

ಪೌರ ಕಾರ್ಮಿಕರಿಗೆ ವಿವಿಐಪಿ ಪಾಸ್‌: ಕಳೆದ ಹಂಪಿ ಉತ್ಸವದಲ್ಲಿ ಹಂಪಿಯಲ್ಲಿ ಸ್ವಚ್ಛತೆ ಕೈಗೊಂಡ ಪೌರ ಕಾರ್ಮಿಕರಿಗೆ ವಿವಿಐಪಿ ಪಾಸ್‌ಗಳನ್ನು ನೀಡಿ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌ ಮೆಚ್ಚುಗೆ ಗಳಿಸಿದ್ದರು. ಈ ಬಾರಿಯೂ ಪೌರ ಕಾರ್ಮಿಕರಿಗೆ ವಿವಿಐಪಿ ಪಾಸ್‌ ನೀಡುವ ಆಲೋಚನೆ ಹೊಂದಿದ್ದಾರೆ.

Share this article