ಹಾನಗಲ್ಲ-ಹಾವೇರಿ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆ: ಕಳಪೆಯಾಗದಿರಲಿ

KannadaprabhaNewsNetwork |  
Published : Apr 20, 2026, 02:30 AM IST
ಹಾನಗಲ್ಲ ಹಾವೇರಿ ರಸ್ತೆ ದುರಸ್ಥಿ ಕಾಮಗಾರಿ ಆರಂಭವಾಗಿರುವುದು. | Kannada Prabha

ಸಾರಾಂಶ

ಹಾನಗಲ್ಲ-ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ಕಡೆಗಳಲ್ಲಿ ದುರಸ್ತಿಗಾಗಿ ಅಗೆದ ರಸ್ತೆ ಭಾಗಗಳು ಹಾಗೂ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಸಾರ್ವಜನಿಕರ ಪ್ರತಿಭಟನೆ, ಅಧಿಕಾರಿಗಳ ಮೇಲೆ ಒತ್ತಡ, ಜಿಪಂ ತಾಪಂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚೆಯ ಬಳಿಕ ದುರಸ್ತಿ ಕಾಮಗಾರಿ ಆರಂಭವಾಗಿದೆ.

ಹಾನಗಲ್ಲ: ಹಾನಗಲ್ಲ-ಹಾವೇರಿ ರಾಜ್ಯ ಹೆದ್ದಾರಿಯಲ್ಲಿ ನೂರಾರು ಕಡೆಗಳಲ್ಲಿ ದುರಸ್ತಿಗಾಗಿ ಅಗೆದ ರಸ್ತೆ ಭಾಗಗಳು ಹಾಗೂ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಸಾರ್ವಜನಿಕರ ಪ್ರತಿಭಟನೆ, ಅಧಿಕಾರಿಗಳ ಮೇಲೆ ಒತ್ತಡ, ಜಿಪಂ ತಾಪಂ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಚರ್ಚೆಯ ಬಳಿಕ ದುರಸ್ತಿ ಕಾಮಗಾರಿ ಆರಂಭವಾಗಿದೆ.ಹಾನಗಲ್ಲ ಹಾವೇರಿ ರಾಜ್ಯ ರಸ್ತೆಯಲ್ಲಿ ವಿವಿಧ ವಾಹನಗಳಲ್ಲಿ ಓಡಾಡುವವರು ಮೈಯಲ್ಲ ಕಣ್ಣಾಗಿ ಸಂಚರಿಸುವಂತಾಗಿತ್ತು. ರಸ್ತೆಯಲ್ಲಿ ಬಿದ್ದ ತಗ್ಗುಗಳು, ಇದರೊಂದಿಗೆ ರಸ್ತೆ ತಗ್ಗುಗಳನ್ನು ಮುಚ್ಚುವುದಕ್ಕಾಗಿಯೇ ಅಗೆದ ಡಾಂಬರ್ ಭಾಗಗಳು ವಾಹನ ಸಂಚಾರಕ್ಕೆ ಭಾರೀ ಅಡಚಣೆ ಮಾಡಿದ್ದವು. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಅಪಘಾತಗಳೂ ನಡೆದಿದ್ದವು. ಹಾನಗಲ್ಲ ತಾಲೂಕಿನ ಅತೀ ಹೆಚ್ಚು ಕಬ್ಬು ಹಾಗೂ ಇತರ ತಾಲೂಕುಗಳ ಕಬ್ಬನ್ನು ಸಾಗಿಸಲು ಬಹಳಷ್ಟು ಅಡಚಣೆ ಆಗಿತ್ತು. ರಸ್ತೆ ಸುರಕ್ಷಿತ ಎನಿಸಿರಲಿಲ್ಲ. ತಗ್ಗುಗಳನ್ನು ತಪ್ಪಿಸಲು ಹೋಗಿ ಹಲವು ಬಾರಿ ಕಬ್ಬಿನ ಟ್ರ್ಯಾಕ್ಟರ್ ಹಾಗೂ ಇತರ ವಾಹನ ಚಾಲಕರ ನಡುವೆ ಘರ್ಷಣೆಗಳೂ ಆಗಿದ್ದವು. ಇದೆಲ್ಲ ೪ ತಿಂಗಳಿನಿಂದ ನಡೆದಿತ್ತು. ಈಗ ದುರಸ್ತಿ ಕಾಮಗಾರಿ ಆರಂಭವಾಗಿದೆ. ಆದರೆ ಅದು ಕಳಪೆ ಇಲ್ಲದಂತೆ. ಮತ್ತೆ ಅದೇ ಜಾಗೆಯಲ್ಲಿ ತಗ್ಗು ಬೀಳದಂತೆ ಕಾಮಗಾರಿ ಆಗಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಇನ್ನೇನು ಮಳೆಗಾಲ ಆರಂಭವಾಗುವ ಸೂಚನೆ ಇದ್ದು ಅತೀ ಕಡಿಮೆ ಅವಧಿಯಲ್ಲಿ ಬೇಗ ಕಾಮಗಾರಿ ಮುಗಿಯಬೇಕು ಎಂಬ ಒತ್ತಾಸೆ ಇದೆ. ಇದು ಹಾವೇರಿಯಿಂದ ಹಾನಗಲ್ಲ, ಮುಂಡಗೋಡ, ಶಿರಸಿ, ಶಿವಮೊಗ್ಗಗಳಿಗೆ ಅತ್ಯಂತ ಸಮೀಪದ ರಸ್ತೆಯೂ ಆಗಿದ್ದು ವಾಹನಗಳ ಓಡಾಡ ಅತಿ ಹೆಚ್ಚು ಇದೆ.ಆದರೆ ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಿಂದ ಶಿರಸಿವರೆಗೆ ನೆನೆಗುದಿಗೆ ಬಿದ್ದ ರಸ್ತೆ ಕಾಮಗಾರಿಗೆ ಮಾತ್ರ ಇನ್ನೂ ವೇಗದ ಚಾಲನೆ ಸಿಕ್ಕಿಲ್ಲ. ಈ ರಸ್ತೆಯಲ್ಲಿ ವಾಹನ ಓಡಾಟ ದುಸ್ತರವಾಗಿದೆ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲಿ ರಾಡಿ, ವಾಹನ ಚಲಿಸಲಾಗದಂತಹ ಗುಂಡಿಗಳಿಂದ ವಾಹನ ಚಾಲಕರು ಶಾಪ ಹಾಕುತ್ತ ಚಾಲನೆ ಮಾಡುವ ಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳು ಶೀಘ್ರ ಕಾಮಗಾರಿಗೆ ವೇಗದ ಚಾಲೆನ ನಿಡುವ ಭರವಸೆ ನೀಡಿದ್ದರೂ ಕೂಡ ಅದು ಸಾಧ್ಯವಾಗಿಲ್ಲ. ಪ್ರಯೋಣಿಕರ ಗೋಳು ಮಾತ್ರ ತಪ್ಪಿಲ್ಲ.ಈ ಕುರಿತು ಪ್ರತಿಕ್ರಿಯೇ ನೀಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ ಶಿಡ್ಲಾಪೂರ, ಹಲವು ತಿಂಗಳ ಹಿಂದೆಯೇ ಅಲ್ಲಲ್ಲಿ ನೂರಾರು ಕಡೆ ರಸ್ತೆಯನ್ನು ಕೆದರಿ ಸಂಚಾರಕ್ಕೆ ಅಡ್ಡಿಯಾಗಿತ್ತು. ನಾವು ಅಧಿಕಾರಿಗಳಿಗೆ ಹಲವುಬಾರಿ ಮನವಿ ಸಲ್ಲಿಸಿ ಎಚ್ಚರಿಸಿದರೂ ಫಲ ನೀಡಿರಲಿಲ್ಲ. ಪ್ರತಿಭಟನೆ ಕೈಗೊಳ್ಳುವ ಸೂಚನೆ ನೀಡಿದಾಗ ಅಧಿಕಾರಿಗಳು ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ದುರಸ್ಥಿ ಕಾಮಗಾರಿ ಆರಂಭಿಸಿದ್ದಾರೆ. ಆದರೆ ಈ ದುರಸ್ತಿಯೂ ಕಳಪೆ ಆಗಬಾರದು. ಹಿಂದೆ ಇದೆ ರೀತಿ ಅಲ್ಲಲ್ಲಿ ಕೆಟ್ಟ ರಸ್ತೆಯನ್ನು ದುರಸ್ತಿ ಮಾಡಿದ್ದು ನಾಲ್ಕಾರು ದಿನಗಳಲ್ಲಿಯೇ ಕಿತ್ತು ಹೋಗಿತ್ತು. ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಕಾಮಗಾರಿ ಆಗಿ ಅದೇ ಹಾಳಾದ ರಸ್ತೆಯಲ್ಲಿಯೇ ವಾಹನಗಳು ಸಂಚರಿಸುವಂತಾಗಿತ್ತು. ಈಗ ಕಾಮಗಾರಿ ಕಳೆಪೆ ಆಗದಿರಲಿ. ಹಾಗೇನಾದರೂ ಆದಲ್ಲೆ ಅನಿವಾರ್ಯವಾಗಿ ನಾವು ಮತ್ತೆ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ‘ಶ್ರೀ ಶಾರದಾ ಆಸರೆ ಯೋಜನೆ’ ಆರಂಭ
ಮಾನವೀಯತೆ ಮೇಲೆ ಸಮಾಜ ನಿರ್ಮಾಣವಾಗಲಿ: ಕಿಮ್ಮನೆ