ಹಳೆಯ ವಿದ್ಯಾರ್ಥಿಗಳು ರಕ್ತದಲ್ಲಿ ತುಲಾಭಾರ ಮಾಡಿ ತಮ್ಮ ಮೆಚ್ಚಿನ ಶಿಕ್ಷಕರ ಹುಟ್ಟುಹಬ್ಬ ಆಚರಿಸಿರುವ ಪ್ರಸಂಗ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಅಕ್ಕಿಆಲೂರಿನಲ್ಲಿ ನಡೆದಿದೆ. 33 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪಿ.ಆರ್.ಮಠ ಅವರ 80ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಹಾನಗಲ್ಲ : ಹಳೆಯ ವಿದ್ಯಾರ್ಥಿಗಳು ರಕ್ತದಲ್ಲಿ ತುಲಾಭಾರ ಮಾಡಿ ತಮ್ಮ ಮೆಚ್ಚಿನ ಶಿಕ್ಷಕರ ಹುಟ್ಟುಹಬ್ಬ ಆಚರಿಸಿರುವ ಪ್ರಸಂಗ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕು ಅಕ್ಕಿಆಲೂರಿನಲ್ಲಿ ನಡೆದಿದೆ. 33 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪಿ.ಆರ್.ಮಠ ಅವರ 80ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. 108 ಹಳೆಯ ಶಿಷ್ಯಂದಿರು ಸೇರಿ ಒಟ್ಟು 48 ಕೇಜಿ ರಕ್ತದಾನ ಮಾಡಿ ಅದರಲ್ಲಿಯೇ ತುಲಾಭಾರ ಮಾಡುವ ಮೂಲಕ ತಮ್ಮ ನೆಚ್ಚಿನ ಗುರುಗಳ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ಪಿ.ಆರ್.ಮಠ ಅವರು ನರಸಿಂಗರಾವ್ ದೇಸಾಯಿ ಪ್ರೌಢಶಾಲೆ ಹಾಗೂ ಇದೇ ಸಂಸ್ಥೆಯ ಸಿಂಧೂರ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರು.
ಅಕ್ಕಿಆಲೂರಿನ ಶ್ರೀದುಂಡಿಬಸವೇಶ್ವರ ಜನಪದ ಕಲಾ ಸಂಘ, ಪಿ.ಆರ್.ಮಠ ಶಿಷ್ಯ ಹಾಗೂ ಅಭಿಮಾನಿ ಬಳಗ, ಸ್ನೇಹ ಮೈತ್ರಿ ಬ್ಲಡ್ ಆರ್ಮಿ, ಜಿಲ್ಲಾ ರಕ್ತನಿಧಿ ಕೇಂದ್ರ ಹಿಮ್ಸ್ ಹಾವೇರಿ ಇವರು ಸಂಯುಕ್ತವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ 108 ಜನರು ರಕ್ತದಾನ ಮಾಡಿದರು. ಒಟ್ಟು 48 ಕೇಜಿ ರಕ್ತ ಸಂಗ್ರಹವಾಗಿದ್ದು, ಅದರಲ್ಲಿಯೇ ಗುರುಗಳಾದ ಪಿ.ಆರ್. ಮಠ ಅವರಿಗೆ ರಕ್ತ ತುಲಾಭಾರ ಮಾಡಲಾಯಿತು.
ಭವ್ಯ ಮೆರವಣಿಗೆ:
ಹನುಮಂತ ದೇವರ ದೇವಸ್ಥಾನದಿಂದ ದುಂಡಿಬಸವೇಶ್ವರ ದೇವಸ್ಥಾನದವರೆಗೆ ಪಿ.ಆರ್.ಮಠ ಗುರುಗಳ ಮೆರವಣಿಗೆ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿ.ಆರ್.ಮಠ, ವಿದ್ಯಾರ್ಥಿಗಳಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವುದು ಶಿಕ್ಷಕನ ಹೊಣೆ. ಅದರ ಪ್ರತಿಫಲ ಇಷ್ಟೊಂದು ಅಭೂತಪೂರ್ವ ಎಂದು ನನಗನಿಸಿರಲಿಲ್ಲ. ವಿದ್ಯಾರ್ಥಿಗಳಿಂದ ಎಲ್ಲಿಯೂ ಸಲ್ಲದ ಗೌರವ ಇಲ್ಲಿ ನನಗೆ ಸಂದಿದೆ. ನನ್ನ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ನೋಡುವ ಸೌಭಾಗ್ಯ ಮತ್ತು ರಕ್ತದಾನದ ಮೂಲಕ ನನ್ನ ಹುಟ್ಟುಹಬ್ಬ ಆಚರಿಸಿದ್ದು ನನಗೆ ಖುಷಿ ತಂದಿದೆ ಎಂದರು.
ಗುರುವಿಗೆ ನೀಡಿದ ಅತ್ಯಂತ ದೊಡ್ಡ ಉಡುಗೊರೆ
ಅಕ್ಕಿಆಲೂರಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ಇದು ಒಬ್ಬ ಗುರುವಿಗೆ ನೀಡಿದ ಅತ್ಯಂತ ದೊಡ್ಡ ಉಡುಗೊರೆ. ವಿದ್ಯಾದಾನ ಬಿಟ್ಟರೆ ಬೇರೇನು ಅಪೇಕ್ಷಿಸದೆ ತಮ್ಮ ಬದುಕನ್ನು ಆದರ್ಶವಾಗಿ ಮುನ್ನಡೆಸುತ್ತಿರುವ ಪಿ.ಆರ್.ಮಠ ಗುರುಗಳು ಗುರುವಿನ ಮಹಾಗುರು ಎಂದರು.
ಶ್ರೀದುಂಡಿಬಸವೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೋರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುರುಸ್ಥಾನಕ್ಕೆ ಗೌರವ ತಂದುಕೊಟ್ಟು, ಸರಳ ಜೀವನದ ಮೂಲಕ ಮಾದರಿಯಾಗಿ, ಜೀವನ ಪೂರ್ತಿ ಬ್ರಹ್ಮಚರ್ಯ ಆಚರಿಸಿದ ಹಿರಿಮೆ ಪಿ.ಆರ್. ಮಠ ಗುರುಗಳವರದು. ಅವರ ಆದರ್ಶ ಅವರ ಎಲ್ಲ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಉತ್ತಮ ಜೀವನಕ್ಕೆ ದಾರಿಯಾಗಿದೆ ಎಂದರು.
