ಮಾರುತಿ ಶಿಡ್ಲಾಪೂರ
ಬಡ ಹಿಂದುಳಿದ ವರ್ಗಗಳ ಆಶಾಕಿರಣ, ಸಮಾಜ ಸೇವೆಯ ಕೈಂಕರ್ಯದೊಂದಿಗೆ ತಾಲೂಕಿನಲ್ಲಿ ಕಳೆದ ೩೨ ವರ್ಷಗಳಿಂದ ಲೋಯಲಾ ವಿಕಾಸ ಕೇಂದ್ರ ಶೈಕ್ಷಣಿಕ ಹಿತ, ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ಸೇವಾ ಕಾರ್ಯಗಳಿಗಾಗಿ ಒಂದು ಸುಸಜ್ಜಿತ ಕಾರ್ಯಾಲಯವನ್ನು ಮಾತ್ರ ಅಲ್ಲ, ಇಲ್ಲಿಯೇ ತರಬೇತಿ ಸಭಾಂಗಣಗಳು, ವಸತಿ ನಿಲಯವೂ ಇದ್ದು, ಆಟ ಪಾಠಗಳಿಂದ ಸಮಾಜಮುಖಿಯಾಗಿದೆ. ಹಳ್ಳಿಗಳಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಕಟ್ಟಿಕೊಂಡು ಈ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ, ಹಿಂದುಳಿದವರಿಗೆ ಆರ್ಥಿಕ ನೆರವು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಬದುಕಲು ಸಹಾಯ ಮಾಡುತ್ತಿದೆ. ತಾಲೂಕಿನ ಗೊಲ್ಲರ ಬಿಡಾರ, ದಶರಥಕೊಪ್ಪ, ಲಕ್ಷ್ಮೀಪುರ, ಹೀರೂರು ಸೇರಿದಂತೆ ಇಲ್ಲಿ ತೀರ ಬಡತನ ರೇಖೆಯಿಂದ ಹೊರಗಿರುವವರನ್ನೇ ಆಯ್ಕೆ ಮಾಡಿಕೊಂಡು ಅವರಿಗೆ ಸಹಾಯ ಸಲ್ಲಿಸುವ ಸಂಕಲ್ಪದಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನಲ್ಲಿ ನೂರಕ್ಕೂ ಅಧಿಕ ಮಹಿಳಾ ಸ್ವಸಹಾಯ ಸಂಘಗಳಿದ್ದು, ಸಾವಿರಾರು ಮಹಿಳೆಯರು ಈ ಮೂಲಕ ಸಬಲತೆಯ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆರ್ಥಿಕತೆಗಾಗಿ ಉಳಿತಾಯ ಮಾತ್ರವಲ್ಲ, ಹೈನುಗಾರಿಕೆಗಾಗಿ ಹಸು ಸಾಕುವುದು, ಟೈಲರಿಂಗ್, ಬಡವರಿಗೆ ಮನೆ ನಿರ್ಮಾಣಕ್ಕೆ ಧನ ಸಹಾಯ, ಪ್ರತಿಭಾನ್ವೇಷಣೆ, ಶಿಕ್ಷಣಕ್ಕಾಗಿ ಧನ ಸಹಾಯ ನೀಡುತ್ತ ಯಶಸ್ವಿ ಹೆಜ್ಜೆ ಹಾಕಿದೆ.ಸಂಸ್ಥೆಯ ಕಾರ್ಯಾಲಯದಲ್ಲಿಯೇ ಟೇಲರಿಂದ, ಆರಿ ಕಲೆ, ಬ್ಯೂಟಿಷಿಯನ್ ಸೇರಿದಂತೆ ಸ್ವ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ವಿವಿಧ ಜಾಗೃತಿ ತರಗತಿಗಳು, ಆರೊಗ್ಯ ಶಿಬಿರಗಳು, ಸ್ವಚ್ಛತಾ ಆಭಿಯಾನ, ನಮ್ಮ ನಡೆ ಸರ್ಕಾರಿ ಶಾಲೆಗಳ ಕಡೆ, ಬೇಸಿಗೆ ಶಿಬಿರಗಳು ವರ್ಷವಿಡೀ ನಡೆಯುತ್ತಿರುತ್ತವೆ. ಇದೇ ಸಂಸ್ಥೆಯಲ್ಲಿ ರೂಪಿಸಿದ ವಸತಿ ನಿಲಯದಲ್ಲಿ ಪ್ರತಿ ವರ್ಷ ೭೦ಕ್ಕೂ ಅಧಿಕ ಮಕ್ಕಳು ವಾಸವಿದ್ದು ವಿವಿಧ ಶಾಲೆ ಕಾಲೇಜುಗಳಿಗೆ ಹೋಗುತ್ತಾರೆ. ತಾಲೂಕಿನ ೨೨ ಶಾಲೆಗಳಿಗೆ ಮಂಗಳೂರಿನ ಸೆಂಟ್ ಅಲೋಶಿಯಸ್ ವಿಶ್ವವಿದ್ಯಾಲಯ, ಬೆಂಗಳೂರಿನ ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಆಗಮಿಸಿ ಶಾಲಾ ವಾತಾವರಣವನ್ನು ಶುಚಿ ಮಾಡಿ, ಮಕ್ಕಳಿಗೆ ಪಾಠ ಮಾಡಿ, ಆಟವಾಡಿಸಿದ್ದರಲ್ಲಿ ಈ ಸಂಸ್ಥೆ ಆರ್ಥಿಕ ಸಹಾಯವೂ ಅತ್ಯಂತ ಪ್ರಮುಖವಾಗಿದೆ. ಹಳ್ಳಿಗಳ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ೧೬ ಹಳ್ಳಿಗಳಲ್ಲಿ ಸಮುದಾಯ ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ.. ನೂರು ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ ಕಿಟ್ ನೀಡಿರುವುದು, ೫೦ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಧನ ಸಹಾಯ, ಆರ್ಥಿಕ ದುರ್ಬಲ ಅನಾರೋಗ್ಯಕ್ಕೊಳಗಾದವರಿಗೆ ಆರೋಗ್ಯ ನಿಧಿ, ೪೬ ವಿಶೇಷ ಚೇತನ ಮಕ್ಕಳಿಗೆ ಆರೋಗ್ಯ ಸಾಮಗ್ರಿ ಸೇವೆ, ಉದ್ಯೋಗಕ್ಕಾಗಿ ಬಡ್ಡಿ ರಹಿತ ಸಾಲ, ಇವೆಲ್ಲ ಇದೇ ವರ್ಷದಲ್ಲಿ ನೀಡಿದ ಲೋಯಲಾ ಸಂಸ್ಥೆಯ ಸೇವಾ ಪ್ರಕಲ್ಪಗಳಾಗಿವೆ. ಸಾವಯವ ಕೃಷಿ, ಹೈನುಗಾರಿಕೆ , ಕುರಿ ಸಾಕಾಣಿಕೆಗಳಿಗೂ ಸಹಾಯ ಧನ ನೀಡಿ ಪ್ರೋತ್ಸಾಹಿಸಿದ್ದಾರೆ.ಸಂಸ್ಥೆಯಿಂದಲೇ ಇಲ್ಲಿನ ಪ್ರಗತಿ ಮಹಿಳಾ ಆಹಾರ ಉತ್ಪಾದನಾ ಘಟಕದ ಸಹಕಾರದಲ್ಲಿ ಶುದ್ಧ ಮಸಾಲಾ ಘಟಕ ಆರಂಭಿಸಿದ್ದು ರಾಜ್ಯದ ವಿವಿಧೆಡೆ ಮಸಾಲಾ ಪೌಡರ್ ರವಾನಿಸುತ್ತಾರೆ. ಕಚೇರಿ ಕಾರ್ಯದಲ್ಲಿ ೧೪ ಸೇವಾ ಕಾರ್ಯಕರ್ತರು, ಸಂಸ್ಥೆಯ ನಿರ್ದೇಶಕ ಫಾ.ವಿನ್ಸಂಟ್ ಜೈಸನ್, ಸಹ ನಿರ್ದೇಶಕ ಜೈಸನ್ ಪಾಯ್ಸ ಇಡೀ ಸಂಸ್ಥೆಯ ಸಮಾಜಮುಖಿ ಸೇವೆಯ ಕೇಂದ್ರ ಬಿಂದುಗಳು. ೩೨ ವರ್ಷಗಳ ಹಿಂದೆ ಒಂದು ಸಣ್ಣ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಸಂಸ್ಥೆ ಈಗ ಸ್ವಂತ ಸುಸಜ್ಜಿತ ಕಟ್ಟಡವನ್ನು ಹೊಂದಿ ಸಮಾಜಮುಖಿಯಾಗಿದೆ. ಕಟ್ಟಡ ಕಾರ್ಮಿಕರ ಸಂಘ, ಯುವಕ ಸಂಘ, ಮಹಿಳಾ ಸಂಘ, ಮಕ್ಕಳ ಸಂಘಗಳೂ ಇಲ್ಲಿವೆ.ಹಾನಗಲ್ಲ ನಂತರ ಶೈಕ್ಷಣಿಗೆ ಅಗತ್ಯಕ್ಕೂ ನಮ್ಮ ಸಂಸ್ಥೆ ಸಹಾಯ ನೀಡುತ್ತದೆ. ಮಂಗಳೂರು, ಬೆಂಗಳೂರಿನಲ್ಲಿರುವ ನಮ್ಮದೇ ಸಂಸ್ಥೆಯಲ್ಲಿ ಶಿಕ್ಷಣಕ್ಕೆ, ವಸತಿಗೂ ಅವಕಾಶವಿದೆ. ಹಳ್ಳಿಗಳಲ್ಲಿ ಸೌಲಭ್ಯ ವಂಚಿತ ತಳ ಸಮುದಾಯದ ಹಿತಕ್ಕೆ ನಮ್ಮ ಆದ್ಯತೆ. ಈ ಕೆಲಸದಲ್ಲಿ ನನಗೂ, ನಮ್ಮ ಸಂಸ್ಥೆಗೂ ತೃಪ್ತಿ ಇದೆ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ಫಾ.ವಿನ್ಸಂಟ್ ಜೈಸನ್ ಹೇಳಿದರು.ಇದೊಂದು ಸಾಂತ್ವನ, ಕೌಟುಂಬಿಕ ಸೌಖ್ಯಕ್ಕೆ ಸಹಾಯ ಹಸ್ತ ನೀಡುವ ಸಂಸ್ಥೆ. ಆರ್ಥಿಕ ಉಳಿತಾಯವೂ ಸೇರಿ ಆರೋಗ್ಯ, ಸಾಮಾಜಿಕ ಸ್ವಾಸ್ಥ್ಯಕ್ಕೆ ನಾವು ಸೇವಕರು. ಇದು ಸಂತೃಪ್ತ ಸೇವಾ ಸಂಸ್ಥೆ ಎಂದು ಸಂಸ್ಥೆಯ ಹಿರಿಯ ಸಂಯೋಜಕಿ ಎಸ್.ಬಿ. ಜಯಮ್ಮ ಹೇಳಿದರು.