ಹಣಕೋಣ ಹತ್ಯೆ ಪ್ರಕರಣ: ಮೂವರು ಪೊಲೀಸ್ ಬಲೆಗೆ, ಸುಪಾರಿ ನೀಡಿದ ವ್ಯಕ್ತಿ ಆತ್ಮಹತ್ಯೆ

KannadaprabhaNewsNetwork |  
Published : Sep 26, 2024, 11:28 AM IST
ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ ಹಾಗೂ ಪೊಲೀಸ್ ಅಧಿಕಾರಿಗಳು  | Kannada Prabha

ಸಾರಾಂಶ

ಭಾನುವಾರ ಕಾರಿನಲ್ಲಿ ಬಂದ ಅಪರಿಚಿತರು ಹಣಕೋಣದ ವಿನಾಯಕ ನಾಯ್ಕ ಅವರ ಮನೆಗೆ ನುಗ್ಗಿ ತಲ್ವಾರ್, ಚಾಕು ಹಾಗೂ ರಾಡ್ ಬಳಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಕಾರವಾರ

ಹಣಕೋಣದಲ್ಲಿ ಉದ್ಯಮಿ ವಿನಾಯಕ ನಾಯ್ಕ ಅವರನ್ನು ಹತ್ಯೆ ಮಾಡಿದ ಮೂವರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದು, ಸುಪಾರಿ ನೀಡಿದ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಿಹಾರದ ಪೂರ್ನಿಯಾ ಜಿಲ್ಲೆಯ ಮೆಹಂದರಪೂರದ ಅಜ್ವಲ ಹಾಬೀರ(24), ಮತ್ತೊಬ್ಬ ಅದೇ ಜಿಲ್ಲೆಯ ಮಹೇಂದ್ರಪೂರ ಗ್ರಾಮದ ಮಾಸೂಮ್ ಮಂಜೂರ್(23) ಎಂಬ ಆರೋಪಿಗಳು ಹತ್ಯೆ ಮಾಡಿ ಪರಾರಿಯಾಗಿದ್ದರು. ಇವರಿಬ್ಬರನ್ನು ನವದೆಹಲಿಯಲ್ಲಿ ವಶಕ್ಕೆ ಪಡೆಯಲಾಗಿದೆ.

ಇನ್ನೊಬ್ಬ ಆರೋಪಿ ಆಸ್ಸಾಂನ ಸೊನೇಟಪುರ್ ಜಿಲ್ಲೆಯ ಲಕ್ಷ ಜ್ಯೋತಿನಾಥ ಕೀನಾರಾಮನಾಥ(31) ಎಂಬಾತನನ್ನು ಗೋವಾದ ಮಡಗಾಂವದಲ್ಲಿ ವಶಕ್ಕೆ ಪಡೆಯಲಾಗಿದೆ. ಸುಪಾರಿ ನೀಡಿದ ಮೂಲತಃ ಕಾರವಾರದ ಹಳಗಾ ನಿವಾಸಿ, ಗೋವಾದಲ್ಲಿ ಉದ್ಯಮಿಯಾಗಿರುವ ಗುರುಪ್ರಸಾದ ರಾಣೆ ಮೃತದೇಹ ಗೋವಾದ ಮಾಂಡವಿ ನದಿಯಲ್ಲಿ ದೊರೆತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭಾನುವಾರ ಕಾರಿನಲ್ಲಿ ಬಂದ ಅಪರಿಚಿತರು ಹಣಕೋಣದ ವಿನಾಯಕ ನಾಯ್ಕ ಅವರ ಮನೆಗೆ ನುಗ್ಗಿ ತಲ್ವಾರ್, ಚಾಕು ಹಾಗೂ ರಾಡ್ ಬಳಸಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಕಾರಿನ ಜಾಡು ಹಿಡಿದ ಪೊಲೀಸರು ತನಿಖೆಗಿಳಿದಾಗ ಗೋವಾದಲ್ಲಿ ಉದ್ಯಮಿಯಾಗಿರುವ ಗುರುಪ್ರಸಾದ ರಾಣೆ ಎಂಬವರು ಪರಿಚಿತರಿಂದ ಕಾರನ್ನು ಪಡೆದಿದ್ದಾಗಿ ತಿಳಿದುಬಂತು. ಪೊಲೀಸರು ಮೊಬೈಲ್ ಲೊಕೇಶನ್ ಜಾಡು ಹಿಡಿದು ತನಿಖೆಗಿಳಿದರು. ಪರಾರಿಯಾಗುತ್ತಿದ್ದ ಇಬ್ಬರು ದೆಹಲಿ ವಿಮಾನ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದರು. ಮತ್ತೊಬ್ಬ ಆರೋಪಿ ಮಡಗಾಂವದಲ್ಲಿ ಸಿಕ್ಕುಬಿದ್ದಿದ್ದಾನೆ.ಗುರುಪ್ರಸಾದ ರಾಣೆ ವೈಯಕ್ತಿಕ ದ್ವೇಷದಿಂದ ವಿನಾಯಕ ನಾಯ್ಕ ಅವರನ್ನು ಹತ್ಯೆ ಮಾಡಿಸಿರುವುದು ಖಚಿತವಾಗಿದೆ. ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು, ತಾಂತ್ರಿಕ ಕುರುಹುಗಳನ್ನು ಬೆನ್ನೆಟ್ಟಿ ಸಿಪಿಐ ಕದ್ರಾ ನೇತೃತ್ವದ ತಂಡ ರೈಲ್ವೆ ಪೊಲೀಸ್, ದೆಹಲಿ ಪೊಲೀಸ್ ಅವರ ಸಹಾಯದೊಂದಿಗೆ ಮಂಗಳವಾರ ನವದೆಹಲಿಗೆ ತರಳಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿತರನ್ನು ವಶಕ್ಕೆ ಪಡೆದರು. ಈ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸ್ ತಂಡಕ್ಕೆ ಪೊಲೀಸ್ ಮಹಾನಿರ್ದೇಶಕ ಅಲೋಕಮೋಹನ್ ₹1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಬುಧವಾರ ರಾತ್ರಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೆಚ್ಚಿನ ಗುರುಗೆ ಶಿಷ್ಯರಿಂದ ‘ರಕ್ತ’ ತುಲಾಭಾರ!
ಮರ್ಯಾದೆಗೇಡು ಹತ್ಯೆಗೆ ದಲಿತ ಸಂಘಟನೆಗಳ ಕಿಚ್ಚು-18 ಮಂದಿ ವಿರುದ್ಧ ಎಫ್‌ಐಆರ್‌